ಬೆಂಗಳೂರು: ಡ್ರಗ್ಸ್ ಜಾಲದ ವ್ಯಾಪ್ತಿ ಚಪ್ಪಲಿ, ಕಣ್ಣಿನ ಕಾಡಿಗೆಗೂ ವ್ಯಾಪಿಸಿದೆ! ಈ ಪ್ರಕರಣದ ಜಾಡು ಹಿಡಿದು ಕಾಡಿಗೆ ಮತ್ತು ಚಪ್ಪಲಿಯನ್ನು ಪರಿಶೀಲಿಸಿದ ಕಸ್ಟಮ್ ಅಧಿಕಾರಿಗಳ ಕೈಗೆ ಬರೋಬ್ಬರಿ ಮೂವತ್ತಾರೂವರೆ ಲಕ್ಷ ಮೌಲ್ಯದ ಡ್ರಗ್ಸ್ ಸಿಕ್ಕಿದೆ.
ಹೌದು, ವಿದೇಶದಿಂದ ಕೋರಿಯರ್ನಲ್ಲಿ ಚಪ್ಪಲಿ ಮತ್ತು ಸೌಂದರ್ಯ ವರ್ಧಕದಲ್ಲಿ ಬಚ್ಚಿಟ್ಟು ಕಳುಹಿಸುತ್ತಿದ್ದ ಡ್ರಗ್ಸ್ಅನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ದಕ್ಷಿಣ ಆಫ್ರಿಕಾದಿಂದ ಕೋರಿಯರ್ನಲ್ಲಿ ಬಂದಿದ್ದ ಐದು ಜೊತೆ ಲೇಡಿಸ್ ಚಪ್ಪಲಿಗಳನ್ನು ಸ್ಕ್ಯಾನಿಂಗ್ ಮಾಡಿದಾಗ ಒಳಗೆ ಅನುಮಾನಾಸ್ಪದ ವಸ್ತು ಬಚ್ಚಿಟ್ಟಿರುವ ಬಗ್ಗೆ ಕೆಐಎ ಕಸ್ಟಮ್ ಅಧಿಕಾರಿಗಳಿಗೆ ಶಂಕೆ ವ್ಯಕ್ತವಾಗಿದೆ. ತಕ್ಷಣ ಕೋರಿಯರ್ ಬಾಕ್ಸ್ ಅನ್ನು ವಶಕ್ಕೆ ಪಡೆದು ಪ್ರತಿಯೊಂದು ಚಪ್ಪಲಿಯನ್ನೂ ಕತ್ತರಿಸಿ ನೋಡಿದಾಗ 490 ಗ್ರಾಂ ಮೆಥಾಕ್ವಾಲೋನ್ ಎಂಬ ಡ್ರಗ್ಸ್ ಪತ್ತೆಯಾಗಿದೆ. ಇದರ ಬೆಲೆ ಅಂದಾಜು 24.50 ಲಕ್ಷ ರೂಪಾಯಿ!
ಮತ್ತೊಂದು ಪ್ರಕರಣದಲ್ಲಿ ಕಣ್ಣಿನ ಕಾಡಿಗೆಯಲ್ಲೂ ಡ್ರಗ್ಸ್ ಅನ್ನು ಮರೆಮಾಚಿ ಆಫ್ರಿಕಾದಿಂದ ಕೊರಿಯರ್ನಲ್ಲಿ ಕೆಐಎಗೆ ಕಳುಹಿಸಿದ್ದರು. ಇದನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ 241 ಗ್ರಾಂ ಡ್ರಗ್ಸ್ ಪತ್ತೆಯಾಗಿದೆ. ಇದರ ಬೆಲೆ 12 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಡಾರ್ಕ್ ವೆಬ್ಸೈಟ್ನಲ್ಲಿ ಡ್ರಗ್ಸ್ ಬುಕ್ ಮಾಡಿ ಅನಾಮಧೇಯ ವ್ಯಕ್ತಿಗಳ ಹೆಸರಿನಲ್ಲಿ ಕೊರಿಯರ್ ಕಳುಹಿಸುತ್ತಾರೆ. ವಿಮಾನ ನಿಲ್ದಾಣದಿಂದ ಹೊರಬಂದಾಗ ಅದರ ಮೇಲೆ ನಿಗಾ ವಹಿಸುವ ಪೆಡ್ಲರ್ಗಳು ದಾರಿ ಮಧ್ಯದಲ್ಲಿಯೇ ಸ್ವೀಕರಿಸುತ್ತಾರೆ. ಆರೋಪಿಗಳ ಪತ್ತೆಗೂ ಬಲೆಬೀಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.