ನ್ಯೂಸ್

ಮುಂದುವರೆದ ಡ್ರಗ್ಸ್​ ಕೇಸ್​ ತನಿಖೆ... ಯುವ ನಟಿಗೆ ಎನ್​ಸಿಬಿ ಸಮನ್ಸ್​!

ಮುಂಬೈ: ಅಕ್ಟೋಬರ್ 2 ರಂದು ಕಾರ್ಡೆಲಿಯ ಕ್ರೂಸ್​ ಶಿಪ್​ನಲ್ಲಿ ನಡೆಯುತ್ತಿದ್ದ ಡ್ರಗ್ಸ್​ ಪಾರ್ಟಿಯ ಮೇಲೆ ದಾಳಿ ನಡೆಸಿದ್ದರ ಮುಂದುವರಿದ ಭಾಗವಾಗಿ ಇಂದು ನಾರ್ಕೋಟಿಕ್ಸ್​ ಕಂಟ್ರೋಲ್ ಬ್ಯೂರೋ(ಎನ್​ಸಿಬಿ) ತಂಡಗಳು ಮುಂಬೈನ ಅಂಧೇರಿಯಲ್ಲಿ ದಾಳಿ ನಡೆಸಿವೆ. ಕ್ರೂಸ್​ ಪ್ರಕರಣದ ಆರೋಪಿಯೋರ್ವನಿಂದ ಸಿಕ್ಕ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆ ನಡೆಯುತ್ತಿದೆ ಎನ್ನಲಾಗಿದೆ.

ಕ್ರೂಸ್​ ದಾಳಿಯ ನಂತರ ಬಂಧಿಸಲ್ಪಟ್ಟ ಪುತ್ರ ಆರ್ಯನ್​ ಖಾನ್​ರನ್ನು ಜೈಲಿನಲ್ಲಿ ಭೇಟಿಯಾಗಿ ಬಂದ ಬೆನ್ನಲ್ಲೇ ನಟ ಶಾರುಖ್​ ಖಾನ್​ ಮನೆಗೆ ಎನ್​ಸಿಬಿ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಆರ್ಯನ್​ಗೆ ಸೇರಿದ ಇನ್ಯಾವುದೇ ಎಲೆಕ್ಟ್ರಾನಿಕ್​ ಉಪಕರಣಗಳಿದ್ದಲ್ಲಿ ಅವುಗಳನ್ನು ತನಿಖೆಗಾಗಿ ಎನ್​ಸಿಬಿ ವಶಕ್ಕೊಪ್ಪಿಸಬೇಕು ಎಂದು ನೋಟೀಸ್ ನೀಡಿದ್ದಾರೆ.

ಮತ್ತೊಂದೆಡೆ, ಉದಯೋನ್ಮುಖ ನಟಿಯಾದ ಅನನ್ಯ ಪಾಂಡೆ ಮನೆಗೆ ತೆರಳಿದ ಎನ್​ಸಿಬಿ ಅಧಿಕಾರಿಗಳು ಆಕೆಗೆ ಎನ್​ಸಿಬಿ ಮುಂದೆ ಮಧ್ಯಾಹ್ನ 2 ಗಂಟೆಗೆ ಮುನ್ನ ಹಾಜರಾಗಬೇಕೆಂದು ಸಮನ್ಸ್​ ನೀಡಿದ್ದಾರೆ. ಆರ್ಯನ್​ ಖಾನ್​ರ ವಾಟ್ಸಾಪ್​ ಚ್ಯಾಟ್​ನಲ್ಲಿ ಅನನ್ಯಾರೊಂದಿಗೆ ಡ್ರಗ್ಸ್​ ಬಗ್ಗೆ ಮಾತನಾಡಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಆಕೆಯ ಮೊಬೈಲ್​ ಫೋನನ್ನೂ ಎನ್​ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)