

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಇಂದು ಡ್ರಗ್ಸ್ ಕೇಸಲ್ಲಿ ಜೈಲಿನಲ್ಲಿರುವ ತಮ್ಮ ಮಗ ಆರ್ಯನ್ ಖಾನ್ಅನ್ನು ಭೇಟಿ ಮಾಡಿದರು. ಕ್ರೂಸ್ ಶಿಪ್ನಲ್ಲಿ ಡ್ರಗ್ಸ್ ಪಾರ್ಟಿ ಹಿನ್ನೆಲೆಯಲ್ಲಿ ಅ.3 ರಂದು ಬಂಧಿಸಲ್ಪಟ್ಟ ನಂತರ ಕುಟುಂಬದ ಸದಸ್ಯರನ್ನು ಆರ್ಯನ್ ಭೇಟಿ ಮಾಡಿದ್ದು ಇದೇ ಮೊದಲು ಎನ್ನಲಾಗಿದೆ.
ಭದ್ರತೆಯ ದೃಷ್ಟಿಯಿಂದ ಜೈಲಿನ ಪ್ರದೇಶದಲ್ಲಿ ಬೇರೆಯವರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದರೂ, ಖೈದಿಗಳ ಭೇಟಿಯ ಸಾಮಾನ್ಯ ನಿಯಮಗಳ ಅನುಸಾರವಾಗಿಯೇ ಶಾರುಖ್ ಖಾನ್ರ ಭೇಟಿಗೆ ಅವಕಾಶ ನೀಡಲಾಯಿತು. ಇನ್ಸ್ಸ್ಪೆಕ್ಟರ್ ಮಟ್ಟದ ಓರ್ವ ಅಧಿಕಾರಿ ಮತ್ತು ಐವರು ಇತರ ಜೈಲು ಸಿಬ್ಬಂದಿಯ ಉಪಸ್ಥಿತಿಯಲ್ಲಿ ಮಗನೊಂದಿಗೆ 18 ನಿಮಿಷಗಳ ಕಾಲ ಶಾರುಖ್ ಮಾತನಾಡಿದರು. ಜೈಲಿನ ನಿಯಮ ಮತ್ತು ಕೋವಿಡ್ ಪ್ರೋಟೋಕಾಲ್ನಂತೆ ಗ್ರಿಲ್ ಮತ್ತು ಗಾಜಿನ ಗೋಡೆಯಿಂದ ಬೇರ್ಪಟ್ಟ ಅಪ್ಪ-ಮಗ ಇಂಟರ್ಕಾಂ ಬಳಸಿ ಮಾತನಾಡಿದರು ಎನ್ನಲಾಗಿದೆ.
ನಿನ್ನೆಯ ದಿನ ಆರ್ಯನ್ ಖಾನ್ರ ಜಾಮೀನು ಅರ್ಜಿಯನ್ನು ಎನ್ಡಿಪಿಎಸ್ ವಿಶೇಷ ಕೋರ್ಟ್ ವಜಾಗೊಳಿಸಿತ್ತು. ಮುಂಬೈನ ಅರ್ಥರ್ ರೋಡ್ ಜೈಲಿನಲ್ಲಿ ಅದಾಗಲೇ 13 ದಿನ ಕಳೆದಿರುವ ಆರ್ಯನ್ ಪರವಾಗಿ ಆತನ ವಕೀಲರು ಶೀಘ್ರವೇ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. (ಏಜೆನ್ಸೀಸ್)