ಬೆಂಗಳೂರು: ಸ್ಯಾಂಡಲ್ವುಡ್ ನಟ ದಿಗಂತ್ ಮಂಚಾಲೆ, ಆಫ್ರಿಕಾದ ಶಂಕಿತ ಡ್ರಗ್ಸ್ ಪೆಡ್ಲರ್ ಜತೆ ಮೊಬೈಲ್ನಲ್ಲಿ ವಿನಿಮಯ ಮಾಡಿಕೊಂಡಿರುವ ಮೆಸೇಜ್ ಸೇರದಿಂತೆ ಕೆಲ ಸಂದೇಶಗಳನ್ನು ಡಿಲೀಟ್ ಮಾಡಿಕೊಂಡಿದ್ದಾರೆ ಎಂಬುದು ಸಿಸಿಬಿ ಪೊಲೀಸ್ ವಿಚಾರಣೆ ವೇಳೆ ಬಯಲಾಗಿದೆ.
ಡ್ರಗ್ಸ್ ಕೇಸ್ ಸಂಬಂಧ ಈಗಾಗಲೇ ಎರಡು ಬಾರಿ ಸಿಸಿಬಿ ವಿಚಾರಣೆ ಎದುರಿಸಿರುವ ದಿಗಂತ್ಗೆ ಅಗತ್ಯವಿದ್ದಲ್ಲಿ ಮತ್ತೊಮ್ಮೆ ವಿಚಾರಣೆಗೆ ಕರೆಯುವುದಾಗಿ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ ಬೆಂಗಳೂರಿನಿಂದ ಹೊರ ಹೋಗದಂತೆ ದಿಗಂತ್ಗೆ ಸೂಚಿಸಿರುವ ಅಧಿಕಾರಿಗಳು, ಶೂಟಿಂಗ್ ಹೊರತುಪಡಿಸಿ ಬೇರೆ ಕಡೆ ಪ್ರಯಾಣ ಕೈಗೊಳ್ಳುವುದಾದರೆ ಸಿಸಿಬಿಗೆ ತಿಳಿಸುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿರಿ ಡ್ರಗ್ಸ್ ಕೇಸ್; ಖ್ಯಾತ ನಿರೂಪಕಿ ಅನುಶ್ರೀಗೆ ಸಿಸಿಬಿ ಬುಲಾವ್
ಡ್ರಗ್ಸ್ ಕೇಸ್ನ ಪ್ರಮುಖ ಆರೋಪಿ ಶೇಖ್ ಫಾಝಿಲ್ನ ಕ್ಯಾಸಿನೋ ಪಾರ್ಟಿಗೆ ಬರುವಂತೆ ವಿಡಿಯೋ ಮೂಲಕ ನಟಿ ಐಂದ್ರಿತಾ ಗಣ್ಯರನ್ನು ಆಹ್ವಾನಿಸಿದ್ದರು. ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಡ್ರಗ್ಸ್ ಕೇಸ್ನಲ್ಲಿ ಫಾಝಿಲ್ ಹೆಸರು ಕೇಳಿಬರುತ್ತಿದ್ದಂತೆ ಈ ವಿಡಿಯೋ ಭಾರೀ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಅಂದರೆ ಸೆ.16ರಂದು ತಾರಾದಂಪತಿ ಐಂದ್ರಿತಾ ಮತ್ತು ದಿಗಂತ್ ಇಬ್ಬರಿಗೂ ಸಿಸಿಬಿ ನೋಟಿಸ್ ಜಾರಿ ಮಾಡಿತ್ತು. ಅದರಂತೆ ಅವರಿಬ್ಬರೂ ಸೆ.17ರಂದು ವಿಚಾರಣೆಗೆ ಹಾಜರ್ ಆಗಿದ್ದರು.
ಸೆ.23ರಂದು ಮತ್ತೊಮ್ಮೆ ನೋಟಿಸ್ ಜಾರಿ ಮಾಡಿದ್ದ ಸಿಸಿಬಿ, ದಿಗಂತ್ ಒಬ್ಬರನ್ನು ಮಾತ್ರ ವಿಚಾರಣೆಗೆ ಕರೆದಿತ್ತು. ಅದರಂತೆ ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಬಂದಿದ್ದ ದಿಗಂತ್ ಸತತ 3 ಗಂಟೆ ಕಾಲ ವಿಚಾರಣೆ ಎದುರಿಸಿದ್ದರು. ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ದಿಗಂತ್, ಮತ್ತೊಮ್ಮೆ ಕರೆದರೆ ವಿಚಾರಣೆಗೆ ಹಾಜರ್ ಆಗ್ತೀನಿ ಎಂದಿದ್ದರು.