ನ್ಯೂಸ್

ರೈಲು ನಿಲ್ದಾಣದಲ್ಲಿ 5 ಕೆಜಿ ಗಾಂಜಾ ಮಾರಲು ಬಂದವ ಪೊಲೀಸರ ಕೈಗೆ ಸಿಕ್ಕಿಬಿದ್ದ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಗಾಂಜಾ ಮಾರಾಟ ಜಾಲ ಸಕ್ರಿಯವಾಗಿದೆ. ನಿನ್ನೆ(ಬುಧವಾರ)ಯೂ ಒಬ್ಬ ಆರೋಪಿ ಪೊಲೀಸರ ಕೈಗೆ ಸಿಕ್ಕಿಬಿದಿದ್ದು, 5 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ.

ಆ.5ರಂದು ಕೆ.ಆರ್​.ಪುರ ರೈಲು ನಿಲ್ದಾಣದ ಬಳಿ ರಾಮಮೂತಿರ್ನಗರದ ನವೀನ್​(26) ಎಂಬಾತ ಗಾಂಜಾ ಮಾರಾಟ ಮಾಡುತ್ತಿದ್ದ. ಈ ವೇಳೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ 5 ಕೆಜಿ ಗಾಂಜಾ ಪತ್ತೆ ಆಗಿದೆ. ವಿದ್ಯಾರ್ಥಿಗಳು ಮತ್ತು ಯುವಕರೇ ಈತನ ಟಾರ್ಗೆಟ್​ ಆಗಿದ್ದು, ಅವರಿಗೆ ಗಾಂಜಾ ಮಾರಲು ಕಾಯುತ್ತಿದ್ದಾಗಿ ಪೊಲೀಸರ ಬಳಿ ಆತ ಬಾಯ್ಬಿಟ್ಟಿದ್ದಾನೆ.

ಕರೊನಾ ಲಾಕ್​ಡೌನ್ ಸಮಯವನ್ನೇ ಬಂಡವಾಳ‌ ಮಾಡಿಕೊಂಡಿದ್ದ ಸಮಾಜಘಾತುಕರು ಯುವಸಮೂಹಕ್ಕೆ ಅಕ್ರಮವಾಗಿ ಗಾಂಜಾ ಸರಬರಾಜು ಮಾಡುವಲ್ಲಿ ನಿರತರಾಗಿದ್ದರು. ಈ ವೇಳೆ ಡ್ರಗ್ಸ್​ ಜಾಲ ಸಕ್ರಿಯವಾಗಿತ್ತು. ಪೂರ್ವ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಕಳೆದ 12 ದಿನಗಳಲ್ಲಿ 98 ಪ್ರಕರಣ ದಾಖಲಿಸಿ 98 ಆರೋಪಿಗಳನ್ನು ಬಂಧಿಸಿದ್ದಾರೆ.