ಮುಂಬೈ: ಡ್ರಗ್ಸ್ ಸಾಗಾಟ ಪ್ರಕರಣದಲ್ಲಿ ನಟಿ ಮಮತಾ ಕುಲಕರ್ಣಿ ವಿರುದ್ಧದ ಎಫ್‌ಐಆರ್ ಅನ್ನು ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ರದ್ದುಗೊಳಿಸುವುದಾಗಿ ಬಾಂಬೆ ಹೈಕೋರ್ಟ್ ಹೇಳಿದೆ.
ನ್ಯಾಯಾಲಯವು ಇನ್ನೂ ವಿವರವಾದ ಆದೇಶವನ್ನು ನೀಡಬೇಕಾಗಿದೆ. ಆದರೆ ಪ್ರಕರಣವನ್ನು ರದ್ದುಗೊಳಿಸುವಂತೆ ಕುಲಕರ್ಣಿ ಅವರ ಮನವಿಯನ್ನು ಪರಿಗಣಿಸಲಾಗುವುದು ಎಂದು ಹೇಳಿದೆ.
ಮಾದಕ ದ್ರವ್ಯ ಸೇವನೆ ಪ್ರಕರಣವು 90 ರ ದಶಕದಲ್ಲಿ ಮಮತಾ ವಿರುದ್ಧ ಹೆಚ್ಚು ಪ್ರಚಾರಗೊಂಡು ಆಕೆಯ ಖ್ಯಾತಿಯನ್ನು ಹಾನಿಗೊಳಿಸಿತ್ತು. ಡ್ರಗ್ಸ್ ಹಗರಣದಲ್ಲಿ ತನ್ನನ್ನು ಬಲಿಪಶು ಮಾಡಲಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.
ಮಮತಾ ಮನವಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಮತ್ತು ಮಂಜುಷಾ ದೇಶಪಾಂಡೆ ಅವರ ಪೀಠವು, ಎಫ್‌ಐಆರ್‌ನಲ್ಲಿನ ಬರಿಯ ಆರೋಪಗಳನ್ನು ಹೊರತುಪಡಿಸಿ, ಪ್ರಕರಣವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ಗೆ ಯಾವುದೇ ಪುರಾವೆಗಳಿಲ್ಲ ಎಂಬುದನ್ನು ಗಮನಿಸಿತು.
2016 ರ ಜನವರಿಯಲ್ಲಿ ಕೀನ್ಯಾದ ಹೋಟೆಲ್‌ನಲ್ಲಿ ಮಾದಕ ದ್ರವ್ಯ ಮಾರಾಟದ ಆರೋಪಿಗಳಲ್ಲಿ ಒಬ್ಬರಾದ ವಿಕ್ಕಿ ಗೋಸ್ವಾಮಿ ಮತ್ತು ಇತರರೊಂದಿಗೆ ನಡೆದ ಪಾರ್ಟಿಯಲ್ಲಿ ಮಮತಾ ಭಾಗವಹಿಸಿದ್ದರು. ಕುಲಕರ್ಣಿ ಅವರ ಉಪಸ್ಥಿತಿಯನ್ನು ಆರೋಪಿ ಜೈನ್ ಹೇಳಿಕೆಯಂತೆ ಪ್ರಕರಣ ದಾಖಲಿಸಲಾಗಿತ್ತು.
ಆದರೆ ಮಮತಾ ಕುಲಕರ್ಣಿ ತಮ್ಮ ವಕೀಲ ಮಾಧವ್ ಥೋರಟ್ ಮೂಲಕ ಸಲ್ಲಿಸಿದ ಮನವಿಯಲ್ಲಿ, ತಮ್ಮ ವಿರುದ್ಧದ ಆರೋಪಗಳು "ಕೇವಲ ಸಹ-ಆರೋಪಿಗಳ ಹೇಳಿಕೆಯನ್ನು ಆಧರಿಸಿವೆ" ಮತ್ತು "ಯಾವುದೇ ಸ್ವರೂಪದ ಪುರಾವೆಗಳಿಲ್ಲ" ಎಂದು ವಾದಿಸಿದರು.
ಮಮತಾ ಬ್ಯಾಂಕ್ ಖಾತೆಗಳಲ್ಲಿ ಮಾದಕ ದ್ರವ್ಯಕ್ಕೆ ಸಂಬಂಧಿಸಿದಂತೆ ವಹಿವಾಟು ನಡೆದಿಲ್ಲ. ಪ್ರಾಸಿಕ್ಯೂಷನ್ ಸಹ ಇದನ್ನು ಸಾಬೀತುಪಡಿಸಿಲ್ಲ ಎಂದು ಥೋರಟ್ ವಾದಿಸಿದ್ದರು. ನ್ಯಾಯಾಲಯ ವಾದ- ವಿವಾದ ಆಲಿಸಿದ ನಂತರ ಮಮತಾ ವಿರುದ್ಧದ ಪ್ರಕರಣ ರದ್ದುಗೊಳಿಸುವ ತೀರ್ಮಾನಕ್ಕೆ ಬಂದಿತು.