ಬೆಂಗಳೂರು: ನಕಲಿ ವಿಜ್ಞಾನಿ ಎಂದು ಬಹಿರಂಗವಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗೆ ಗುರಿಯಾಗಿರುವ ಡ್ರೋನ್ ಪ್ರತಾಪ್, ಟೀಕಾಕಾರಿಗೆ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ಇಂದು ಟ್ವೀಟ್ ಮಾಡಿರುವ ಪ್ರತಾಪ್, ನನ್ನ ಪೇಟೆಂಟ್ ನೋಂದಣಿಯಾಗಲಿ ಆವಾಗ ಪ್ರತಾಪ್ ಯಾರೆಂಬುದು ಎಲ್ಲರಿಗೂ ತಿಳಿಯುತ್ತದೆ ಎಂದು ಸವಾಲು ಹಾಕಿದ್ದಾರೆ. ಅಲ್ಲದೆ, ನನ್ನ ಟ್ವೀಟ್ ಅನ್ನು ಹೆಚ್ಚು ರೀಟ್ವೀಟ್ ಮಾಡಿ ಎಂದು ನೆಟ್ಟಿಗರ ಬಳಿ ಮನವಿ ಮಾಡಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ ಮಾಧ್ಯಮ ವಿರುದ್ಧ ಕಿಡಿಕಾರಿರುವ ಪ್ರತಾಪ್, ನಾನು ತೊಂದರೆಯೇ ಅಲ್ಲ. ಹಸಿವು ಹೊಂದಿರುವ ಮಾಧ್ಯಮಗಳ ಬಹುದೊಡ್ಡ ಟಿಆರ್ಪಿಯ ಲಕ್ಷಣವೇ ನಾನು. ತೊಂದರೆ ಏನೆಂದರೆ, ಯಾವುದೇ ನ್ಯೂಸ್ ಪ್ರಕಟ ಮಾಡುವಾಗ ಮೂಲ ಸಂಶೋಧನೆಯನ್ನು ಸಹ ಮಾಡುವುದಿಲ್ಲ. ಕರ್ನಾಟಕದಲ್ಲಿ ತನಿಖಾ ಪತ್ರಿಕೋದ್ಯಮ ಸತ್ತಿದೆ. ಪ್ರತಾಪ್ ಬಗ್ಗೆ ತಿಳಿಯಲು ವೆಬ್ಸೈಟ್ ಒಂದು ನಡೆಸಿದ ಫ್ಯಾಕ್ಟ್ಚೆಕ್ ಅನ್ನು ಆಯ್ದುಕೊಂಡಿವೆ ಎಂದು ಪ್ರತಾಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮರುಬಳಕೆ ವಸ್ತುಗಳಿಂದ 600 ಡ್ರೋನ್ಗಳನ್ನು ತಯಾರಿಸಿದ್ದೇನೆ. ನನಗೆ ಸಾಕಷ್ಟು ಪ್ರಶಸ್ತಿಗಳು ಹಾಗೂ ವಿದೇಶಿ ಕಂಪನಿಗಳಿಂದ ಆಫರ್ ಬಂದಿವೆ ಎಂದು ಅನೇಕ ವೇದಿಕೆಗಳಲ್ಲಿ ಹೇಳಿದ್ದ ಡ್ರೋನ್ ಪ್ರತಾಪ್ ಬಣ್ಣ ಬಯಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಲೇ ಇದೆ. ತನ್ನ ಸಾಧನೆ ಸಾಬೀತು ಮಾಡಲು ಖಾಸಗಿ ಮಾಧ್ಯಮವೊಂದರ ಲೈವ್ ಶೋನಲ್ಲಿ ಬಂದಿದ್ದ ಪ್ರತಾಪ್, ಅಲ್ಲಿಯೂ ಸರಿಯಾಗಿ ಉತ್ತರ ನೀಡದೆ ಜನರನ್ನು ಮತ್ತಷ್ಟು ಗೊಂದಲಕ್ಕೀಡುಮಾಡಿದ್ದಾರೆ. ಇದೀಗ ಪ್ರತಾಪ್ ವಿರುದ್ಧ ದೂರುಗಳು ಸಹ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಏನಾಗುತ್ತದೋ ಕಾದು ನೋಡಬೇಕಿದೆ.