ನ್ಯೂಸ್

ಬಿಜೆಪಿಯಲ್ಲಿ ಸಂಪುಟ ಸಂಚಲನ: ಆಕಾಂಕ್ಷಿಗಳಿಂದ ಹೆಚ್ಚಿದ ಒತ್ತಡ; ಗರಿಗೆದರಿದ ರಾಜಕೀಯ ಚಟುವಟಿಕೆ

ಬೆಂಗಳೂರು: ಆಡಳಿತ ಪಕ್ಷ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಾಗುತ್ತಿದ್ದು, ಬಜೆಟ್ ಅಧಿವೇಶನಕ್ಕೆ ಮುನ್ನವೇ ಸಂಪುಟ ಪುನಾರಚನೆ ಆಗಬೇಕೆಂಬ ಶಾಸಕರ ಕೂಗು ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ಇನ್ನೊಂದೆಡೆ ಗುಪ್ತ ಸಭೆಗಳು ನಡೆಯುತ್ತಿರುವುದು ವರಿಷ್ಠರ ತಲೆನೋವು ಹೆಚ್ಚಿಸಿದೆ.

ಐದು ರಾಜ್ಯಗಳ ಚುನಾವಣೆ ನಂತರ ರಾಜ್ಯದಲ್ಲಿ ಸಂಪುಟ ಪುನಾರಚನೆ ಎಂಬ ಮಾತು ಬಿಜೆಪಿಯಲ್ಲಿ ಕೇಳಿ ಬರುತ್ತಿತ್ತು. ಆದರೆ ಅಲ್ಲಿಯ ತನಕ ಮುಂದೂಡದೇ ಕೂಡಲೇ ಮಾಡಬೇಕೆಂದು ಶಾಸಕರು ದನಿ ಎತ್ತಿದ್ದಾರೆ. ಇದರಿಂದ ಹಾಲಿ ಸಚಿವರಲ್ಲೂ ತಳಮಳ ಆರಂಭವಾಗಿದೆ.

ಸಚಿವ ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಉಳಿದಿವೆ. ಕೇವಲ ಆ ಸ್ಥಾನಗಳನ್ನು ಭರ್ತಿ ಮಾಡದೇ ಸಂಪುಟ ಸಮಗ್ರವಾಗಿ ಪುನಾರಚನೆಯಾಗಬೇಕು. 2006ರಿಂದ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಸಚಿವರಾಗಿರುವವರನ್ನು ಪಕ್ಷದ ಕೆಲಸಕ್ಕೆ ನಿಯೋಜನೆ ಮಾಡಿ, ಹೊಸಬರಿಗೆ ಅವಕಾಶ ನೀಡುವ ಮೂಲಕ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕೆಂಬುದು ಶಾಸಕರ ಬೇಡಿಕೆಯಾಗಿದೆ. ಪಕ್ಷದ ವರಿಷ್ಠರು ಸಂಪುಟ ವಿಸ್ತರಣೆಗೆ ಅನುಮತಿ ನೀಡುವರೋ? ಅಥವಾ ಪುನಾರಚನೆ ಮಾಡುವರೋ ಎಂಬುದು ಮಾತ್ರ ನಿಗೂಢವಾಗಿದೆ.

ವರಿಷ್ಠರ ಉದ್ದೇಶವೇನು?: ಸದ್ಯಕ್ಕೆ ರಾಜ್ಯದ ವಿಚಾರದಲ್ಲಿ ತಲೆಕೆಡಿಸಿಕೊಳ್ಳುವ ಹಂತದಲ್ಲಿ ಪಕ್ಷದ ವರಿಷ್ಠರಿಲ್ಲ. ಮಾರ್ಚ್ 10ಕ್ಕೆ ಐದು ರಾಜ್ಯಗಳ ಚುನಾವಣೆ ಮುಕ್ತಾಯವಾಗುತ್ತದೆ. ಅಲ್ಲಿಯ ತನಕ ವರಿಷ್ಠರ ಮುಂದೆ ಚುನಾವಣಾ ಕಾರ್ಯತಂತ್ರ ಹೊರತು ಬೇರೆ ವಿಚಾರಗಳಿಲ್ಲ. ಮುಖ್ಯಮಂತ್ರಿ ಹಾಗೂ ಪಕ್ಷದ ನಾಯಕರನ್ನು ಕರೆದು ಚರ್ಚೆ ನಡೆಸುವಷ್ಟು ಸಮಯಾವಕಾಶ ಸಹ ವರಿಷ್ಠರಿಗೆ ಇಲ್ಲ. ವರಿಷ್ಠರ ಒಪ್ಪಿಗೆ ಪಡೆಯದೇ ಒಂದು ಹೆಜ್ಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಡಿ ಇಡುವುದಿಲ್ಲ. ಸದ್ಯಕ್ಕೆ ಸರ್ಕಾರ ನಡೆದುಕೊಂಡು ಹೋಗುತ್ತಿದೆ. ಅನಗತ್ಯವಾಗಿ ತೊಂದರೆ ಮಾಡಿಕೊಳ್ಳುವುದು ಬೇಡ ಎಂಬುದು ವರಿಷ್ಠರ ಆಲೋಚನೆ.

ಶಾಸಕರ ಒತ್ತಡ: ಸಂಪುಟ ಸೇರುವ ಉದ್ದೇಶ ಹೊಂದಿರುವ ಶಾಸಕರು ರಾಜ್ಯದ ವಿವಿಧ ಭಾಗಗಳಲ್ಲಿ ಸೋಮವಾರ ದನಿ ಎತ್ತಿದ್ದಾರೆ. ಕೆಲ ಸಚಿವರು ಸಹ ಆತಂಕದಲ್ಲಿಯೇ ಮಾತನಾಡಿದ್ದಾರೆ. ಹೊನ್ನಾಳಿಯಲ್ಲಿ ಎಂ.ಪಿ. ರೇಣುಕಾಚಾರ್ಯ, ಕಲಬುರಗಿಯಲ್ಲಿ ರಾಜಕುಮಾರ್ ತೇಲ್ಕರ್, ಬೆಳಗಾವಿಯಲ್ಲಿ ಅಭಯ ಪಾಟೀಲ್, ಚಿತ್ರದುರ್ಗದಲ್ಲಿ ಜಿ.ಎಚ್. ತಿಪ್ಪಾರೆಡ್ಡಿ, ಬೆಂಗಳೂರಿನಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಂಪುಟ ಪುನಾರಚನೆಯ ಬಗ್ಗೆ ಮಾತನಾಡಿದ್ದಾರೆ.

ಬೆಳಗಾವಿಯಲ್ಲಿ ಸಚಿವ ಉಮೇಶ್ ಕತ್ತಿ ನೇತೃತ್ವದಲ್ಲಿ ನಡೆದಿರುವ ಶಾಸಕರ ಸಭೆಯಲ್ಲಿಯೂ ಕೆಲವರು ಸಂಪುಟ ಪುನಾರಚನೆಯ ಬಗ್ಗೆ ಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ಶಾಸಕ ರೇಣುಕಾಚಾರ್ಯ ಹಾಗೂ ಯತ್ನಾಳ್ ಸಭೆ ನಡೆಸಿದ್ದರು. ರಮೇಶ್ ಜಾರಕಿಹೊಳಿ ಸಹ ಆಪ್ತರೊಂದಿಗೆ ಚರ್ಚೆ ನಡೆಸಿದ್ದಾರೆ. ಇದೆಲ್ಲವೂ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಉದಾಹರಣೆಯಾಗಿದೆ. ಸಚಿವರ ಅಸಮಾಧಾನದ ನಡುವೆಯೇ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಲಾಗಿದೆ. ನಿಗಮ ಮತ್ತು ಮಂಡಳಿಗಳ ನೇಮಕಕ್ಕೂ ಸಮಿತಿ ಸಭೆ ನಡೆಸಿದೆ. ಇದು ಶಾಸಕರಿಗೆ ಸಮಾಧಾನ ಮಾಡುವ ಪ್ರಯತ್ನ ಎಂದೇ ಭಾವಿಸಲಾಗಿದೆ.

ನಿಗಮ-ಮಂಡಳಿ ಪಟ್ಟಿ ಸಿದ್ಧ, ಸಿಎಂ ಅಂಕಿತ ಬಾಕಿ: ನಿಗಮ-ಮಂಡಳಿಗಳಿಗೆ ಅಧ್ಯಕ್ಷರು, ನಿರ್ದೇಶಕರು, ಸದಸ್ಯರ ನೇಮಕ ಕುರಿತು ಸಚಿವ ಆರ್. ಅಶೋಕ್, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತ್ತು ಪಕ್ಷದ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಸೋಮವಾರ ರ್ಚಚಿಸಿ, ಪಟ್ಟಿ ಅಂತಿಮಗೊಳಿಸಿದ್ದಾರೆ. ಮಂಗಳವಾರ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ರೊಂದಿಗೂ ಪ್ರತ್ಯೇಕವಾಗಿ ಸಮಾಲೋಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಲಸಿಗರಲ್ಲೂ ತಳಮಳ: ಸಂಪುಟದಲ್ಲಿರುವ ವಲಸಿಗ ಸಚಿವರ ಮೇಲೆ ಮೂಲ ಬಿಜೆಪಿಗರ ಸಿಟ್ಟು ಇದೆ. ವಲಸಿಗರಲ್ಲಿ ಹಲವರು ಚುನಾವಣೆಯ ಸಂದರ್ಭದಲ್ಲಿ ವಾಪಸ್ ತೆರಳುತ್ತಾರೆ. ಆದ್ದರಿಂದ ಅಂತಹವರನ್ನು ಗುರುತಿಸಿ ಈಗಲೇ ಕಿತ್ತು ಹಾಕಿದರೆ ಪಕ್ಷ ಸಂಘಟನೆಗೂ ಉತ್ತಮ ಎಂಬ ಅಭಿಪ್ರಾಯ ಶಾಸಕರಲ್ಲಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜತೆಗೂ ಚರ್ಚೆ ನಡೆಸಿರುವ ಅನೇಕ ಶಾಸಕರು ಪುನಾರಚನೆಗೆ ಸಲಹೆ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ಬಿಎಸ್​ವೈ ಸದ್ಯಕ್ಕೆ ನಿರ್ಲಿಪ್ತರಾಗಿರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಪುಟದಲ್ಲಿ ನಾಲ್ಕು ಸ್ಥಾನ ಖಾಲಿಯಿರುವುದು ವರಿಷ್ಠರ ಗಮನದಲ್ಲಿದ್ದು, ಯಾವಾಗ ಏನು ಮಾಡಬೇಕೆಂಬುದನ್ನು ಅವರು ಗಮನಿಸಿ ಸೂಚನೆ ನೀಡುತ್ತಾರೆ. ಖಾಲಿಯಿರುವ ಸಚಿವ ಸ್ಥಾನಗಳ ಭರ್ತಿ ಕುರಿತು ವರಿಷ್ಠರು ಮಾತುಕತೆಗೆ ಕರೆದರೆ ದೆಹಲಿಗೆ ತೆರಳಿ ವಿವರ ಒದಗಿಸಲು ಸಿದ್ಧ. ಸಚಿವ ಸ್ಥಾನಗಳಿಗೆ ಆಕಾಂಕ್ಷಿಗಳಿರುವುದು ಸಹಜ. ಆ ಕುರಿತು ಬೇಡಿಕೆ ಮಂಡಿಸುವುದು ತಪ್ಪೇನಲ್ಲ. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

ಶಾಸಕರ ಒತ್ತಾಯ ಏನು?

  • ಚುನಾವಣೆ ಮುಗಿಯುವ ತನಕ ಕಾದರೆ ಬಜೆಟ್ ಅಧಿವೇಶನ ಬರುತ್ತದೆ
  • ಅಧಿವೇಶನ ಮುಗಿಯುವುದು ಮಾರ್ಚ್ ಕೊನೆಗೆ
  • ರಾಜ್ಯ ವಿಧಾನಸಭಾ ಚುನಾವಣೆಗೆ ಉಳಿದಿರುವುದು ಹದಿನೈದು ತಿಂಗಳು
  • ಪುನಾರಚನೆಗೆ ಮೂರು ತಿಂಗಳು ತಡವಾದರೆ ಉಳಿದ ಅವಧಿ ಒಂದು ವರ್ಷ ಮಾತ್ರ
  • ಮಾರ್ಚ್ ಕಳೆದ ನಂತರ ಇಡೀ ರಾಜ್ಯ ಚುನಾವಣೆ ಮೂಡ್​ಗೆ ತಿರುಗುತ್ತದೆ
  • ಆಗ ಸಚಿವ ಪದವಿ ಪಡೆದರೂ ಉಪಯೋಗವಿಲ್ಲ
  • ಸಂಪುಟದಲ್ಲಿ ಈಗ ಪ್ರಾದೇಶಿಕ ಸಮಾನತೆ ಹಾಗೂ ಸಾಮಾಜಿಕ ನ್ಯಾಯ ಇಲ್ಲ

ವರಿಷ್ಠರ ನಿಲುವೇನು?

  • ಸದ್ಯಕ್ಕೆ ಸರ್ಕಾರ ಸುಗಮವಾಗಿ ನಡೆಯುತ್ತಿದೆ
  • ಪುನಾರಚನೆ ಜೇನುಗೂಡಿಗೆ ಕಲ್ಲು ಹಾಕಿದಂತೆ
  • ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಅಸಮಾಧಾನ ಜಾಸ್ತಿಯಾಗುತ್ತದೆ
  • ಚುನಾವಣೆಯ ಹತ್ತಿರದಲ್ಲಿ ಅನಗತ್ಯ ವಿವಾದ ಬೇಡ
  • ಖಾಲಿ ಇರುವ ನಾಲ್ಕು ಸ್ಥಾನದಲ್ಲಿ ಒಂದು ಅಥವಾ ಎರಡು ಮಾತ್ರ ತುಂಬುವುದು
  • ಐದು ರಾಜ್ಯದ ಚುನಾವಣೆ ಮುಗಿದ ನಂತರ ಅಂತಿಮ ನಿರ್ಧಾರ ಕೈಗೊಳ್ಳುವುದು

ಹೈಕಮಾಂಡ್ ಕಡೆ ಬೊಟ್ಟು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವರಿಷ್ಠರ ಕಡೆ ಬೊಟ್ಟು ಮಾಡಿದ್ದಾರೆ. ವರಿಷ್ಠರು ಹೇಳಿದಂತೆ ಕೇಳುವುದಾಗಿ ಸ್ಪಷ್ಟಪಡಿಸಿದ್ದಾರೆ.

28 ಸಚಿವರಿಗೆ ಉಸ್ತುವಾರಿ: ಮುಖ್ಯಮಂತ್ರಿಯಾಗಿ 6 ತಿಂಗಳು ಸಮೀಪಿಸುತ್ತಿರುವ ನಡುವೆಯೇ ಬಸವರಾಜ ಬೊಮ್ಮಾಯಿ ಹೈಕಮಾಂಡ್ ಸೂಚನೆ ಯಂತೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ್ದಾರೆ. ಯಾವುದೇ ಸಚಿವರಿಗೆ ತವರು ಜಿಲ್ಲೆಯ ಉಸ್ತುವಾರಿ ನೀಡಲಾಗಿಲ್ಲ. ಉಸ್ತುವಾರಿ ಸಚಿವರ ನೇಮಕವಾಗದ ಕಾರಣ ಆಡಳಿತ ಯಂತ್ರ ನಿಷ್ಕ್ರಿಯವಾಗಿದ್ದು, ಕೆಡಿಪಿ ಸಭೆಗಳು ನಡೆಯದೇ ಅಭಿವೃದ್ಧಿ ಯೋಜನೆಗಳಿಗೆ ಹಿನ್ನಡೆಯಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದ್ದವು. ಪಕ್ಷದ ಕೆಲ ಮುಖಂಡರು ಈ ವಿಚಾರವನ್ನು ವರಿಷ್ಠರ ಗಮನಕ್ಕೂ ತಂದಿದ್ದರು. ಬೆಂಗಳೂರು ನಗರ ಜಿಲ್ಲೆಯ ಉಸ್ತುವಾರಿಯನ್ನು ಸಿಎಂ ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಶ್ರೀರಾಮುಲುಗೆ ಬಳ್ಳಾರಿ, ಕೆ.ಸುಧಾಕರ್​ಗೆ ಬೆಂಗಳೂರು ಗ್ರಾಮಾಂತರ, ಡಾ. ಸಿ.ಎನ್. ಅಶ್ವತ್ಥನಾರಾಯಣಗೆ ರಾಮನಗರ ಉಸ್ತುವಾರಿ ನೀಡಲಾಗಿದೆ.

ಚುನಾವಣೆ ಹತ್ತಿರ ಇರುವಾಗ ನಾಲ್ಕು ಸ್ಥಾನ ಖಾಲಿ ಇಟ್ಟುಕೊಳ್ಳುವುದು ಒಳ್ಳೆಯದಲ್ಲ. ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಿಭಾಯಿಸುತ್ತೇನೆ. | ಕೆ.ಎಸ್. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ   ಪ್ರತಿಯೊಂದು ಸಮುದಾಯಕ್ಕೂ ಸಂಪುಟದಲ್ಲಿ ಸ್ಥಾನ ಸಿಗಬೇಕಾಗಿದೆ. ಸಾಮಾಜಿಕ ನ್ಯಾಯವನ್ನು ಕಾಪಾಡಬೇಕಾಗಿದೆ. ನನ್ನ ಹಿರಿತನವನ್ನು ಪಕ್ಷ ಪರಿಗಣಿಸುತ್ತದೆ ಎಂಬ ವಿಶ್ವಾಸವಿದೆ. | ಜಿ.ಎಸ್. ತಿಪ್ಪಾರೆಡ್ಡಿ, ಚಿತ್ರದುರ್ಗ ಶಾಸಕ   ಮೈತ್ರಿ ಸರ್ಕಾರ ಬೀಳಿಸುವಲ್ಲಿ ಸಾಕಷ್ಟು ಶ್ರಮವಿದೆ. ಸಚಿವನಾಗುವ ಯೋಗ್ಯತೆ ಇಲ್ಲವೇ? | ಎಂ.ಪಿ. ರೇಣುಕಾಚಾರ್ಯ, ಹೊನ್ನಾಳಿ ಶಾಸಕ   ಕಲಬುರಗಿ ಭಾಗದಲ್ಲಿ ಯಾರೊಬ್ಬರೂ ಸಚಿವರಾಗಿಲ್ಲ. ನಾನು ಆಕಾಂಕ್ಷಿಯಾಗಿದ್ದೇನೆ. ವರಿಷ್ಠರು ಪರಿಗಣಿಸುತ್ತಾರೆ ಎಂಬ ವಿಶ್ವಾಸವಿದೆ. | ರಾಜಕುಮಾರ್ ಪಾಟೀಲ್ ತೇಲ್ಕರ್, ಸೇಡಂ ಶಾಸಕ   ಸಂಪುಟ ಪುನಾರಚನೆ ಈಗಲೇ ಮಾಡಲಿ. ಮತ್ತಷ್ಟು ದಿನ ತಡ ಮಾಡುವುದು ಸರಿಯಲ್ಲ. ಹೊಸ ಸಚಿವರಿಗೆ ಇಲಾಖೆ ಅರ್ಥ ಮಾಡಿಕೊಳ್ಳಲು ಕನಿಷ್ಠ ಆರು ತಿಂಗಳು ಬೇಕು. ಉಳಿದಿರುವ ಸಮಯ ಕಡಿಮೆ ಇದೆ. ನೂತನ ಸಚಿವರಿಗೆ ಸಾಮರ್ಥ್ಯ ಸಾಬೀತಿಗೆ ಸಮಯ ಸಾಲುವುದಿಲ್ಲ. ಆದ್ದರಿಂದ ತಕ್ಷಣ ಪುನಾರಚನೆಯಾಗಲಿ. | ಅಭಯ ಪಾಟೀಲ್, ಬೆಳಗಾವಿ ದಕ್ಷಿಣ ಶಾಸಕ   ರಮೇಶ್ ಜಾರಕಿಹೊಳಿ ಅವರನ್ನು ಕೂಡಲೇ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಬಿಜೆಪಿ ಸರ್ಕಾರ ಬರಲು ಅವರು ಕಾರಣಕರ್ತರಾಗಿದ್ದಾರೆ. | ಎಂ.ಟಿ.ಬಿ. ನಾಗರಾಜ್, ಪೌರಾಡಳಿತ ಸಚಿವ   ಮುಖ್ಯಮಂತ್ರಿ ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು. ನನ್ನನ್ನು ಸಂಪುಟದಿಂದ ಕೈ ಬಿಡುವುದಿಲ್ಲವೆಂಬ ನಂಬಿಕೆ ಇದೆ. | ಬಿ.ಎ. ಬಸವರಾಜ, ನಗರಾಭಿವೃದ್ಧಿ ಸಚಿವ