ನ್ಯೂಸ್

ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿ-2022: ಡಾ.ಓಂ ನರೇನ್ ಭಾರ್ಗವ ಸೇರಿ 22 ಮಂದಿಗೆ ರಾಷ್ಟ್ರಪತಿಯಿಂದ ಪ್ರಶಸ್ತಿ ಪ್ರದಾನ

ನವದೆಹಲಿ: ಕೇಂದ್ರ ಗಣಿ ಸಚಿವಾಲಯದಿಂದ ನೀಡಲಾಗುವ ಪ್ರತಿಷ್ಠಿತ ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿಗಳನ್ನು ಇಂದು ಪ್ರದಾನ ಮಾಡಲಾಯಿತು. ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಒಟ್ಟು 22 ಮಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು.

2022ನೇ ಸಾಲಿನ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ಕಲ್ಲಿದ್ದಲು, ಗಣಿ ಮತ್ತು ರೈಲ್ವೆ ರಾಜ್ಯ ಸಚಿವ ರಾವ್ ಸಾಹೇಬ್ ಪಾಟೀಲ್ ದಾನ್ವೆ ಮತ್ತು ಗಣಿ ಸಚಿವಾಲಯ ಹಾಗೂ ಭಾರತೀಯ ಭೂವಿಜ್ಞಾನ ಸರ್ವೇಕ್ಷಣಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ದೇಶಾದ್ಯಂತ ಕೆಲಸ ಮಾಡುವ ವೃತ್ತಿಪರರು ಮತ್ತು ಶಿಕ್ಷಣ ತಜ್ಞರು ಸೇರಿದಂತೆ ಇಪ್ಪತ್ತೆರಡು ಭೂವಿಜ್ಞಾನಿಗಳಿಗೆ ಮೂರು ವಿಭಾಗಗಳಲ್ಲಿ ಈ ಪ್ರಶಸ್ತಿಗಳನ್ನು ನೀಡಲಾಗಿದೆ. ಜೀವಮಾನ ಸಾಧನೆಗಾಗಿ ಒಂದು ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿ, ಒಂದು ರಾಷ್ಟ್ರೀಯ ಯುವ ಭೂವಿಜ್ಞಾನಿ ಪ್ರಶಸ್ತಿ ಹಾಗೂ ಭೂವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಸೇರಿ ಒಟ್ಟು 22 ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಡಾ.ಓಂ ನರೇನ್ ಭಾರ್ಗವ ಅವರಿಗೆ ಜೀವಮಾನದ ಸಾಧನೆಗಾಗಿ ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿಯನ್ನು ನೀಡಲಾಯಿತು. ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಅಮಿಯಾ ಕುಮಾರ್ ಸಮಲ್ ಅವರಿಗೆ ರಾಷ್ಟ್ರೀಯ ಯುವ ಭೂವಿಜ್ಞಾನಿ ಪ್ರಶಸ್ತಿ ನೀಡಲಾಯಿತು.

ಭೂವಿಜ್ಞಾನ ಕ್ಷೇತ್ರದಲ್ಲಿ ಶ್ರೇಷ್ಠತೆ, ಸಮರ್ಪಣೆ ಮತ್ತು ನಾವೀನ್ಯತೆ ಪ್ರದರ್ಶಿಸಿದ ಅಸಾಧಾರಣ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಖನಿಜ ಅನ್ವೇಷಣೆ ಮತ್ತು ಪರಿಶೋಧನೆ, ಮೂಲ ಭೂವಿಜ್ಞಾನ, ಅನ್ವಯಿಕ ಭೂವಿಜ್ಞಾನ ಮತ್ತು ಗಣಿಗಾರಿಕೆ, ಖನಿಜ ಪ್ರಯೋಜನ ಮತ್ತು ಸುಸ್ಥಿರ ಖನಿಜ ಅಭಿವೃದ್ಧಿ ಕ್ಷೇತ್ರವು ಈ ಪ್ರಶಸ್ತಿ ವ್ಯಾಪ್ತಿಯಲ್ಲಿ ಬರುತ್ತದೆ.

ಅಧ್ಯಕ್ಷ ತೆ ವಹಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಭೂ ವಿಜ್ಞಾನ ಕ್ಷೇತ್ರ ಬಹಳ ವಿಸ್ತಾರವಾಗಿದೆ. ಇದು ಭೂಕುಸಿತ, ಭೂಕಂಪ, ಪ್ರವಾಹ ಮತ್ತು ಸುನಾಮಿಯಂತಹ ನೈಸರ್ಗಿಕ ವಿಕೋಪಗಳ ಅಧ್ಯಯನವನ್ನು ಸಹ ಒಳಗೊಂಡಿದೆ. ಈ ವಿಷಯಗಳನ್ನು ಸಾರ್ವಜನಿಕ ಉತ್ತಮ ಭೂವಿಜ್ಞಾನಗಳು ಎಂದು ಕರೆಯಲಾಗುತ್ತದೆ. ಏಕೆಂದರೆ ಅವುಗಳು ಹೆಚ್ಚಿನ ಸಂಖ್ಯೆಯ ಜನರ ರಕ್ಷಣೆಗೆ ಉಪಯುಕ್ತವಾಗಿವೆ ಎಂದರು.

ಗಣಿಗಾರಿಕೆ ನಮ್ಮ ಆರ್ಥಿಕತೆಯ ಪ್ರಾಥಮಿಕ ಕ್ಷೇತ್ರವಾಗಿದೆ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಖನಿಜ ಅಭಿವೃದ್ಧಿಯು ಪ್ರಮುಖ ಕೊಡುಗೆ ಹೊಂದಿದೆ. ಕಳೆದ ಕೆಲವು ವರ್ಷಗಳಲ್ಲಿ, ಸರ್ಕಾರವು ಗಣಿಗಾರಿಕೆ ಕ್ಷೇತ್ರದಲ್ಲಿ ಅನೇಕ ಪ್ರಗತಿಪರ ಬದಲಾವಣೆಗಳನ್ನು ತಂದಿದೆ. ಈ ಬದಲಾವಣೆಗಳು ಗಣಿಗಾರಿಕೆ ಕ್ಷೇತ್ರದ ಸಾಮರ್ಥ್ಯ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುತ್ತಿವೆ ಎಂದರು.

ಭೂವಿಜ್ಞಾನಿ ಸಮುದಾಯವು ಮಾನವ ಕೇಂದ್ರಿತ ಗಣಿಗಾರಿಕೆಯ ದಿಕ್ಕಿನಲ್ಲಿ ಮುಂದುವರಿಯಬೇಕು. ಖನಿಜಗಳ ಸಮರ್ಥ ಬಳಕೆಯಲ್ಲಿ ಕೊಡುಗೆ ನೀಡುವ ಮೂಲಕ ಭಾರತದ ಆರ್ಥಿಕತೆಯನ್ನು ಬಲಪಡಿಸಲು ಭಾರತೀಯ ಭೂವಿಜ್ಞಾನಿಗಳನ್ನು ಅವರು ಶ್ಲಾಘಿಸಿದರು.