ನವದೆಹಲಿ: ಅಸ್ಸಾಂ ಮತ್ತು ಮಿಜೋರಾಂ ರಾಜ್ಯಗಳ ಗಡಿಭಾಗದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, 12ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಅನೇಕ ಮನೆ, ಅಂಗಡಿ ಮುಂಗಟ್ಟೆಗಳು ನಾಶವಾಗಿವೆ. ಎರಡೂ ರಾಜ್ಯಗಳು ಕೇಂದ್ರದ ನೆರವಿಗೆ ಮೊರೆ ಹೋಗಿವೆ. ಈ ಹಿಂಸಾಚಾರ ಬೆನ್ನಿಗೆ, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು ಎರಡೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ್ದಾರೆ.
ಗಡಿ ವಿವಾದ ಇತ್ಯರ್ಥಗೊಳಿಸುವುದಕ್ಕಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿರುವಾಗಲೇ ಅಸ್ಸಾಂನ ಗಡಿಯುದ್ದಕ್ಕೂ ನಡೆಸುತ್ತಿರುವ ಉಲ್ಲಂಘನೆಗಳ ಪರಿಣಾಮ ಈ ಹಿಂಸಾಚಾರ ಉಂಟಾಗಿದೆ ಎಂದು ಮಿಜೋರಾಂ ಆರೋಪಿಸಿದೆ. ಈ ನಡುವೆ, ಹಿಂಸಾಚಾರ ಭುಗಿಲೆದ್ದ ಲೈಲಾಪುರಕ್ಕೆ ಭೇಟಿ ನೀಡಿರುವ ಅಸ್ಸಾಂನ ಪರಿಸರ ಮತ್ತು ಅರಣ್ಯ ಸಚಿವ ಪರಿಮಲ್ ಶುಕ್ಲಬೈದ್ಯ, ಮಿಜೋರಾಂನಿಂದ ಆಗಮಿಸಿ ಅಲ್ಲಿನ ಮನೆ, ಸ್ಟಾಲ್ಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಮಿಜೋರಾಂನ ಥಿನ್ಘ್ಲುನ್, ಸಾಯಿಹಪುಯಿ 'v' ಮತ್ತು ವೈರೆನ್ಗ್ಟೆ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯವಸ್ತವಾಗಿದೆ. ಇಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಅಸ್ಸಾಂನ ಸಹಕಾರ ಬೇಕು. ಅಸ್ಸಾಂನ ಚಾಚರ್ ಮತ್ತು ಕರೀಮ್ಗಂಜ್ ಜಿಲ್ಲೆಗಳ ಅಧಿಕಾರಿಗಳು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡರೆ ಸಾಕಾಗುವುದು. ಎಲ್ಪಿಜಿ ಸೇರಿ ಅಗತ್ಯವಸ್ತುಗಳ ಸರಬರಾಜಿಗೆ ಅಡ್ಡಿ ಉಂಟುಮಾಡುತ್ತಿರುವುದೇ ಸಮಸ್ಯೆ ಕಾರಣ ಎಂದು ಮಿಜೋರಾಂ ಸರ್ಕಾರ ಹೇಳಿದೆ.
ಈ ನಡುವೆ, ಸೋಷಿಯಲ್ ಮೀಡಿಯಾಗಳಲ್ಲಿ ದಾರಿತಪ್ಪಿಸುವ ಮತ್ತು ದ್ವೇಷ ಉಂಟುಮಾಡುವ ಅನೇಕ ಸಂದೇಶಗಳು ರವಾನೆಯಾಗಿವೆ ಮತ್ತು ಆಗುತ್ತಿವೆ. ಇವೆಲ್ಲವೂ ಶಾಂತಿ -ಸುವ್ಯವಸ್ಥೆ ಹದಗೆಡುವುದಕ್ಕೆ ಕಾರಣವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)