ಹುಬ್ಬಳ್ಳಿ: ರಾಜ್ಯ ಸರ್ಕಾರ ಐದು ಗ್ಯಾರಂಟಿಗಳ ಘೋಷಣೆಯಾದ ಬೆನ್ನಲ್ಲೇ ಮದ್ಯಪ್ರಿಯರಿಗೆ ಶಾಕ್ ಆಗುವ ಸಾಧ್ಯತೆ ಕಂಡುಬಂದಿದೆ.
ಇದೀಗ ಐದು ಗ್ಯಾರಂಟಿಗಳ ಹೊರೆ ತಗ್ಗಿಸಲು ಅಬಕಾರಿ ಸುಂಕ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದ್ದು ಗ್ಯಾರಂಟಿ ಯೋಜನೆಗಳು ಘೋಷಣೆ ಆದ ಬೆನ್ನಲ್ಲೇ ಮದ್ಯಪ್ರಿಯರಿಗೆ ಶಾಕ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ಗ್ಯಾರಂಟಿ ಈಡೇರಿಕೆಗೆ ಬೇಕಾದ ಸಂಪನ್ಮೂಲ ಕ್ರೋಡೀಕರಣಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು ಇದರ ನೇರ ಹೊರೆಯನ್ನ ಮದ್ಯಪ್ರಿಯರ ಮೇಲೆ ಹೇರಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
ಇದರಿಂದ ರಾಜ್ಯದಲ್ಲಿ ಮದ್ಯದ ದರ ಶೇ 15ರಷ್ಟು ಹೆಚ್ಚಾಗಲಿದೆ ಎನ್ನಲಾಗುತ್ತಿದೆ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ, ಕೋವಿಡ್ ಕಾಲದಲ್ಲಿ ಶೇ 5ರಷ್ಟು ಅಬಕಾರಿ ಸುಂಕವನ್ನು ಹೆಚ್ಚಳ ಮಾಡಿತ್ತು.
ಈಗ ಮತ್ತೆ ಗ್ಯಾರಂಟಿ ಹೆಸರಿನಲ್ಲಿ ಮದ್ಯದ ದರ ಹೆಚ್ಚಳ ಮಾಡುವ ಯೋಚನೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಮದ್ಯಪ್ರಿಯರ ಮೇಲೆ ಈ ಹೊರೆಯನ್ನು ಹಾಕಲು ಸರ್ಕಾರ ಮುಂದಾಗಿದೆಯಾ ಎನ್ನುವ ವಿಚಾರ ಮುನ್ನೆಲೆಗೆ ಬರುತ್ತಿದೆ.
ರಾಜ್ಯ ಮದ್ಯ ಮಾರಾಟಗಾರರಿಗೆ ಹಿಂದಿನ ಬಿಜೆಪಿ ಸರ್ಕಾರ 35 ಸಾವಿರ ಕೋಟಿಯ ತೆರಿಗೆ ಸಂಗ್ರಹದ ಟಾರ್ಗೆಟ್ ನೀಡಿತ್ತು. ಆದರೆ, ಸಂಗ್ರಹ ಆಗುತ್ತಿದ್ದದ್ದು ಕೇವಲ 29 ಸಾವಿರ ಕೋಟಿ ರೂ. ಮಾತ್ರ. ಯಾವುದೇ ಗ್ಯಾರಂಟಿಗಳ ಭರವಸೆ ನೀಡದ ಬಿಜೆಪಿ ಸರ್ಕಾರವೇ ಅಬಕಾರಿ ಇಲಾಖೆಗೆ ಟಾರ್ಗೆಟ್ ನೀಡಿತ್ತು. ಹೀಗಿರುವಾಗ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ ಕಾಂಗ್ರೆಸ್ ಸರ್ಕಾರ ಸದ್ದಿಲ್ಲದೆ ಮದ್ಯದ ದರ ಹೆಚ್ಚಳಕ್ಕೆ ಚಿಂತನೆ ನಡೆಸುತ್ತಿದೆ ಎನ್ನಲಾಗುತ್ತಿದೆ.
ಮದ್ಯದ ದರ ಈಗಿರುವ ಪ್ರಸಕ್ತ ದರಕ್ಕಿಂತ ಶೇ. 15ರಷ್ಟು ಹೆಚ್ಚಾಗಲಿದೆ ಎನ್ನಲಾಗುತ್ತಿದ್ದು ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ಸಂಪನ್ಮೂಲ ಕ್ರೋಡೀಕರಿಸಲು ಅಬಕಾರಿ ಇಲಾಖೆಯನ್ನೇ ಹೆಚ್ಚಾಗಿ ನಂಬಿಕೊಂಡಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಈಗಿರುವ 35 ಸಾವಿರ ಕೋಟಿ ರೂ. ಮೌಲ್ಯದ ಮದ್ಯ ಮಾರಾಟದ ಗುರಿಯನ್ನು 65 ಸಾವಿರ ಕೋಟಿ ರೂ. ಮಾಡುವ ಇರಾದೆ ಹೊಂದಿದೆ ಎನ್ನಲಾಗುತ್ತಿದೆ.
ಈ ನಡುವೆ ಅಬಕಾರಿ ಸುಂಕವನ್ನ ಹೆಚ್ಚಳ ಮಾಡದಂತೆ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟ ಕೂಡ ಆಗ್ರಹ ಮಾಡುತ್ತಿದೆ. ಒಟ್ಟಿನಲ್ಲಿ ರಾಜ್ಯ ಸರ್ಕಾರದ ಚಿಂತನೆಗೆ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದಿಂದ ಕಳವಳ ವ್ಯಕ್ತವಾಗುತ್ತಿದೆ.