ಹೈದರಾಬಾದ್: ನಟಿ ಪೂನಂ ಕೌರ್ ಅವರನ್ನು ವಿಶೇಷವಾಗಿ ಪರಿಚಯ ಅಗತ್ಯವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅವರು ತುಂಬಾ ಸಕ್ರಿಯರಾಗಿರುತ್ತಾರೆ. ದೇಶದ ಅನೇಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದರಲ್ಲಿ ಸದಾ ಮುಂದಿರುತ್ತಾರೆ. ಚಿತ್ರರಂಗದಲ್ಲಿ ಮಾತ್ರವಲ್ಲ ರಾಜಕೀಯದಲ್ಲಿ ನಡೆಯುವ ವಿದ್ಯಾಮಾನಗಳ ಬಗ್ಗೆಯೂ ಪ್ರತಿಕ್ರಿಯಿಸುತ್ತಾರೆ. ತ್ರಿವಿಕ್ರಮ್, ಪವನ್ ಕಲ್ಯಾಣ್ ಅವರನ್ನು ಸದಾ ಟೀಕಿಸುವುದು, ಸಿಎಂ ಜಗನ್ ಆಡಳಿತ ಚೆನ್ನಾಗಿದೆ ಎಂದು ಹೊಗಳುವುದು ಸಾಮಾನ್ಯವಾಗಿದೆ. ಇದೀಗ ಪೂನಂ ಕೌರ್ ಮತ್ತೊಮ್ಮೆ ಸೆನ್ಸೆಷನಲ್ ಕಾಮೆಂಟ್ಸ್ ಮಾಡಿದ್ದಾರೆ. ಸದ್ಯ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಕೆಯ ಮಾತುಗಳು ವೈರಲ್ ಆಗುತ್ತಿವೆ.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಎದುರಿಸುತ್ತಿರುವ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ನಟಿ ಪೂನಂ ಕೌರ್ ವಿಡಿಯೋ ಮೂಲಕ ಧ್ವನಿ ಎತ್ತಿದ್ದಾರೆ. ಜೆಡಿಎಸ್ ಪಕ್ಷದ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರು ಹಾಸನ ಕ್ಷೇತ್ರದ ಸಂಸದರಾಗಿದ್ದಾರೆ. ಸದ್ಯ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಹಾಸನ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಏಪ್ರಿಲ್ 26ರಂದು ಮತದಾನವೂ ನಡೆದಿದೆ. ಇದರ ನಡುವೆ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಸಹ ಹೊರಬಂದಿವೆ. ಈ ಪ್ರಕರಣ ಇದೀಗ ದೇಶಾದ್ಯಂತ ಭಾರಿ ಸಂಚಲನ ಉಂಟು ಮಾಡಿದೆ. ಮಹಿಳೆರಿಗೆ ಬೆದರಿಕೆ, ಲೈಂಗಿಕ ಕಿರುಕುಳ ಹಾಗೂ ಅಶ್ಲೀಲ ವಿಡಿಯೋ ಮಾಡಿರುವ ಆರೋಪದ ಮೇಲೆ ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೆ, ಈ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಎಸ್ಐಟಿಗೆ ವಹಿಸಿದೆ. ಇದರ ನಡುವೆ ಪ್ರಜ್ವಲ್ ಅವರು ಜರ್ಮನಿಗೆ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಘಟನೆಯ ಬಗ್ಗೆ ಇದೀಗ ನಟಿ ಪೂನಂ ಕೌರ್ ಪ್ರತಿಕ್ರಿಯಿಸಿದ್ದಾರೆ. 2800ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳಿವೆ. ಮಹಿಳೆಯರಿಗೆ ಬೆದರಿಕೆ ಹಾಕಿ, ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕೇಳಿಬಂದಿದೆ. ಆರೋಪಿ ಪ್ರಜ್ವಲ್ ಇದೀಗ ಜರ್ಮನಿಗೆ ಪರಾರಿಯಾಗಿದ್ದಾನೆ. ಹಣ ಮತ್ತು ರಾಜಕೀಯ ಪ್ರಭಾವ ಇದ್ದುದರಿಂದಲೇ ಸರ್ಕಾರ ಆತನಿಗೆ ಏನೂ ಮಾಡಿಲ್ಲ. ಹೀಗಾಗಿ ಪ್ರಜ್ವಲ್ ಜರ್ಮನಿಯಲ್ಲಿ ನೆಮ್ಮದಿಯಿಂದ ವಿಶ್ರಾಂತಿ ಪಡೆಯುತ್ತಿದ್ದಾನೆ. ಜನರು ಅವನ ವಿರುದ್ಧ ತಿರುಗಿ ಬೀಳೋವರೆಗೂ ಅವನನ್ನು ಶಿಕ್ಷಿಸಲು ಸಾಧ್ಯವಿಲ್ಲ ಎಂದು ಪೂನಂ ಕೌರ್ ಆಕ್ರೋಶ ಹೊರಹಾಕಿದ್ದಾರೆ.
ಜನರು ಇಂಥವರಿಗೆ ಮತ ಹಾಕಬೇಡಿ ಎಂದು ಮನವಿ ಮಾಡಿರುವ ಪೂನಂ ಕೌರ್, ಹೆಣ್ಣನ್ನು ಶಕ್ತಿ ಎಂದು ಪೂಜಿಸುವ ಈ ದೇಶದಲ್ಲಿ ಇಂತಹ ನೀಚರನ್ನು ಗೆಲ್ಲಿಸಬೇಕಾ? ಎಂದು ಪ್ರಶ್ನಿಸಿದ್ದಾರೆ. ತಪ್ಪು ಮಾಡಿದವರನ್ನು ಹಿಡಿಯಲು ಸಾಧ್ಯವಾಗದ ಈ ಸರ್ಕಾರ ನಮ್ಮನ್ನು ಹೇಗೆ ರಕ್ಷಿಸುತ್ತದೆ ಎಂಬುದನ್ನು ಒಮ್ಮೆ ಯೋಚಿಸಿ ಮತ ಹಾಕಿ ಎಂದು ಪೂನಂ ಕೌರ್ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಚುನಾವಣೆಯಲ್ಲಿ ಮಹಿಳೆಯರ ರಕ್ಷಣೆ ಮಾಡುವವರಿಗೆ ಮತ ನೀಡಿ. ಅನ್ಯಾಯ ಮಾಡುವವರಿಗೆ ಅಧಿಕಾರ ಕೊಡಬೇಡಿ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಹೆಣ್ಣನ್ನು ನೋಯಿಸುವವರು ರಾಜಕೀಯದಲ್ಲಿದ್ದರೆ ಪರಿಸ್ಥಿತಿ ತೀರಾ ಹದಗೆಡುತ್ತದೆ. ಈ ಪ್ರಜ್ವಲ್ ಅನ್ನು ಬಿಡಬೇಡಿ. ಪ್ರಾಣಿಗಳು ಕೂಡ ಇದನ್ನು ಮಾಡುವುದಿಲ್ಲ. ನಾವು ರಾಮರಾಜ್ಯದ ಕಡೆಗೆ ಹೋಗುತ್ತಿದ್ದೇವೆಯೇ? ಅಥವಾ ನಾವು ರಾವಣನ ಸಾಮ್ರಾಜ್ಯದ ಕಡೆಗೆ ಹೋಗುತ್ತಿದ್ದೇವೆಯೇ? ಎಂದು ಪ್ರಶ್ನಿಸುವ ಮೂಲಕ ಪ್ರಜ್ವಲ್ ರೇವಣ್ಣರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ಪೂನಂ ಕೌರ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. (ಏಜೆನ್ಸೀಸ್)