ನನಗೆ ಮೂರೇ ನಿಮಿಷ ಸಾಕು! ಕಾಸ್ಟಿಂಗ್​ ಕೌಚ್​ ಬಗ್ಗೆ ಸ್ಪೋಟಕ ಹೇಳಿಕೆ ನೀಡಿದ ನಟಿ ಅನಸೂಯ

Anasuya
Published on

ಹೈದರಾಬಾದ್​: ಈಗಾಗಲೇ ಸಾಕಷ್ಟು ನಟಿಯರು ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುವ ಕಾಸ್ಟಿಂಗ್​ ಕೌಚ್​ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕರು, ನಟರು ಹಾಗೂ ನಿರ್ಮಾಪಕರು ಅವಕಾಶದ ಹೆಸರಿನಲ್ಲಿ ತಮ್ಮ ಬಯಕೆಗಳನ್ನು ಈಡೇರಿಸುವಂತೆ ನಟಿಯರನ್ನು ಕೇಳುವುದು ಸಿನಿ ಇಂಡಸ್ಟ್ರಿಗೆ ಅಂಟಿಕೊಂಡಿರುವ ಶಾಪವಾಗಿದೆ. ಬಾಲಿವುಡ್​, ಟಾಲಿವುಡ್​, ಕಾಲಿವುಡ್​, ಸ್ಯಾಂಡಲ್​ವುಡ್​ ಮತ್ತು ಮಾಲಿವುಡ್​ನಲ್ಲಿ ನಡೆಯುವ ಕಾಸ್ಟಿಂಗ್​ ಕೌಚ್​ಗೆ ಅನೇಕ ಕಲಾವಿದೆಯರು ಸಂತ್ರಸ್ತೆಯರಾಗಿದ್ದಾರೆ. ಇನ್ನು ಕೆಲವರು ಅದನ್ನು ಎದುರಿಸಿದ್ದಾರೆ. ಸಾಕಷ್ಟು ನಟಿಯರು ತಮ್ಮ ಕಹಿ ಅನುಭವಗಳನ್ನು ಧೈರ್ಯವಾಗಿ ಹೇಳಿಕೊಂಡಿದ್ದು, ಇದೀಗ ಆ ಸಾಲಿಗೆ ಟಾಲಿವುಡ್​ನ ಖ್ಯಾತ ನಿರೂಪಕಿ ಹಾಗೂ ನಟಿ ಅನಸೂಯ ಭಾರಧ್ವಜ್​ ಸೇರಿಕೊಂಡಿದ್ದಾರೆ.

ಅಲ್ಲು ಅರ್ಜುನ್​ ನಟನೆಯ ಸೂಪರ್​ ಹಿಟ್​ ಪುಷ್ಪ ಚಿತ್ರದಲ್ಲಿ ದಾಕ್ಷಾಯಿಣಿ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದ ನಟಿ ಅನಸೂಯ ಟಾಲಿವುಡ್​ನಲ್ಲಿ ಸಿಕ್ಕಾಪಟ್ಟೆ ಖ್ಯಾತಿ ಗಳಿಸಿದ್ದಾರೆ. ನಿರೂಪಕಿಯಾಗಿ ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟ ಅನಸೂಯ ಇದೀಗ ನಟಿಯಾಗಿ ಮಿಂಚು ಹರಿಸುತ್ತಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಅನುಸೂಯ, ತಮ್ಮ ಗ್ಲಾಮರಸ್​ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯೇರಿಸುತ್ತಿರುತ್ತಾರೆ.

ಇದೀಗ ಅನಸೂಯ ಅವರು ಕಾಸ್ಟಿಂಗ್​ ಕೌಚ್​ ಬಗ್ಗೆ ಆಸಕ್ತಿದಾಯಕ ಕಾಮೆಂಟ್​ ಮಾಡಿದ್ದಾರೆ. ಸಿನಿಮಾ ಬಗ್ಗೆ ಮಾತನಾಡಲು ನನ್ನ ಬಳಿ ಯಾರಾದರೂ ಬಂದರೆ, ಮೂರೇ ನಿಮಿಷದಲ್ಲಿ ಅವರ ಉದ್ದೇಶ ಏನೆಂಬುದು ನನಗೆ ತಿಳಿಯುತ್ತದೆ. ನನ್ನಿಂದ ಏನನ್ನು ನಿರೀಕ್ಷೆ ಮಾಡುತ್ತಿದ್ದಾರೆ ಎಂಬುದು ಗೊತ್ತಾದ ಕೂಡಲೇ ನಾನು ನನ್ನ ಕುಟುಂಬ, ಮಕ್ಕಳು ಮತ್ತು ಗಂಡನ ಬಗ್ಗೆ ಮಾತನಾಡುತ್ತೇನೆ. ನಂತರ ಅವರು ಆ ವಿಚಾರವನ್ನು ಪ್ರಸ್ತಾಪಿಸುವುದಿಲ್ಲ. ನಾನು ಈ ರೀತಿಯಾಗಿ ಮ್ಯಾನೇಜ್​ ಮಾಡುತ್ತೇನೆ ಎಂದು ಅನಸೂಯ ಹೇಳಿದ್ದಾರೆ.

ನಾವೆಲ್ಲ ಒಂದು ಇಂಡಸ್ಟ್ರಿಯಲ್ಲಿ ಇದ್ದೇವೆ. ಇಲ್ಲಿ ಇದೆಲ್ಲ ಸಹಜವಾಗಿದೆ ಮತ್ತು ಇಂತಹ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಹಾಗಾಗಿ ಇಂತಹ ವ್ಯಕ್ತಿಗಳ ಜೊತೆಗಿನ ಪಯಣ ಅಷ್ಟಕ್ಕೇ ನಿಲ್ಲುವುದಿಲ್ಲ. ನಾವಿಲ್ಲಿ ಸ್ವಾಭಾವಿಕವಾಗಿ ನಟಿಸಬೇಕು ಮತ್ತು ಯಾವುದೇ ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಬೇಕೆಂದು ಇದೇ ಸಂದರ್ಭದಲ್ಲಿ ಅನಸೂಯಾ ಹೇಳಿದರು.

ಸಿನಿಮಾ ವಿಚಾರಕ್ಕೆ ಬಂದರೆ, ಅನಸೂಯ ಅವರು ಪ್ರಸ್ತುತ ಅನೇಕ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಪುಷ್ಪ-2 ಸಿನಿಮಾದ ಚಿತ್ರೀಕರಣಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ ಮತ್ತು ಕೃಷ್ಣ ವಂಶಿ ನಿರ್ದೇಶನದ ರಂಗ ಮಾರ್ತಾಂಡ ಸಿನಿಮಾದ ಪ್ರಮುಖ ಪಾತ್ರದಲ್ಲಿ ಅನಸೂಯ ನಟಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net