ನ್ಯೂಸ್

'ಹಾಗೆಲ್ಲ ಮಾತಾಡ್ಬೇಡಿ, ಯಾರಾದ್ರೂ ಸಿ.ಡಿ. ಮಾಡಿ ಬಿಟ್ಟಾರು'; ಜಿಲ್ಲಾಧಿಕಾರಿಗಳ ಜತೆ ಹಳ್ಳಿಯಲ್ಲಿ ಮಲಗುತ್ತೇವೆ ಎಂದವರಿಗೆ ಕಿವಿಮಾತು

ಬೆಂಗಳೂರು: ಗ್ರಾಮಗಳಲ್ಲಿನ ಸಮಸ್ಯೆಗಳನ್ನು ಅರಿಯುವ ಸಲುವಾಗಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಶಾಸಕರನ್ನು ಪರಿಗಣಿಸುವಂತೆ ವಿಧಾನಸಭೆ ಕಲಾಪದ ವೇಳೆ ಶಾಸಕರೆಲ್ಲ ಪಕ್ಷಾತೀತವಾಗಿ ಕಂದಾಯ ಸಚಿವರನ್ನು ಆಗ್ರಹಿಸಿದರು. ಹೀಗೆ ಗ್ರಾಮವಾಸ್ತವ್ಯದ ಕುರಿತ ಚರ್ಚೆ ಸದನ ಸ್ವಾರಸ್ಯವಾಗಿ ಪರಿಣಮಿಸಿದ್ದಲ್ಲದೆ, ಸಿಡಿ ವಿಚಾರದವರೆಗೂ ವ್ಯಾಪಿಸಿ, ನಗೆಯುಕ್ಕಿಸುವಂತೆ ಮಾಡಿತು.

ಬಜೆಟ್ ಮೇಲಿನ ಚರ್ಚೆ ವೇಳೆ ಜೆಡಿಎಸ್‌ನ ಶಿವಲಿಂಗೇಗೌಡ ಮಾತನಾಡುತ್ತ, ಕಂದಾಯ ಇಲಾಖೆಯಿಂದ 'ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆ' ಕಾರ್ಯಕ್ರಮ ಮಾಡಲಾಗುತ್ತಿದೆ. ಅದರಿಂದ ಗ್ರಾಮಗಳ ಸಮಸ್ಯೆಗೆ ಸ್ಥಳದಲ್ಲಿಯೇ ಪರಿಹಾರ ದೊರೆಯುತ್ತಿದೆ. ಆದರೆ, ಆ ಕಾರ್ಯಕ್ರಮಕ್ಕೆ ಶಾಸಕರನ್ನು ನಿರ್ಲಕ್ಷಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳು ತೆರಳುವ ಗ್ರಾಮಕ್ಕೆ ಶಾಸಕರನ್ನ ಆಹ್ವಾನಿಸಿದರೆ ನಾವೂ ಅವರೊಂದಿಗೆ ಗ್ರಾಮ ವಾಸ್ತವ್ಯ ಮಾಡುತ್ತೇವೆ. ಅದಕ್ಕೆ ಕಂದಾಯ ಸಚಿವರು ಹೊಸದೊಂದು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಅದಕ್ಕೆ ಮೂರೂ ಪಕ್ಷದ ಶಾಸಕರು ಧ್ವನಿಗೂಡಿಸಿದರು. ಜತೆಗೆ ಗ್ರಾಮವಾಸ್ತವ್ಯ ಸಂದರ್ಭದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಸಂಬಂಧಪಟ್ಟ ಸಂಸದರನ್ನು ಆಹ್ವಾನಿಸಲಾಗುತ್ತಿದೆ. ಆದರೆ, ಶಾಸಕರಿಗೆ ಆ ಬಗ್ಗೆ ಮಾಹಿತಿಯೇ ಇಲ್ಲ. ಇದರಿಂದ ಶಾಸಕರಿಗೆ ಬೆಲೆ ಇಲ್ಲದಂತಾಗುತ್ತಿದೆ ಎಂದು ಆರೋಪಿಸಿದರು.

ಅದಕ್ಕುತ್ತರಿಸಿದ ಕಂದಾಯ ಸಚಿವ ಆರ್.ಅಶೋಕ್, ಜಿಲ್ಲಾಧಿಕಾರಿಗಳು ಯಾವುದೇ ಪ್ರಭಾವಕ್ಕೊಳಗಾಗದೆ ಗ್ರಾಮ ವಾಸ್ತವ್ಯ ಮಾಡಿ, ಅಲ್ಲಿನ ಸಮಸ್ಯೆ ನಿವಾರಿಸಬೇಕು ಎನ್ನುವುದು ಕಾರ್ಯಕ್ರಮದ ಉದ್ದೇಶ. ಹೀಗಾಗಿ ಜನಪ್ರತಿನಿಧಿಗಳು ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಮಾತ್ರ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಶಾಸಕರು ಗ್ರಾಮ ವಾಸ್ತವ್ಯ ಮಾಡುತ್ತಾರೆ ಎಂದಾದರೆ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಅಲ್ಲದೆ, ಜನಪ್ರತಿನಿಧಿಗಳ ಬಗ್ಗೆ ಇರುವ ನಿರ್ಲಕ್ಷ್ಯ ನಿವಾರಿಸಲು, ಜಿಲ್ಲಾಧಿಕಾರಿಗಳಿಗೆ ಮತ್ತೊಮ್ಮೆ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು.

ಸಿಡಿ ಮಾಡ್ತಾರೆ ಹುಷಾರ್!

ಜಿಲ್ಲಾಧಿಕಾರಿಗಳೊಂದಿಗೆ ಹಳ್ಳಿಗಳಲ್ಲಿ ಮಲಗುತ್ತೇವೆ ಎಂದು ಶಿವಲಿಂಗೇಗೌಡ ಹೇಳುತ್ತಿದ್ದಂತೆ, ಬಿಜೆಪಿಯ ಆರಗ ಜ್ಞಾನೇಂದ್ರ ಮಧ್ಯಪ್ರವೇಶಿಸಿ, ಹಾಗೆಲ್ಲ ಮಾತನಾಡಬೇಡಿ. ಯಾರಾದರೂ ಸಿಡಿ ಮಾಡಿಬಿಟ್ಟಾರು ಎಂದು ಹಾಸ್ಯ ಮಾಡಿದರು. ಅದರಿಂದ ಕೊಂಚ ಸಿಟ್ಟಾದ ಶಿವಲಿಂಗೇಗೌಡ, ಸಿಡಿ ಮಾಡಲಿ ಬಿಡ್ರೀ. ನಾವು ಆ ರೀತಿ ಮಾಡಿದ್ದರೆ ಹೆದರಬೇಕು. ಇಲ್ಲದಿದ್ದರೆ ನಾವು ಯಾಕೆ ಯೋಚನೆ ಮಾಡಬೇಕು ಎಂದು ಹೇಳಿದರು.

ಇದನ್ನೂ ಓದಿ: ಗಂಡನನ್ನು ಕುರ್ಚಿಗೆ ಕಟ್ಟಿ, ಸೆಕ್ಸ್​ ಮಾಡಿ ಕೊಲೆ ಮಾಡಿದ ಐದನೇ ಹೆಂಡತಿ!ಜೆಡಿಎಸ್ ಶಾಸಕರ ಕಿತ್ತಾಟ: ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ವಿಚಾರವಾಗಿ ಚರ್ಚೆ ನಡೆಯುವಾಗ, ಜೆಡಿಎಸ್‌ನ ಕೆ. ಅನ್ನದಾನಿ, ಜಿಲ್ಲಾಧಿಕಾರಿಗಳು ಶಾಸಕರನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬಂತೆ ವಿವರಿಸುತ್ತಿದ್ದರು. ಆಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, 'ಸಾಕು ಬಿಡಿ. ಒಂದೇ ವಿಷಯ ಎಷ್ಟು ಚರ್ಚೆ ಮಾಡುತ್ತೀರಿ. ಕುಳಿತುಕೊಳ್ಳಿ..' ಎಂದು ಹೇಳಿದರು. ಆಗ ಜೆಡಿಎಸ್‌ನ ಮತ್ತೊಬ್ಬ ಶಾಸಕ ವೆಂಕಟರಾವ್ ನಾಡಗೌಡ, ಅನ್ನದಾನಿ ಕಡೆ ತಿರುಗಿ ಸಾಕು ಕುಳಿತುಕೊಳ್ಳಿ ಎಂದು ಹೇಳಿದರು. ಅದರಿಂದ ಸಿಟ್ಟಾದ ಅನ್ನದಾನಿ, 'ನೀವ್ಯಾರು ನನಗೆ ಸುಮ್ಮನಿರು ಎಂದು ಹೇಳುವುದಕ್ಕೆ. ಸ್ಪೀಕರ್ ಹೇಳುತ್ತಿದ್ದಾರೆ, ಅವರ ಮಾತನ್ನು ಕೇಳುತ್ತೇನೆ. ನನಗೆ ಹೇಳಲು ಬರಬೇಡಿ' ಎಂದು ದೊಡ್ಡ ಧ್ವನಿಯಲ್ಲಿ ಹೇಳಿದರು.