ನ್ಯೂಸ್

ಬಾಯ್​ಫ್ರೆಂಡ್​ ಇಲ್ಲದವರಿಗೆ ಕಾಲೇಜಿಗೆ ಪ್ರವೇಶವಿಲ್ಲ! ಪೊಲೀಸ್​ ಠಾಣೆ ಮೆಟ್ಟಿಲೇರಿದ ವಿವಿ

ಬೆಂಗಳೂರು: ಎಲ್ಲ ಹುಡುಗಿಯರು ಬಾಯ್​ಫ್ರೆಂಡ್​ ಹೊಂದಿರಬೇಕು. ಒಬ್ಬಂಟಿ ಇರುವ ಹುಡುಗಿಯರಿಗೆ ಕಾಲೇಜಿಗೆ ಪ್ರವೇಶ ಕಲ್ಪಿಸುವುದಿಲ್ಲ. ಕಾಲೇಜಿನಲ್ಲಿ ಓದಲು ಬರಬೇಕು ಅಂದ್ರೆ ನಿಮ್ಮ ಬಾಯ್​ಫ್ರೆಂಡ್​ ಜತೆಗೆ ನೀವಿರುವ ಫೋಟೋವನ್ನ ತೋರಿಸಬೇಕು..! ಈ ಅಂಶವುಳ್ಳ ಸುತ್ತೋಲೆಯನ್ನ ತಮಿಳುನಾಡಿನ ಎಸ್​ಆರ್​ಎಂ ವಿಶ್ವವಿದ್ಯಾಲಯದ ಹೆಸರಲ್ಲಿ ಹೊರಡಿಸಲಾಗಿದೆ.

ಈ ಸುದ್ದಿ ಕೇಳಿ ಕೇಳಿದಾಕ್ಷಣ ಅರೆ, ಇದೇನಿದು? ಓದೋ ವಯಸ್ಸಲ್ಲಿ ಪ್ರೀತಿ-ಗೀತಿ ಅಂತ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಬೇಕಿದ್ದ ವಿದ್ಯಾದೇಗುಲವೇ ಯುವತಿಯರಿಗೆ ಬಾಯ್​ಫ್ರೆಂಡ್​ ಕಡ್ಡಾಯ ಅನ್ನೋದಾ? ಇದೆಂತಹ ರೂಲ್ಸ್​, ಅವರಿಗೇನೂ ತಲೆಕೆಟ್ಟಿರಬೇಕು... ಎಂದು ಪಾಲಕರಾದಿಯಾಗಿ, ಸಾರ್ವಜನಿಕರೂ ಹೌಹಾರಿದ್ದಾರೆ. ಈ ಸುತ್ತೋಲೆ ಕಂಡ ಎಸ್​ಆರ್​ಎಂ ವಿಶ್ವವಿದ್ಯಾಲಯದ ಸಿಬ್ಬಂದಿಯೂ ಸಿಟ್ಟಾಗಿದ್ದಾರೆ. ಅಂದಹಾಗೆ ಈ ಸುತ್ತೋಲೆಯನ್ನ ವಾಸ್ತವದಲ್ಲಿ ವಿವಿ ಹೊರಡಿಸಿಯೇ ಇಲ್ಲ. ಇದನ್ನೂ ಓದಿರಿ ಬೆಣ್ಣೆಹೊಳೆ ಫಾಲ್ಸ್​ ಬಳಿ ಪ್ರೇಮಿಗಳಿಬ್ಬರ ಶವ ಸಿಕ್ಕ ಮರುದಿನವೇ ಪ್ರಿಯಕರನ ತಂದೆ ಸಾವು! ಮನಕಲಕುತ್ತೆ ಸಾವಿನ ಕಾರಣ

ಯಾರೋ ಕಿಡಿಗೇಡಿಗಳು ವಿವಿಯ ಲೆಟರ್​ ಹೆಡ್​ ದುರ್ಬಳಕೆ ಮಾಡಿಕೊಂಡು 'ಎಲ್ಲ ವಿದ್ಯಾರ್ಥಿನಿಯರೂ ಬಾಯ್​ಫ್ರೆಂಡ್​ ಹೊಂದಿರಬೇಕು. ವಿದ್ಯಾರ್ಥಿನಿಯರ ಸುರಕ್ಷತೆ ಹಿತದೃಷ್ಟಿಯಿಂದ ಬಾಯ್​ಫ್ರೆಂಡ್​ನ ಅವಶ್ಯಕತೆ ಇದೆ. ಒಬ್ಬಂಟಿ ಇದ್ದರೆ ಅವರಿಗೆ ಪ್ರವೇಶ ಕಲ್ಪಿಸುವುದಿಲ್ಲ. ಕಾಲೇಜು ಪ್ರವೇಶಿಸಬೇಕಾದಲ್ಲಿ ಇತ್ತೀಚಿಗೆ ಬಾಯ್​ಫ್ರೆಂಡ್​ ಜತೆಗೆ ತೆಗೆದುಕೊಂಡ ಫೋಟೋ ತೋರಿಸಬೇಕು' ಎಂದು ಪತ್ರದಲ್ಲಿ ಹೇಳಲಾಗಿದೆ. ಇದಕ್ಕೆ ವಿವಿಯ ಕುಲಸಚಿವರ ಸಹಿ ಕೂಡ ಇದೆ.

ಕಾಲೇಜು ಮರು ಪ್ರಾರಂಭ ಮತ್ತಿತರ ವಿಚಾರಗಳನ್ನು ತಿಳಿಸಲು ಇ-ಮೇಲ್​ ಕಳುಹಿಸುತ್ತೇವೆ. ಅದನ್ನೇ ಕೆಲವು ಕಿಡಿಗೇಡಿಗಳು ದುರುಪಯೋಗ ಮಾಡಿಕೊಂಡು ವಿವಿಯ ಮರ್ಯಾದೆ ಕಳೆಯಲು ಕೆಲ ಕಿಡಿಗೇಡಿಗಳು ಈ ರೀತಿಯ ನಕಲು ಸುತ್ತೋಲೆ ಸೃಷ್ಟಿಸಿದ್ದಾರೆ. ಯಾರೂ ಇದರ ಬಗ್ಗೆ ತಲೆಕೊಡಿಸಿಕೊಳ್ಳಬೇಡಿ ಎಂದು ವಿವಿಯ ಕುಲಸಚಿವರು ಮನವಿ ಮಾಡಿದ್ದಾರೆ.

ನಕಲಿ ಸುತ್ತೋಲೆ ಹೊರಡಿಸಿ ಎಲ್ಲ ಕಡೆ ವೈರಲ್​ ಮಾಡಿರುವವರನ್ನು ಪತ್ತೆ ಹಚ್ಚಿ ಶಿಸ್ತುಕ್ರಮ ಜರುಗಿಸಬೇಕೆಂದು ವಿವಿಯು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದೆ.