ನ್ಯೂಸ್

ಇದು ಅಮಲಿಳಿಸೋ ಸುದ್ದಿ; 'ಫಿಗರ್' ಬೇಕೆಂದರೆ 'ಡ್ರಿಂಕ್ಸ್' ಬಿಡಿ..!

ಬೆಂಗಳೂರು: ಕುಡಿತ ಕೆಟ್ಟದ್ದೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಈಗೀಗ ಸೋಷಿಯಲ್ ಡ್ರಿಂಕಿಂಗ್ ಹೆಸರಲ್ಲಿ ವಾರಕ್ಕೊಮ್ಮೆಯಾದರೂ ಸ್ನೇಹಿತರೊಡಗೂಡಿ ಕುಡಿಯುವುದು ಸಾಮಾನ್ಯವಾಗಿಬಿಟ್ಟಿದೆ. ಆದರೆ, ನೀವು ಫಿಟ್ನೆಸ್​ಗಾಗಿ ವ್ಯಾಯಾಮ, ಡಯಟ್ ಮಾಡುತ್ತಿದ್ದರೆ, ಬಾಡಿ ಬಿಲ್ಡಿಂಗ್ ಖಯಾಲಿ ಹೊಂದಿದ್ದರೆ, ಜಾಲಿ ಪಾರ್ಟಿ ಮಾಡುವ ಮೊದಲು ಒಮ್ಮೆ ಯೋಚಿಸಿ. ಯಾಕೆಂದರೆ ಇತ್ತೀಚಿನ ಅಧ್ಯಯನದ ಪ್ರಕಾರ ಸ್ವಲ್ಪ ಪ್ರಮಾಣದ ಮದ್ಯಸೇವನೆಯು ಕೂಡ ದೇಹದ ಸ್ನಾಯುಗಳ ಆರೋಗ್ಯಕ್ಕೆ ಊಹೆಗೆ ಮೀರಿದ ಹಾನಿ ಮಾಡಬಲ್ಲದು.

1. ಮದ್ಯಸೇವನೆ ನಮ್ಮ ದೇಹದಲ್ಲಿ ಪ್ರೊಟೀನ್ ಸಿಂಥೆಸಿಸ್ಅನ್ನು ಶೇ.20 ರವರೆಗೆ ಕಡಿಮೆ ಮಾಡಬಹುದು. ದೇಹದ ಸ್ನಾಯುಗಳ ಆರೈಕೆಗೆ ಪ್ರೊಟೀನ್ ಹೆಚ್ಚಿರುವ ಆಹಾರವನ್ನೇ ತೆಗೆದುಕೊಳ್ಳುವುದು ಹಲವರ ರೂಢಿ. ಆದರೆ ಈ ಪ್ರೊಟೀನ್ ಸರಿಯಾಗಿ ನಿಮ್ಮ ದೇಹಕ್ಕೆ ಸೇರುವುದನ್ನು ಆಲ್ಕೊಹಾಲ್ ತಡೆಯುತ್ತದೆ.

2. ಮದ್ಯಪಾನದಿಂದ ದೇಹದಲ್ಲಿ ಟೆಸ್ಟೊಸ್ಟಿರಾನ್ ಹಾರ್ಮೋನ್​ನ ಮಟ್ಟ ಇಳಿಯುತ್ತದೆ, ಈಸ್ಟ್ರೋಜನ್ ಪ್ರಮಾಣ ಹೆಚ್ಚುತ್ತದೆ. ಇದರಿಂದ ಸ್ನಾಯುಗಳ ಆರೋಗ್ಯ ಕುಂದುತ್ತದೆ.

3. ಮದ್ಯಸೇವಿಸುವುದರಿಂದ ಡೀಹೈಡ್ರೇಷನ್ ಉಂಟಾಗುತ್ತದೆ. ಆಲ್ಕೊಹಾಲ್​ನ ಕಣಗಳನ್ನು ಮುರಿದು ದೇಹದಿಂದ ಹೊರಹಾಕಲು ನಮ್ಮ ಮೂತ್ರಪಿಂಡಕ್ಕೆ ಬಹಳ ನೀರು ಖರ್ಚಾಗುತ್ತದೆ. ಇದರಿಂದ ಶೇ.70ರಷ್ಟು ನೀರಿನಿಂದ ಕೂಡಿದ ಸ್ನಾಯುಗಳ ಬೆಳವಣಿಗೆ ಕುಂಠಿತವಾಗುತ್ತದೆ.

4. ಮದ್ಯವು ನಮ್ಮ ದೇಹಕ್ಕೆ ಬಹಳ ಉಪಯುಕ್ತವಾದ ಎ, ಬಿ ಮತ್ತು ಸಿ ವಿಟಮಿನ್​ಗಳನ್ನು ನಾಶ ಮಾಡುತ್ತದೆ. ಕ್ಯಾಲ್ಸಿಯಂ, ಜಿಂಕ್ ಮತ್ತು ಫಾಸ್ಪರಸ್ ಪ್ರಮಾಣವೂ ಹದಗೆಡುತ್ತದೆ.

5. ಇನ್ನು ಮದ್ಯಪಾನದಿಂದ ನಮ್ಮ ದೇಹದಲ್ಲಿ ಕೊಬ್ಬು ಹೆಚ್ಚಾಗಿ ಶೇಖರಣೆಯಾಗುತ್ತದೆ. ಒಂದು ಗ್ರಾಂಗೆ 7 ಕ್ಯಾಲರಿಯಂತೆ ಕೊಬ್ಬು ಸೇರುತ್ತದೆ. ಫ್ಯಾಟ್ ಬರ್ನ್ ಮಾಡುವ ಸಾಮರ್ಥ್ಯವೂ ಇಳಿಮುಖವಾಗುತ್ತದೆ.

ಆದ್ದರಿಂದ ಬಾಡಿ ಬಿಲ್ಡಿಂಗ್​ನಲ್ಲಿ ಆಸಕ್ತಿ ಹೊಂದಿದ್ದರೆ, ಉತ್ತಮ ಬಾಡಿ ಶೇಪ್ ಗಳಿಸಬೇಕೆಂದರೆ ಮದ್ಯದಿಂದ ದೂರವಿರಿ. ವಾರದುದ್ದಕ್ಕೂ ವ್ಯಾಯಾಮ, ಡಯಟ್ ಮಾಡಿ ವಾರಾಂತ್ಯದಲ್ಲಿ ರಿಲಾಕ್ಸ್ ಆಗಲು ಸ್ನೇಹಿತರೊಡನೆ ಜಾಲಿ ಪಾರ್ಟಿ ಮಾಡಿ ನಿಮ್ಮ ಶ್ರಮವನ್ನು ವ್ಯರ್ಥ ಮಾಡಬೇಡಿ. ತೀರಾ ಅನಿವಾರ್ಯವೆನಿಸಿದಾಗ, ವಿಶೇಷ ಸಂದರ್ಭಗಳಲ್ಲಿ ಮಾತ್ರ ಗ್ಲಾಸ್ ಎತ್ತಿ!