ನ್ಯೂಸ್

ಕನ್ನಡ ಶಾಲೆಗಳನ್ನು ಮುಚ್ಚದಿರಿ; ಒಂದೇ ಮಗುವಿದ್ದರೂ ವಿದ್ಯಾಲಯಗಳು ನಡೆಯಲಿ

ಮಂಡ್ಯ: ಆಸ್ಪತ್ರೆಯಲ್ಲಿ ಒಬ್ಬನೇ ರೋಗಿ ಇದ್ದರೂ ಆತನಿಗೆ ಹೇಗೆ ಚಿಕಿತ್ಸೆ ನಡೆಸಲಾಗುತ್ತದೆಯೋ, ಹಾಗೆಯೇ ಸರ್ಕಾರಿ ಶಾಲೆಯಲ್ಲಿ ಒಬ್ಬನೇ ವಿದ್ಯಾರ್ಥಿ ಇದ್ದರೂ ಆ ಶಾಲೆ ಮುಚ್ಚದೆ ಶಿಕ್ಷಣ ನೀಡಬೇಕು; ಪ್ರಾಥಮಿಕ ಒಂದರಿಂದ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮವೇ ಕಡ್ಡಾಯವಾಗಬೇಕು; ಗೂಗಲ್ ಯಾಂತ್ರಿಕ ಬುದ್ಧಿಮತ್ತೆಗೂ ಶುದ್ಧ ಕನ್ನಡ ಬರುವಂತಾಗಬೇಕು; ಸರೋಜಿನಿ ಮಹಿಷಿ ವರದಿಯನ್ನು ಕೂಡಲೇ ಶಾಸನಬದ್ಧಗೊಳಿಸಿ ಅನುಷ್ಠಾನಗೊಳಿಸಬೇಕು; ಸಿ ಮತ್ತು ಡಿ ವರ್ಗದ ಹುದ್ದೆಗಳನ್ನು ಪೂರ್ಣವಾಗಿ ಕನ್ನಡಿಗರಿಗೇ ಮೀಸಲಿಡಬೇಕು... ಸಕ್ಕರೆನಗರಿ ಮಂಡ್ಯದಲ್ಲಿ ಶುಕ್ರವಾರ ಆರಂಭಗೊಂಡ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷ ಡಾ.ಗೊ.ರು. ಚನ್ನಬಸಪ್ಪ ಸರ್ಕಾರದ ಮುಂದಿಟ್ಟ ಹಕ್ಕೊತ್ತಾಯಗಳಿವು.

ರಾಜ್ಯದಲ್ಲಿ ಹುಟ್ಟುವ ಮಕ್ಕಳು ಪಡೆವ ಶಿಕ್ಷಣದ ಭಾಷೆ, ಮಾಧ್ಯಮ ಯಾವುದಾಗಿರಬೇಕು ಎನ್ನುವ ಚರ್ಚೆ, ಅಲ್ಲಿಂದಾಚೆಗೆ ಪಡೆದಿರುವ ಆಯಾಮ ಲೆಕ್ಕವಿಡುವುದು ಕಷ್ಟ. ಶಿಕ್ಷಣದಲ್ಲಿ ಕನ್ನಡವೇ ಮಾಧ್ಯಮ ಆಗಬೇಕು ಎಂಬ ಚಳವಳಿ ಬೆಳೆದು ಬಂದ ರೀತಿ, ಬಹುತೇಕ ವಿಷಯಗಳಲ್ಲಿ ಸರ್ಕಾರದ ದ್ವಂದ್ವ ನೀತಿ, ಸಂವಿಧಾನದ ಚೌಕಟ್ಟಿನಲ್ಲಿ ನ್ಯಾಯಾಲಯಗಳು ಶಿಕ್ಷಣ ಕುರಿತು ನೀಡಿರುವ ತೀರ್ಪಗಳಿಗೆ ಸರ್ಕಾರ ನೀಡಲೇಬೇಕಾದ ಸಮ್ಮತಿ ಹಿನ್ನೆಲೆಯಲ್ಲಿ ಪ್ರಾಥಮಿಕ ಪೂರ್ವ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಶಿಕ್ಷಣದ ಭಾಷೆ ಯಾವುದೆನ್ನುವುದು ನಿರ್ಧಾರವಾಗದ ಸಂಕೀರ್ಣ ಸ್ವರೂಪದಲ್ಲೇ ಇದೆ ಎಂದು ಸರ್ವಾಧ್ಯಕ್ಷರು ಕಳವಳ ವ್ಯಕ್ತಪಡಿಸಿದರು. ಅಗತ್ಯವೆನಿಸಿರುವ ಇಂಗ್ಲಿಷ್ ಕಲಿಕೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿ ಬೋಧನೆಗೆ ತರಬೇತಿ ಪಡದ ಶಿಕ್ಷಕರನ್ನು ನೇಮಿಸಬೇಕು ಎಂದು ಗೊರುಚ ಸಲಹೆ ನೀಡಿದರು.

ಗ್ರಾಮೀಣ ಪ್ರದೇಶದಲ್ಲಿ ಸಾವಿರಾರು ಸರ್ಕಾರಿ ಶಾಲೆಗಳ ಸೂರು, ಗೋಡೆ ಉರುಳುವ ಸ್ಥಿತಿಯಲ್ಲಿವೆ. ಮೊದಲು ಅವುಗಳನ್ನು ಸರಿಪಡಿಸಿ ಮಕ್ಕಳಿಗೆ ಮತ್ತು ಪಾಲಕರಿಗೆ ಅವು ಆಕರ್ಷಕವಾಗುವಂತೆ ಉನ್ನತೀಕರಿಸಬೇಕು. ಮಕ್ಕಳು ಮತ್ತು ಶಿಕ್ಷಕರ ಕೊರತೆಯಿಂದ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಪ್ರಕ್ರಿಯೆ ಎದ್ದು ಕಾಣುವಂತೆ ನಡೆಯುತ್ತಿದೆ. ಇದು ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸದಂತೆ ಹಿರಿಯರನ್ನು ಪ್ರೇರೇಪಿಸುತ್ತಿದೆ. ಆದ್ದರಿಂದ ಸರ್ಕಾರ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಹಿರಿಯ ಪ್ರಾಥಮಿಕ, ಮತ್ತು ಪ್ರೌಢಶಾಲೆ ಎಂಬ ಗುಚ್ಛ ವ್ಯವಸ್ಥೆಯನ್ನು ಪ್ರತಿ ಗ್ರಾಮದಲ್ಲಿ ಅಲ್ಲದಿದ್ದರೂ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರೆಯಬೇಕು ಎನ್ನುವ ಸಲಹೆಯನ್ನು ಅನೇಕ ಚಿಂತಕರು ನೀಡಿದ್ದಾರೆ. ಇದನ್ನು ಸರ್ಕಾರ ಪರಿಶೀಲಿಸುವುದು ಅಗತ್ಯ. ಇವುಗಳಲ್ಲಿ ಕನ್ನಡವೇ ಶಿಕ್ಷಣದ ಭಾಷೆಯಾಗಿ, ಇಂಗ್ಲಿಷ್ ಪಠ್ಯಕ್ರಮದಲ್ಲಿ ಒಂದು ಭಾಷೆ, ವಿಷಯವಾಗಿ ಮಾತ್ರ ಇರುವಂತೆ ಮಾಡಬಹುದು ಎಂದರು.

ತಮ್ಮ ಮಕ್ಕಳನ್ನು ಖಾಸಗಿ, ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿಸಿದರೆ ಮಾತ್ರ ಸರಿಯಾದ ಶಿಕ್ಷಣ ಸಿಗುತ್ತದೆ ಮತ್ತು ಮುಂದೆ ಉದ್ಯೋಗಾವಕಾಶಕ್ಕೆ ಅನುಕೂಲವಾಗುತ್ತದೆ ಎಂಬ ಭ್ರಮೆಯಲ್ಲಿರುವ ಪಾಲಕರಿಗೆ ಕನ್ನಡದ ಬಗೆಗೆ ಮನವರಿಕೆ ಮಾಡಿಕೊಡುವುದು ಬಹಳ ದೊಡ್ಡ ಸವಾಲಾಗಿದೆ. ಹೋಬಳಿ, ತಾಲೂಕು ಮಟ್ಟದಲ್ಲೂ ಆಂಗ್ಲ ಮಾಧ್ಯಮದ ಖಾಸಗಿ ಶಾಲೆ ನಡೆಸುವ ಸಂಸ್ಥೆಗಳು ತಮ್ಮ ಶಾಲೆಗೆ ಮಕ್ಕಳನ್ನು ಕರೆ ತರಲು ಹಳ್ಳಿ-ಹಳ್ಳಿಗಳಿಗೂ ವಾಹನ ಕಳುಹಿಸುತ್ತಾರೆ. ಇಂಥ ಸಮಸ್ಯೆ-ಸವಾಲುಗಳ ನಡುವೆ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕೈಂಕರ್ಯದಲ್ಲಿ ಖಾಸಗಿ ಉದ್ಯಮಿಗಳು, ಶ್ರೀಮಂತ ವ್ಯಾಪಾರಿಗಳು, ವಿದೇಶಗಳಲ್ಲಿರುವ ಕನ್ನಡಿಗರು ಮತ್ತು ಸ್ವಯಂ ಸೇವಾ ಸಂಸ್ಥೆಗಳು ನೆರವು ನೀಡಿ ಕೈ ಜೋಡಿಸಬೇಕೆಂದು ಕರೆ ನೀಡಿದರು.

ಹೊರಗಿನಿಂದ ಬಂದವರು ಕನ್ನಡ ಕಲಿಯಲಿ: ಬೆಂಗಳೂರು ಹಾಗೂ ಇತರ ನಗರಗಳಿಗೆ ಹೊರ ರಾಜ್ಯಗಳಿಂದ ಬಂದವರು ಮೊದಲು ಕನ್ನಡ ಕಲಿಯಬೇಕು. ಉದ್ಯಮ ವಲಯಗಳು ಮತ್ತು ಇನ್ನಿತರ ಕಡೆ ಸರಳ ಕನ್ನಡ ಕಲಿಕಾ ಕೇಂದ್ರಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಆರಂಭಿಸಲಾಗುತ್ತಿದೆ. ಹಾಗೆಯೇ ಕನ್ನಡನಾಡಿನಲ್ಲಿ ತಮಗೆ ಸಾಂವಿಧಾನಿಕವಾಗಿ ಲಭ್ಯವಾಗುವ ಎಲ್ಲ ಸೌಲಭ್ಯ ಪಡೆದು ಪ್ರಭಾವ ಬಳಸಿ ರಿಯಾಯಿತಿ ಪಡೆದು ಇಲ್ಲಿ ಔದ್ಯಮಿಕವಾಗಿ ನೆಲೆಯೂರಿ ಲಾಭದಾಯಕವಾಗಿ ಬೆಳೆಯುವ ಉದ್ಯಮಗಳು ವಿದ್ಯಾವಂತ ಕನ್ನಡಿಗ ಅಭ್ಯರ್ಥಿಗಳಿಗೆ ನಿರ್ದಿಷ್ಟ ಪ್ರಮಾಣದ ಉದ್ಯೋಗ ನೀಡುವುದು ಅವುಗಳ ಋಣ ಸಂದಾಯದ ಮಾರ್ಗವೆಂದು ಭಾವಿಸಬೇಕು ಹಾಗೂ ಇದು ಅವುಗಳ ನೈತಿಕ ಜವಾಬ್ದಾರಿ ಕೂಡ ಎಂದು ಕನ್ನಡಿಗರ ಉದ್ಯೋಗಕ್ಕೆ ಆಗ್ರಹಿಸಿದರು.

ಕನ್ನಡಿಗರಿಗೆ ಉದ್ಯೋಗಾವಕಾಶ ಮರೀಚಿಕೆ: 1986ರಲ್ಲಿ ಸರೋಜಿನಿ ಮಹಿಷಿ ಸಮಿತಿ ವರದಿಯಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಿಡುವ ಶಿಫಾರಸುಗಳನ್ನು ಮಾಡಿತ್ತು. ಗ್ರೂಪ್ ಸಿ ಮತ್ತು ಡಿ ವರ್ಗಗಳಲ್ಲಿ ಕನ್ನಡಿಗರಿಗೆ ಶೇ.80ರಷ್ಟು ಉದ್ಯೋಗ ಮೀಸಲಿಡಬೇಕು ಎಂದು ಹೇಳಿತ್ತು. ಆದರೆ, ಆ ವರದಿಯ ಶಿಫಾರಸು ಇನ್ನೂ ಅನುಷ್ಠಾನಗೊಂಡಿಲ್ಲ. ಉತ್ತರ ಭಾರತದಿಂದ ವಲಸೆ ಬರುವ ಕಾರ್ವಿುಕರಿಂದ ಇಂದು ಬೆಂಗಳೂರು ತುಂಬಿ ಹೋಗಿದೆ. ಬ್ಯಾಂಕುಗಳಲ್ಲಿ ಮತ್ತು ಅಂಚೆ ಕಚೇರಿಗಳಲ್ಲಿ ಹಿಂದಿ ಭಾಷಿಕರು ತುಂಬಿ ಹೋಗಿದ್ದಾರೆ. ಕೇಂದ್ರ ಸರ್ಕಾರವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿಂದಿಗೆ ಪ್ರಾಶಸ್ಱ ನೀಡುತ್ತಾ ಕನ್ನಡ ನಿರ್ಲಕ್ಷ್ಯ ಮಾಡುತ್ತಿವೆ. ಇದರಿಂದ ಕನ್ನಡಿಗರಿಗೆ ಉದ್ಯೋಗಾವಕಾಶ ಮರೀಚಿಕೆಯಾಗಿದೆ. ಹೀಗಾಗಿ ಸರ್ಕಾರ ಸರೋಜಿನಿ ಮಹಿಷಿ ಸಮಿತಿ ವರದಿಯನ್ನು ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.

ನೇಗಿಲಯೋಗಿಗಳ ಬೀಡು: ರಾಜಕೀಯವಾಗಿ ಸದಾ ಜಾಗೃತವಾಗಿರುವ, ಸಾಮಾಜಿಕ ಸೌಹಾರ್ದತೆಯನ್ನು ಒಳಗೊಂಡಿರುವ, ಆರ್ಥಿಕವಾಗಿ ಸಮೃದ್ಧವಾದ, ಸಾಂಸ್ಕೃತಿಕವಾಗಿ ಶ್ರೀಮಂತವಾದ ಮತ್ತು ಸಾಹಿತ್ಯಿಕವಾಗಿಯೂ ಹೆಸರು ಮಾಡಿರುವ ಜಿಲ್ಲೆ ಮಂಡ್ಯ. ಮಂಡ್ಯ ಅಪ್ಪಟ ಕನ್ನಡ ಜಿಲ್ಲೆ. ಇಲ್ಲಿ ಅನ್ಯಭಾಷಿಕರ ಪ್ರಮಾಣ ಕಡಿಮೆ. ರೈತಾಪಿಗಳ ನಾಡು. ಕಬ್ಬು ಮತ್ತು ಭತ್ತ ಬೆಳೆಯುತ್ತಿರುವ ನೇಗಿಲ ಯೋಗಿಗಳ ಬೀಡು ಎಂದು ಗೊ.ರು.ಚ. ಗುಣಗಾನ ಮಾಡಿದರು.

1994ರಲ್ಲಿ ನಾನು ಕಸಾಪ ಅಧ್ಯಕ್ಷನಾಗಿದ್ದಾಗ ಚದುರಂಗ ಅವರ ಸರ್ವಾಧ್ಯಕ್ಷತೆಯಲ್ಲಿ 63ನೇ ಸಮ್ಮೇಳನವನ್ನು ಮಂಡ್ಯದಲ್ಲಿ ಯಶಸ್ವಿಯಾಗಿ ಸಂಘಟಿಸುವ ಅವಕಾಶ ದೊರಕಿತ್ತು. ಅದಾದ 30 ವರ್ಷಗಳ ನಂತರ ನನ್ನ ಸರ್ವಾಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಒಂದು ಯೋಗಾಯೋಗ ಎಂದೇ ಭಾವಿಸಿದ್ದೇನೆ. ಮಂಡ್ಯದ ಇತಿಹಾಸದಲ್ಲಿ ಇದು ಮೂರನೇ ರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ

ಹಿಂದಿ ಹೇರಿಕೆಗೆ ಆಕ್ಷೇಪ: ಭಾರತದ ಜನರೆಲ್ಲರೂ ಸಂವಹನ ನಡೆಸಲು ಹಿಂದಿ ಕಲಿತು ಬಳಸಬೇಕು. ಅದೇ ನಮ್ಮ ರಾಷ್ಟ್ರಭಾಷೆ ಎಂಬುದನ್ನು ಲಿಖಿತವಾಗಿ ಮತ್ತು ಅಲಿಖಿತವಾಗಿ, ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಹೇರುವ ಹುನ್ನಾರವನ್ನು ಹಿಂದಿನ ಮತ್ತು ಇಂದಿನ ಕೇಂದ್ರ ಸರ್ಕಾರಗಳು ಮಾಡುತ್ತಲೇ ಬಂದಿವೆ. ಕೇಂದ್ರ ಸರ್ಕಾರಕ್ಕೆ ಒಳಪಟ್ಟ ಇಲಾಖೆಗಳು, ನಿಗಮ ಮಂಡಳಿಗಳು, ಸಂಸ್ಥೆಗಳು, ಬ್ಯಾಂಕುಗಳಲ್ಲಿ ಕನ್ನಡದ ಸೊಲ್ಲು ಸಾಧ್ಯವಾದಷ್ಟೂ ಇರದಂತೆ ನೋಡಿಕೊಳ್ಳಲಾಗುತ್ತದೆ. ರಾಜ್ಯ ಸರ್ಕಾರಗಳಿಗೆ ಭಾಷೆಯೂ ಸೇರಿ ಅನೇಕ ವಿಷಯಗಳಲ್ಲಿ ಆಯ್ಕೆಯ ಸ್ವಾತಂತ್ರ್ಯ ಇದ್ದೇ ಇರುತ್ತದೆ. ಇತರ ರಾಜ್ಯಗಳಿಗೆ ಇರುವಂತೆ ನಮಗೂ ಸಂವಿಧಾನದ 345ನೇ ವಿಧಿಯ ಪ್ರಕಾರ ಕನ್ನಡವೇ ನಮ್ಮ ರಾಜ್ಯದ ಅಧಿಕೃತ ಭಾಷೆ ಆಗಿದೆ. ಎಲ್ಲ ರಾಜ್ಯಗಳಿಗೂ ಒಂದೇ ಭಾಷೆಯನ್ನು ಹೇರುವುದು ಸಮರ್ಥನೀಯವಲ್ಲ ಎಂದು ಹಿಂದಿ ಹೇರಿಕೆಗೆ ಗೊರುಚ ಆಕ್ಷೇಪ ವ್ಯಕ್ತಪಡಿಸಿದರು.

ಕನ್ನಡವನ್ನು ಉಳಿಸಿ, ಬೆಳೆಸಿ: ಕನ್ನಡ ನೆಲದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ ಎಂಬುದನ್ನು ನೆನಪಿಟ್ಟುಕೊಳ್ಳಿ. ಅನ್ಯಭಾಷಿಕರೊಂದಿಗೆ ಅವರದೇ ಭಾಷೆಯಲ್ಲಿ ಮಾತನಾಡುವುದನ್ನು ಬಿಡಿ, ಅವರಿಗೆ ಕನ್ನಡ ಕಲಿಸಿ. ಕನ್ನಡ ಉಳಿಸಿ, ಬೆಳೆಸಿ ಎಂದು ಸಿಎಂ ಸಿದ್ದರಾಮಯ್ಯ ರಾಜ್ಯದ ಜನತೆಗೆ ಮನವಿ ಮಾಡಿದರು. 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ವ್ಯಾವಹಾರಿಕ ಉದ್ದೇಶಕ್ಕೆ ಎಷ್ಟೇ ಭಾಷೆಗಳನ್ನು ಕಲಿತರೂ ಹೃದಯದ ಭಾಷೆ ನಮ್ಮ ಮಾತೃಭಾಷೆಯೇ ಆಗಿರುತ್ತದೆ. ನಮ್ಮ ಭಾಷೆ ನಮ್ಮ ಸಂಸ್ಕೃತಿ, ಪರಂಪರೆಗಳನ್ನು ಪ್ರತಿನಿಧಿಸುತ್ತದೆ. ವಿಶ್ವವೇ ಜಾಗತಿಕ ಹಳ್ಳಿಯಾಗಿ ಪರಿವರ್ತಿತವಾಗಿರುವ ಈ ಸಂದರ್ಭದಲ್ಲಿ ನಾವು ನಮ್ಮತನವನ್ನು ಉಳಿಸಿಕೊಳ್ಳುವ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ ಎಂದು ಪ್ರತಿಪಾದಿಸಿದರು.

ಶಾಲಾ ಗುಚ್ಛ ವ್ಯವಸ್ಥೆ ಬರಲಿ: ಸರ್ಕಾರಗಳು ಬದಲಾದಂತೆ ಸರ್ಕಾರಿ-ಖಾಸಗಿ ಶಾಲಾ ಶಿಕ್ಷಣದಲ್ಲಿ ಪ್ರಥಮ, ದ್ವಿತೀಯ, ತೃತೀಯ ಭಾಷೆ ಎಂದು ಕನ್ನಡದ ಸ್ಥಾನಮಾನ ಬದಲಾಗುವುದು, ಖಾಸಗಿ ಶಾಲೆಗಳು ಅದರಲ್ಲೂ ಕೇಂದ್ರೀಯ ಪಠ್ಯಕ್ರಮ ಅನುಸರಿಸುವ ಶಾಲೆಗಳು ವಿಭಿನ್ನ ನೀತಿಗೆ ಪಟ್ಟು ಹಿಡಿಯುವುದು, ಸರ್ಕಾರವೇ ಪಬ್ಲಿಕ್ ಶಾಲೆಗಳನ್ನು ತೆರೆದಿರುವುದು ಹೀಗೆ ನಮ್ಮಲ್ಲಿ ಹಲವು ಸಂಗತಿಗಳು ಅನೇಕರಿಗೆ ಗೊಂದಲ ಹುಟ್ಟಿಸಿವೆ ಎಂದು ಗೊರುಚ ಆತಂಕ ವ್ಯಕ್ತಪಡಿಸಿದರು.