ಸಾಂಟಾ ಕ್ರೂಝ್: ಕರೊನಾ COVID19 ವೈರಸ್ ಸೋಂಕು ಕಾರಣಕ್ಕೆ ಜಾಗತಿಕ ಅರ್ಥ ವ್ಯವಸ್ಥೆ ತೊಂದರೆಗೀಡಾಗಿದೆ. ಅಮೆರಿಕವೂ ಸೇರಿ ನಾನಾ ದೇಶಗಳಲ್ಲಿ ಉದ್ಯೋಗ ಕಡಿತ, ವೇತನ ಕಡಿತದ ಕ್ರಮಗಳು ಚಾಲ್ತಿಗೆ ಬಂದಿವೆ. ಇವೆಲ್ಲದರ ನಡುವೆ, ಮುಂಚೂಣಿ ಕರೊನಾ ವಾರಿಯರ್ಸ್ಗಳನ್ನು ಅಭಿನಂದಿಸುವ, ಗೌರವಿಸುವ ಕೆಲಸಗಳು ಗಮನಸೆಳೆಯುತ್ತಿವೆ. ಈ ವಿದ್ಯಮಾನದ ನಡುವೆ ಅಮೆರಿಕದ ಆ ಆಸ್ಪತ್ರೆ ಸಿಬ್ಬಂದಿ ಮಾತ್ರ ಬಹಳ ಖುಷಿ ಪಟ್ರು. ಕಾರಣ ಇಷ್ಟೇ- 10 ಲಕ್ಷ ಡಾಲರ್ ಹಣವನ್ನು ಆಸ್ಪತ್ರೆ ಸಿಬ್ಬಂದಿಗೆ ಬೋನಸ್ ನೀಡುವುದಕ್ಕಾಗಿ ಅನಾಮಧೇಯ ದಾನಿಯೊಬ್ಬರು ಕೊಟ್ರು!
ಕ್ಯಾಲಿಫೋರ್ನಿಯಾದ ಸಾಂಟಾ ಕ್ರೂಝ್ನಲ್ಲಿರುವ ಡೊಮಿನಿಕನ್ ಹಾಸ್ಪಿಟಲ್ನ ಉದ್ಯೋಗಿಗಳಿಗೆ ಈ ಗಿಫ್ಟ್ ಕೊಟ್ಟ ವ್ಯಕ್ತಿ ಯಾರೆಂಬುದು ಗೊತ್ತಿಲ್ಲ. ಅನಾಮಧೇಯ ವ್ಯಕ್ತಿಯ ಟಿಪ್ಪಣಿಯಷ್ಟೇ ಸಿಕ್ತು. ನಮ್ಮ ಜನರ ಸುರಕ್ಷೆಯನ್ನು ಕಾಪಾಡಿದ ನಿಮ್ಮೆಲ್ಲರಿಗೂ ಎದ್ದು ನಿಂತು ಗೌರವ ಸೂಚಿಸುತ್ತೇವೆ. ಮಾನವೀಯತೆ ಪ್ರದರ್ಶಿಸಿದ ನಿಮ್ಮ ನಡವಳಿಕೆಯೇ ನಿಮ್ಮನ್ನು ಇಂದು ಹೀರೋಗಳನ್ನಾಗಿ ಮಾಡಿದೆ. ನಿಮಗೊಂದು ಕಿರು ಕಾಣಿಕೆ ಇಲ್ಲಿದೆ ಎಂಬುದು ಆ ಟಿಪ್ಪಣಿಯ ಸಾರ!
ಅನಾಮಧೇಯ ವ್ಯಕ್ತಿ ಕೊಟ್ಟ ಗಿಫ್ಟ್ ಬೋನಸ್ 10 ಲಕ್ಷ ಡಾಲರ್ ಅನ್ನು ಆಸ್ಪತ್ರೆಯ ನರ್ಸ್ಗಳು, ಕ್ಲೀನಿಂಗ್ ನೌಕರರು, ಲ್ಯಾಬ್ ಟೆಕ್ನಿಷಿಯನ್ಸ್, ಮೆಡಿಕಲ್ ರೆಕಾರ್ಡ್ಸ್, ಮೇಲ್ ರೂಮ್ ಸ್ಟಾರ್ಫ್, ಸೆಕ್ಯುರಿಟಿ ಗಾರ್ಡ್ಗಳು ಹಂಚಿಕೊಳ್ಳಲಿದ್ದಾರೆ. ಆಸ್ಪತ್ರೆ ಆಡಳಿತ ಮಂಡಳಿ ಇದನ್ನು ಹಂಚಲಿದ್ದು, ಕಾಯಂ ನೌಕರರಿಗೆ 800 ಡಾಲರ್, ಅರೆಕಾಲಿಕ ನೌಕರರಿಗೆ 600 ಡಾಲರ್ ಬೋನಸ್ ಪ್ರಾಪ್ತವಾಗಲಿದೆ.
ಇದನ್ನೂ ಓದಿ: COVID19 ಹಾನಿಗೆ ಪರಿಹಾರ ಚೀನಾವೇ ನೀಡಬೇಕು: ಜರ್ಮನಿಗಿಂತಲೂ ಹೆಚ್ಚು ಪರಿಹಾರ ನಮಗೆ ಸಿಗಬೇಕು ಎಂದ ಅಮೆರಿಕ
ಕರೊನಾ ಸೋಂಕು ತಡೆಗೆ ಅನೇಕ ವಾರಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದವರಿಗೆ ಅನಾಮಧೇಯ ದಾನಿಯ ನಡೆ ಮುದ ತುಂಬಿದೆ. ಎಲ್ಲರೂ ಭಾವುಕರಾಗಿದ್ದಾರೆ. ಆಸ್ಪತ್ರೆಯ ನರ್ಸಿಂಗ್ ಸೂಪರ್ವೈಸರ್ ಆಮಿ ಲೋಡನ್, ಆಸ್ಪತ್ರೆಗೆ ನೂರಾರು ಜನ ಬಂದು ಚಿಕಿತ್ಸೆ ಪಡೆದು ಹೋಗುತ್ತಾರೆ. ಆಸ್ಪತ್ರೆಯಲ್ಲಿನ ಪ್ರತಿಯೊಬ್ಬರ ಚಟುವಟಿಕೆಯನ್ನೂ ಗಮನಿಸಿ ಅದರ ಬಗ್ಗೆ ಪ್ರಶಂಸಿದ್ದಾರೆ ಎಂದರೆ ಅಪರಿಚಿತನ ಉದಾರತೆಯ ಬಗ್ಗೆ ಏನು ಹೇಳಲಿ.. ನಮ್ಮದೊಂದು ಟೀಮ್ ವರ್ಕ್. ಇದರ ಶ್ರೇಯವೆಲ್ಲವೂ ಟೀಮ್ಗೆ ಸಲ್ಲಬೇಕು ಎಂದಿದ್ದಾರೆ. (ಏಜೆನ್ಸೀಸ್)