ನ್ಯೂಸ್

ಪಾಪರ್ ಡೆಫನಿಷನ್ ಗೊತ್ತಿದ್ಯಾ ಅಶೋಕನಿಗೆ? ವಿಪಕ್ಷ ನಾಯಕನಿಗೆ ಸಿಎಂ ಕ್ಲಾಸ್​!

ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್​ ದರವನ್ನು ದಿಢೀರ್​ ಏರಿಕೆ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ತೀವ್ರ ಪ್ರತಿಭಟನೆ ಕೈಗೊಂಡಿದ್ದು, ವಿಪಕ್ಷ ನಾಯಕ ಆರ್. ಅಶೋಕ ಸಿಎಂ ನಿಲುವನ್ನು ಪ್ರಶ್ನಿಸಿ, ತೀವ್ರ ವಾಗ್ದಾಳಿ ನಡೆಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗೋಷ್ಠಿ ಕರೆದ ಸಿಎಂ, ಪಾಪರ್ ಡೆಫನಿಷನ್ ಏನು ಎಂಬುದು ಅಶೋಕನಿಗೆ ಗೊತ್ತಿದ್ಯಾ? ಎಂದು ನೇರವಾಗಿ ಪ್ರಶ್ನಿಸಿದ್ದಾರೆ.

"ಪೆಟ್ರೋಲ್, ಡೀಸೆಲ್‌ ದರ ಹೆಚ್ಚಿಸಿದರು ಎಂದು ಬಿಜೆಪಿ- ಜೆಡಿಎಸ್​ನವರು ಪ್ರತಿಭಟನೆ ನಡೆಸುತ್ತಿದ್ದಾರೆ. ನಾವು ಪೆಟ್ರೋಲ್‌ ಮೇಲೆ ಮೂರು ರೂ. ಹಾಗೂ ಡೀಸೆಲ್‌ ಮೇಲೆ‌ 3 ರೂ. ಏರಿಸಿದ್ದೇವೆ. ಆದರೆ, ಅವರು ಪ್ರತಿಭಟನೆ ಮಾಡಬೇಕಾಗಿರುವುದು ಕೇಂದ್ರ ಸರ್ಕಾರದ ವಿರುದ್ಧವೇ ಹೊರತು ನಮ್ಮ ವಿರುದ್ಧವಲ್ಲ. ಇವರು ರಾಜ್ಯ ಸರ್ಕಾರ ಪಾಪರ್ ಅನ್ನುತ್ತಾರೆ. ಪಾಪರ್ ಪದದ ಅರ್ಥ ಗೊತ್ತಿದ್ಯಾ ಅಶೋಕನಿಗೆ? ನಾವು ಯಾರದ್ದಾದರೂ ಸಂಬಳ ತಡೆ ಹಿಡಿದಿದ್ದೀವಾ? ಬಜೆಟ್ ಘೋಷಿತ ಅನುದಾನ‌ ನಿಲ್ಲಿಸಿದ್ದೀವಾ?" ಎಂದು ಹೇಳಿದರು.

"ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿದ್ದಾಗ, ಕೇಂದ್ರದಿಂದ ಬೆಲೆ ಏರಿಕೆಯಾಗಿದೆ ಎಂದು ದೊಡ್ಡ ಹೇಳಿಕೆ ಕೊಟ್ಟಿದ್ದರು. ನಾನು ಪ್ರಧಾನಿಯಾದ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡುತ್ತೇನೆ ಎಂದು ಕೂಡ ಹೇಳಿದ್ದರು. ಆದರೆ ಈಗ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಮೋದಿ ಪಿಎಂ ಆದಾಗ ಪೆಟ್ರೋಲ್ ಬೆಲೆ 72.26 ರೂ. ಇತ್ತು. ಅದನ್ನು ಜೂನ್ 24ರಲ್ಲಿ 104 ಆಗಿತ್ತು. ಈಗ ಕಡಿಮೆ ಆಗಿದೆ. ಡೀಸೆಲ್ ಬೆಲೆ 57 ರೂ. ಇತ್ತು. 98 ರೂ. ಮಾಡಿದರು. ಇದನ್ನು ಹೆಚ್ಚು ಮಾಡಿದ್ದು ಮೋದಿ" ಎಂದು ನೇರವಾಗಿ ಕೇಂದ್ರ ಸರ್ಕಾರವನ್ನು ದೂಡಿದರು.