ತಿರುವನಂತಪುರಂ: ರೋಗಿಯೊಬ್ಬರಿಗೆ ಬೆರಳಿನ ಬದಲು ನಾಲಿಗೆಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ವೈದ್ಯರು ಎಡವಟ್ಟು ಮಾಡಿ ಪೇಚಿಗೆ ಸಿಲುಕಿರುವ ಘಟನೆ ಕೋಝಿಕ್ಕೋಡ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ನಡೆದಿದೆ.
ವೈದ್ಯರ ಈ ನಿರ್ಲಕ್ಷ್ಯಕ್ಕೆ ಹಲವರು ಕಿಡಿಕಾರಿದ್ದು, ಮಗುವಿನ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತ ವಿಚಾರಣೆ ಬೆಳಕಿಗೆ ಬರುತ್ತಿದ್ದಂತೆ ಆರೋಗ್ಯ ಸಚಿವರು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಗುವಿನ ಪೋಷಕರು, ನಮ್ಮ ಮಗಳ ಕೈಯಲ್ಲಿ ಆರು ಬೆರಳುಗಳಿದ್ದ ಕಾರಣ ಅದನ್ನು ತೆಗೆಸಲು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರಂತೆ ಮಗುವಿಗೆ ಶಸ್ತ್ರಚಿಕಿತ್ಸೆ ನಡೆದಿದೆ. ಶಸ್ತ್ರಚಿಕಿತ್ಸೆಯ ಕೆಲ ಹೊತ್ತಿನ ಬಳಿಕ ಮಗಳನ್ನು ಮಾತನಾಡಿಸಲು ಹೋದಾಗ ಆಕೆಯ ಬಾಯಿಗೆ ಹತ್ತಿ ಇಟ್ಟು ಪ್ಲ್ಯಾಸ್ಟರ್ ಸುತ್ತಿ ಕಳಿಸಲಾಗಿತ್ತು.
ಪರಿಶೀಲಿಸಿದಾಗ ಮಗುವಿನ ಕೈಯನ್ನು ಪರೀಕ್ಷಿಸಿದಾಗ ಆರನೇ ಬೆರಳು ಹಾಗೆಯೇ ಇತ್ತು. ಕೆಲ ಹೊತ್ತಿನ ಬಳಿಕ ಬೆರಳಿನ ಆಪರೇಷನ್ ಬದಲಾಗಿ ತಪ್ಪಾಗಿ ವೈದ್ಯರು ನಾಲಿಗೆ ಆಪರೇಷನ್ ಮಾಡಿರುವುದು ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಮಗುವಿನ ಪೋಷಕರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೇರಳ ಸರ್ಕಾರದ ಆರೋಗ್ಯ ಸಚಿವೆ ವೀಣಾ, ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದ್ದು, ಮುಂದಿನ ದಿನಗಳಲ್ಲಿ ಯಾರಿಗೂ ಈ ರೀತಿಯಾಗದಂತೆ ಕ್ರಮ ವಹಿಸಲಾಗುವುದು. ಮಗುವಿನ ನಾಲಿಗೆಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿದು ಬಂದಿದೆ. ಈ ಸಂಬಂಧ ತನಿಖೆಗೆ ಆದೇಶಿಸಲಾಗಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವೆ ವೀಣಾ ತಿಳಿಸಿದ್ದಾರೆ.