ನ್ಯೂಸ್

ಮೌಢ್ಯಕ್ಕೆ ಬಲಿಯಾದ ಮಗು; ಶವಪರೀಕ್ಷೆಗಾಗಿ ಮೃತದೇಹ ಹೊರ ತೆಗೆದ ವೈದ್ಯರು

ತುಮಕೂರು: ಜಗತ್ತು ಆಧುನಿಕವಾಗಿ ಎಷ್ಟೇ ಮುಂದುವರಿದಿದ್ದರೂ ಇನ್ನೂ ಕೆಲವರು ಮೌಢ್ಯಕ್ಕೆ ಶರಣಾಗಿರುವುದು ದುರಂತದ ಸಂಗತಿ. ತುಮಕೂರಿನ ಗೊಲ್ಲರಹಟ್ಟಿಯಲ್ಲಿ ಬಾಣಂತಿ ಹಾಗೂ ಮಗುವನ್ನು ಊರಿನಿಂದ ಹೊರಗೆ ಇಡಲಾಗಿತ್ತು.

ಗೊಲ್ಲರ ಸಂಪ್ರದಾಯದಂತೆ ಒಂದು ತಿಂಗಳು ಬಾಣಂತಿ ಮತ್ತು ಮಗು ಊರಿನಿಂದ ಹೊರಗೆ ಇರಬೇಕಿತ್ತು. ಆದರೆ, ನಿರಂತರ ಮಳೆಯಿಂದ ವಾತಾವರಣ ಥಂಡಿಯಾಗಿದ್ದು, ವಿಪರೀತ ಶೀತದಿಂದ ಬಳಲಿದ ಸಿದ್ದೇಶ್ ಮತ್ತು ವಸಂತ ದಂಪತಿಯ ಮಗು ಜು.23ರಂದು ಮೃತಟ್ಟಿತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ಮೃತದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ತುಮಕೂರು ಜಿಲ್ಲೆ, ಕೊರಟಗೆರೆ ತಾಲೂಕಿನ ತೋವಿನಕೆರೆ ಬಳಿಯ ಬಡಮುದ್ದಯ್ಯನಪಾಳ್ಯದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಮೃತಪಟ್ಟಿದ್ದ ಮಗುವನ್ನ ಸಿದ್ದೇಶ್ ಸ್ವಗ್ರಾಮವಾದ ಬಡಮುದ್ದಯ್ಯನಪಾಳ್ಯದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು‌. ಸದ್ಯ ಪರಿಕ್ಷೆಗಾಗಿ ವೈದ್ಯರು ಮಗುವಿನ ದೇಹದ ಕೆಲ ಅಂಗಾಗಳನ್ನು ಸಂಗ್ರಹಿಸಿಕೊಂಡು ಕೊಂಡಯ್ದಿದ್ದಾರೆ.

ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಉಪಸ್ಥಿತಿಯಲ್ಲಿ ಶವವನ್ನು ಹೊರಕ್ಕೆ ತೆಗೆಯಲಾಗಿದ್ದು ಮಗು ಸಾವಿನ ನಿಜವಾದ ಕಾರಣ ತಿಳಿಯಲು ಶವ ಪರೀಕ್ಷೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ. (ಏಜೆನ್ಸೀಸ್)