ನ್ಯೂಸ್

ಸುಳ್ಳಾಯ್ತು ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ನುಡಿದ ಈ ಐದು ಸ್ಫೋಟಕ ಭವಿಷ್ಯಗಳು!

ಹೈದರಾಬಾದ್​: ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಎರಡೂ ತೆಲುಗು ರಾಜ್ಯಗಳ ಜನರಿಗೆ ಚಿರಪರಿಚಿತರು. ಸೆಲೆಬ್ರಿಟಿಗಳ ಮೇಲೆ ನುಡಿಯುವ ಭವಿಷ್ಯದಿಂದಲೇ ಜ್ಯೋತಿಷಿ ವೇಣು ಸ್ವಾಮಿ ಖ್ಯಾತರಾಗಿದ್ದಾರೆ. ಇವರ ಭವಿಷ್ಯವನ್ನು ಆರಂಭದಲ್ಲಿ ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಯಾವಾಗ ಟಾಲಿವುಡ್​ನ ತಾರಾದಂಪತಿ ನಾಗಚೈತನ್ಯ ಹಾಗೂ ಸಮಂತಾ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದು, ಇಬ್ಬರು ಬೇರೆಯಾದರೂ ಆಗ ವೇಣು ಅವರ ಭವಿಷ್ಯವನ್ನು ಎಲ್ಲರೂ ಗಂಭೀರವಾಗಿ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ಹೀಗಾಗಿ ಅನೇಕ ಸೆಲೆಬ್ರಿಟಿಗಳ ನೆಚ್ಚಿನ ಜ್ಯೋತಿಷಿಯಾಗಿದ್ದಾರೆ. ಆದರೆ, ವೇಣುಸ್ವಾಮಿ ಹೇಳಿದ ಐದು ಭವಿಷ್ಯಗಳು ಇದೀಗ ತಪ್ಪಾಗಿದೆ.

ಜ್ಯೋತಿಷ್ಯವು ಎಂದಿಗೂ 100% ನಿಜವಲ್ಲ. ಅದು ಕೇವಲ ಅಂದಾಜು ಮಾತ್ರ. ಹಿಂದಿನ ಕಾಲದಲ್ಲಿ ಭವಿಷ್ಯ ಹೇಳುವಾಗ ಜ್ಯೋತಿಷಿಗಳು ಶೇ. 90 ರಷ್ಟು ಸತ್ಯ ಹೇಳುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಕೇವಲ ಫೇಮಸ್ ಆಗಲು ಮಾತ್ರ ಕೆಲವರು ಜಾತಕ ಹೇಳುತ್ತಿದ್ದಾರೆ. ವೇಣುಸ್ವಾಮಿ ಕೂಡ ಈ ಸಾಲಿಗೆ ಸೇರಿದವರು ಎಂಬ ವಾದವಿದೆ. ಅಲ್ಲದೆ, ವೇಣುಸ್ವಾಮಿ ಸಾಕಷ್ಟು ಬಾರಿ ಟೀಕೆಗಳಿಗೂ ಗುರಿಯಾಗಿದ್ದಾರೆ.

ವೇಣುಸ್ವಾಮಿ ಅವರು ಇಲ್ಲಿಯವರೆಗೆ ಅನೇಕ ಸಂಚಲನಾತ್ಮಕ ಜ್ಯೋತಿಷ್ಯವನ್ನು ನುಡಿದಿದ್ದಾರೆ. ಆದಾಗ್ಯೂ, ಅವುಗಳಲ್ಲಿ ಕೆಲವು ನಿಜವಾಗಿದ್ದರೆ, ಕೆಲವು ಸುಳ್ಳಾಗಿವೆ. ಈ ಲೇಖನದಲ್ಲಿ ವೇಣು ಸ್ವಾಮಿಯವರು ಹೇಳಿದ ಐದು ತಪ್ಪು ಭವಿಷ್ಯಗಳು ಯಾವುವು ಎಂಬುದನ್ನು ತಿಳಿಯೋಣ.

ಮೊದಲಿಗೆ ಪ್ರಭಾಸ್ ಬಗ್ಗೆ ಮಾತನಾಡುವ ಮೂಲಕ ವೇಣು ಸ್ವಾಮಿ ದೊಡ್ಡ ತಪ್ಪು ಮಾಡಿದ್ದಾರೆ. ಏಕೆಂದರೆ, ಪ್ರಭಾಸ್​ ಸಿನಿ ಕೆರಿಯರ್​ ಮುಗಿದು ಹೋಗುತ್ತದೆ ಎಂದಿದ್ದರು. ಸಾಲು ಸಾಲು ಸೋಲುಗಳಿಂದ ಪ್ರಭಾಸ್​ ಕೂಡ ಕಂಗೆಟ್ಟಿದ್ದರು. ಭವಿಷ್ಯ ನಿಜವಾಗಬಹುದು ಅಂತ ಅಭಿಮಾನಿಗಳೆಲ್ಲರೂ ಅದರ ಬಗ್ಗೆ ಚಿಂತಿಸುತ್ತಿದ್ದರು. ಆದರೆ, ಸಲಾರ್ ಯಶಸ್ಸಿನ ನಂತರ ಪ್ರಭಾಸ್ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ ಮತ್ತು ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಅಲ್ಲಿಗೆ ವೇಣುಸ್ವಾಮಿ ಹೇಳಿದ ಭವಿಷ್ಯ ಸುಳ್ಳಾದಂತೆ.

2024ರ ವಿಧಾನಸಭಾ ಚುನಾವಣೆಯಲ್ಲಿ ತೆಲಂಗಾಣ ರಾಜ್ಯದಲ್ಲಿ ಟಿಆರ್‌ಎಸ್ ಸರ್ಕಾರ ಮತ್ತು ಆಂಧ್ರಪ್ರದೇಶದಲ್ಲಿ ಜಗನ್ ಸರ್ಕಾರ ಬರಲಿದೆ ಎಂದು ವೇಣುಸ್ವಾಮಿ ಭವಿಷ್ಯ ನುಡಿದಿದ್ದರು. ಆದರೆ, ಈ ಎರಡೂ ಭವಿಷ್ಯ ಸಂಪೂರ್ಣವಾಗಿ ಸುಳ್ಳು ಎಂದು ಚುನಾವಣಾ ಫಲಿತಾಂಶ ಸಾಬೀತು ಮಾಡಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಆಂಧ್ರದಲ್ಲಿ ಸಮ್ಮಿಶ್ರ ಅಧಿಕಾರಕ್ಕೆ ಬಂದಿದೆ.

ಇತ್ತೀಚಿಗೆ ಮುಕ್ತಾಯವಾದ ಐಪಿಎಲ್ ಸೀಸನ್‌ನಲ್ಲಿ ಎಸ್​ಆರ್​ಎಚ್​ ಉತ್ತಮವಾಗಿ ಆಡುವುದನ್ನು ನೋಡಿ ಕಪ್​ ಗೆಲ್ಲಲಿದೆ ಎಂದು ಹೇಳಿದ್ದರು. ಆದರೆ, ಎಸ್​ಆರ್​ಎಚ್​ ಫೈನಲ್​ನಲ್ಲಿ ಕೆಕೆಆರ್​ ವಿರುದ್ಧ ಸೋಲುಂಡಿತು. ಅದಕ್ಕೂ ಮುನ್ನ ವೇಣು ಸ್ವಾಮಿ ಭಾರತ ತಂಡ ಏಕದಿನ ವಿಶ್ವಕಪ್ ಗೆಲ್ಲಲಿದೆ ಎಂದು ಹೇಳಿದ್ದರು. ಆದರೆ, ಅದೂ ಕೂಡ ಕೈಗೂಡಲಿಲ್ಲ. ವೇಣು ಸ್ವಾಮಿ ಹೇಳಿದ ಈ ಐದು ಭವಿಷ್ಯಗಳು ಇದೀಗ ಸುಳ್ಳಾಗಿವೆ. (ಏಜೆನ್ಸೀಸ್​)