ನ್ಯೂಸ್

ಸಿಎಂ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ, ರಮೇಶ್​​ ಜಾರಕಿಹೊಳಿ ವಿರುದ್ಧ ಪೊಲೀಸರಿಗೆ ದೂರು ನೀಡಿದ ಡಿಕೆಶಿ-ಸಿದ್ದರಾಮಯ್ಯ

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ‌, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್​ ಕಟೀಲ್ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ರಾಜ್ಯ ಕಾಂಗ್ರೆಸ್​ ದೂರು ನೀಡಿದೆ. ಕಾಂಗ್ರೆಸ್​ ನಾಯಕರಾದ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಿಯೋಗ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಬಿಜೆಪಿ ನಡೆಯನ್ನ ನೀವೂ ನೋಡ್ತಾ ಇದ್ದೀರಾ. ರಾಜ್ಯದ ಮತದಾರರಿಗೆ ಆಮಿಷವೊಡ್ಡಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಅಕ್ರಮ ಹಣ ಇಟ್ಟಿದ್ದಾರೆ. ಪ್ರತಿ ಮತಕ್ಕೆ ಕೊಡ್ತೀವಿ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಕಾಂಗ್ರೆಸ್ ಖರ್ಚು ಮಾಡಿದ್ದಕಿಂತ ಹೆಚ್ಚು ಹಣ ಖರ್ಚು ಮಾಡುತ್ತೇವೆ ಅಂದಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಅಕ್ರಮ ದಾರಿ ಹಿಡಿದಿರುವ ಬಿಜೆಪಿ ವಿರುದ್ಧ ನಾವೀಗ ಪೊಲೀಸರಿಗೆ ವಿಡಿಯೋ ದಾಖಲೆ ಸಮೇತ ದೂರು ನೀಡಿದ್ದೇವೆ ಎಂದರು.

ನೆಲದ ಕಾನೂನಿನ ಪ್ರಕಾರ ಪೊಲೀಸರು ಬಿಜೆಪಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ತಲಾ 6 ಸಾವಿರ ದಡ್ಡು ನೀಡಿ ಮತ ಕೊಂಡುಕೊಳ್ಳಲು ಬಿಜೆಪಿಯವರು ಹೊರಟಿದ್ದಾರೆ. ಇವತ್ತು ರಾಷ್ಟ್ರೀಯ ಮತದಾರರ ದಿನ. ಹಾಗಾಗಿ ಇವತ್ತು ದೂರು ನೀಡಿದ್ದೇವೆ. ಬಿಜೆಪಿಯ ಅಕ್ರಮ ತಡೆಗಟ್ಟಬೇಕು. ನಾಳೆ ಮೀಟಿಂಗ್ ಇಟ್ಟುಕೊಂಡಿದ್ದೇವೆ. ಪಿಎಸ್ಐ ಹಗರಣದಲ್ಲಿ ಸರ್ಕಾರದ ಎಲ್ಲರೂ ಶಾಮಿಲಾಗಿದ್ದಾರೆ. ಭ್ರಷ್ಟಾಚಾರ ಪಿತಾಮಹ ಸಿಎಂ ಬೊಮ್ಮಾಯಿ‌ ಎಂದು ಡಿಕೆಶಿ ವಾಗ್ದಾಳಿ ನಡೆಸಿದರು.

ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಭಯ ಬಿಜೆಪಿಗೆ ಬಂದಿದೆ. ಅದರಿಂದ ತಪ್ಪಿಸಿಕೊಳ್ಳಲು ಬಿಜೆಪಿ ಒಂದು ಸಂಚು ರೂಪಿಸಿದೆ. ನಡ್ಡಾ, ಕಟೀಲ್, ಸಿಎಂ ಬೊಮ್ಮಾಯಿ‌, ಜಾರಕಿಹೊಳಿ ಸೇರಿ ಸಂಚು ಮಾಡಿದ್ದಾರೆ. ಮತ್ತೆ ಅಧಿಕಾರಕ್ಕೆ ಬರುವ ಹುನ್ನಾರ ನಡೆಸಿದ್ದಾರೆ. 40% ಸರ್ಕಾರ ಇದು, ಎಲ್ಲದರಲ್ಲೂ ದುಡ್ಡು ಹೊಡೆದಿದ್ದಾರೆ. ಎಲ್ಲ ಕಚೇರಿಯನ್ನೂ ದುರ್ಬಳಕೆ ಮಾಡಿಕೊಂಡಿದ್ದಾರೆ. ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. 30 ಸಾವಿರ ಕೋಟಿ ಹಣವನ್ನ ಈ ಚುನಾವಣೆಯಲ್ಲಿ ಬಿಜೆಪಿ ಖರ್ಚು ಮಾಡುತ್ತೆ. 5 ಕೋಟಿ‌ ಮತದಾರರಿಗೆ ದುಡ್ಡು ನೀಡಲು ಹೊರಟಿದೆ. ಇದು ನಾನು ಹೇಳಿದ್ದಲ್ಲ, ರಮೇಶ್ ಜಾರಕಿಹೊಳಿಯೇ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದರು.

ಸ್ವತಂತ್ರವಾಗಿ ಚುನಾವಣೆ ನಡೆಯಬೇಕು. ಈ ರೀತಿಯಲ್ಲಿ ಆಮಿಷ ಒಡ್ಡಿದ್ರೆ ಸ್ವತಂತ್ರವಾಗಿ ಚುನಾವಣೆ ನಡೆಯಲ್ಲ, ಪ್ರಜಾಪ್ರಭುತ್ವ ಉಳಿಯಲ್ಲ. ಸ್ವತಂತ್ರ ಚುನಾವಣೆ ಆಗಬೇಕು. ಆಮಿಷ ಒಡ್ಡುವುದು ಕಾನೂನು ಬಾಹಿರ. ಚುನಾವಣಾ ಆಯೋಗಕ್ಕೂ ದೂರು ಕೊಡ್ತೇವೆ. ಈಗ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.