HDKvsDKS: “ಈ ಪ್ರದೇಶ ಬೆಂಗಳೂರಿನ ಭಾಗ. ಈ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರದ ಬಳಿ ಸಚಿವ ಎಚ್.ಡಿ. ಕುಮಾರಸ್ವಾಮಿ ತಕರಾರು ಸಲ್ಲಿಸಿದ್ದಾರೆ. ಯಾರು ಏನೇ ಮಾಡಿದರೂ ಇದನ್ನು ಬೆಂಗಳೂರು ದಕ್ಷಿಣ ಎಂದು ಮಾಡುವುದನ್ನು ತಪ್ಪಿಸಲು ಸಾಧ್ಯವಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳು ಸರ್ಕಾರದ ಆದೇಶ ಪಾಲಿಸಿ: ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಕಟ್ಟುನಿಟ್ಟಿನ ಸೂಚನೆ
ಇಂದು ಕನಕಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರುಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಡಿಕೆಶಿ, “ಪಾಪ ಕುಮಾರಸ್ವಾಮಿ ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ನಾನು ಹಾಗೂ ಇಲ್ಲಿರುವ ಕೆಲವರು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದೆವು. ಇದು ಕನಕಪುರ ಲೋಕಸಭಾ ಕ್ಷೇತ್ರ ಆಗಿತ್ತು. ನಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಇದನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಎಂದು ಮಾಡಿದೆವು ಎಂದರು.
ಈಗ ಈ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಮರುನಾಮಕರಣ ಮಾಡಲು ಮುಂದಾಗಿದ್ದು, ಇದನ್ನು ಮಾಡಬಾರದು ಎಂದು ಕೇಂದ್ರ ಸರ್ಕಾರದ ಬಳಿ ಕುಮಾರಸ್ವಾಮಿ ಅರ್ಜಿ ಹಾಕಿದ್ದಾರೆ. ಅವರು ಏನಾದರೂ ಮಾಡಲಿ, ಈ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿಯೇ ಮಾಡುತ್ತೇವೆ. ಅದಕ್ಕೆ ಏನು ಮಾಡಬೇಕೋ ಅದನ್ನು ನಾನು ಮಾಡುತ್ತೇನೆ” ಎಂದು ತಿಳಿಸಿದರು.
“ಇಲ್ಲಿ ಬಾಲಕೃಷ್ಣ, ಯೋಗೇಶ್ವರ್, ಇಕ್ಬಾಲ್ ಹುಸೇನ್ ಇದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 100 ಎಕರೆ ಪ್ರದೇಶದಲ್ಲಿ ಬಡವರಿಗೆ ನಿವೇಶನ ಹಂಚುವ ಕೆಲಸ ಮಾಡಬೇಕು ಎಂದು ಈ ಮೂವರು ಶಾಸಕರಿಗೆ ಹೇಳುತ್ತೇನೆ. ಸರ್ಕಾರಿ ಜಮೀನಿನಲ್ಲಿ ಅಥವಾ ಖಾಸಗಿ ಜಮೀನು ಖರೀದಿ ಮಾಡಿ ಆ ಕೆಲಸ ಮಾಡಲೇಬೇಕು. ನಮ್ಮ ಕಾಲದಲ್ಲಿ ಇಂತಹ ಕೆಲಸವಾಯಿತು ಎಂದು ನಾವು ಕುಮಾರಸ್ವಾಮಿ ಅವರಿಗೆ ಹೇಳಬೇಕು ಎಂದು ಹೇಳಿದರು.
ನಮ್ಮ ಜನ ಬೆಂಗಳೂರಿಗೆ ವಲಸೆ ಹೋಗುವುದನ್ನು ತಪ್ಪಿಸಬೇಕು ಎಂದು ಅನೇಕ ಕಾರ್ಯಕ್ರಮ ರೂಪಿಸಲಾಗಿದೆ. ಇಂದು ಬೆಳಗ್ಗೆ ಎರಡು ಕಡೆಗಳಲ್ಲಿ ಪ್ರೆಸ್ಟೀಜ್ ಹಾಗೂ ಟೊಯೋಟಾ ಸಂಸ್ಥೆಗಳಿಂದ ಶಾಲಾ ಕಟ್ಟಡ ನಿರ್ಮಿಸುತ್ತಿದ್ದೇವೆ. ನಮ್ಮ ಜಿಲ್ಲೆಯಲ್ಲಿ ರಾಜ್ಯಕ್ಕೆ ಮಾದರಿಯಾಗುವಂತೆ ಈ ತೀರ್ಮಾನ ಮಾಡಿದ್ದೇವೆ. ರಾಜ್ಯದಲ್ಲಿ ಈ ರೀತಿ 2 ಸಾವಿರ ಶಾಲೆ ನಿರ್ಮಿಸುವ ಘೋಷಣೆ ಮಾಡಿದ್ದು, ಅದಕ್ಕೆ ಹೊಸ ರೂಪ ನೀಡುತ್ತಿದ್ದೇವೆ” ಎಂದರು.
ಕಾರ್ಯಕ್ರಮದ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಸತ್ತುಹೋಗಿದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, “ಕುಮಾರಸ್ವಾಮಿ ನಿನಗೆ ಅಧಿಕಾರ ಇದ್ದಾಗ ನೀನು ಏನು ಮಾಡಿದೆ ಹೇಳಪ್ಪಾ? ಮಂಡ್ಯದಲ್ಲಿ ಗೆದ್ದು, ಕೇಂದ್ರದಲ್ಲಿ ದೊಡ್ಡ ಮಂತ್ರಿಯಾಗಿದ್ದೀಯಲ್ಲಾ ಈಗ ನೀನು ಏನು ಮಾಡುತ್ತೀಯಾ ಎಂದು ಮೊದಲ ಹೇಳು. ನೀವು ಏನು ಮಾಡುತ್ತೀರೋ ಮಾಡಿ, ಅದಕ್ಕೆ ಅಗತ್ಯ ಸಹಕಾರ ನಾವು ನೀಡುತ್ತೇವೆ. ಬರೀ ದ್ವೇಷ ರಾಜಕಾರಣ ಮಾಡುತ್ತಿದ್ದೀರಿ. ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಬಾರದು ಎಂದು ಆಕ್ಷೇಪ ಮಾಡಿದ್ದೀರಿ. ನಿಮ್ಮಂತೆ ನಾವು ದ್ವೇಷ ರಾಜಕಾರಣ ಮಾಡುವುದಿಲ್ಲ. ನಿಮಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ. ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ರಾಜ್ಯಕ್ಕೆ ಬಂದು ಏನು ಹೇಳಿದ್ದಾರೆ ಎಂಬುದನ್ನು ತಲೆಯಲ್ಲಿ ಇಟ್ಟುಕೊಳ್ಳಿ” ಎಂದು ತಿರುಗೇಟು ನೀಡಿದರು.
ಅಭಿವೃದ್ಧಿ ವಿಚಾರವಾಗಿ ಯಾರೂ ನನ್ನನ್ನು ಭೇಟಿ ಮಾಡುತ್ತಿಲ್ಲ ಎಂಬ ಕುಮಾರಸ್ವಾಮಿ ಅವರ ಆರೋಪಕ್ಕೆ ಉತ್ತರಿಸಿದ ಡಿಕೆಶಿ, “ಒಂದೇ ದಿನದಲ್ಲಿ ಮೇಕೆದಾಟು ಯೋಜನೆಗೆ ಮೋದಿ ಅವರಿಂದ ಸಹಿ ಹಾಕಿಸುವುದಾಗಿ ಹೇಳಿದ್ದೆಯಲ್ಲಾ, ಯಾಕೆ ಮಾಡಿಸಿಲ್ಲಾ? ನಮ್ಮ ಸಚಿವ ಎಂ.ಬಿ ಪಾಟೀಲ್ ಅವರ ಬಳಿ ಹೋಗಿ ಬಂಡವಾಳ ಹೂಡಿಕೆದಾರರ ಸಮಾವೇಶದ ಬಗ್ಗೆ ಚರ್ಚೆ ಮಾಡಿಲ್ಲವೇ? ಅವರಿಗೆ ದ್ವೇಷದ ರಾಜಕಾರಣವೇ ಮುಖ್ಯವೇ ಹೊರತು ರಾಜ್ಯದ ಅಭಿವೃದ್ಧಿಯಲ್ಲ. ದ್ವೇಷದಿಂದ ಯಾರೂ ಯಾವುದೇ ಸಾಧನೆ ಮಾಡಿಲ್ಲ. ದೊಡ್ಡ ದೊಡ್ಡ ಚಕ್ರವರ್ತಿಗಳೇ ಕೆಳಗೆ ಬಿದ್ದಿದ್ದಾರೆ. ರಾಜಕಾರಣದಲ್ಲಿ ಯಾರೂ ಶಾಶ್ವತವಲ್ಲ” ಎಂದು ಕಿಡಿಕಾರಿದರು.