ಬೇಲೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳು ನಾಲ್ಕು ದಿನಗಳಿಂದ ನಡೆಯುತ್ತಿರುವ 2ನೇ ಹಂತದ ಮುಷ್ಕರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಆರ್.ಮಂಜುನಾಥ್ ಶುಕ್ರವಾರ ಭಾಗವಹಿಸಿ ಬೆಂಬಲ ಸೂಚಿಸಿದರು.
ಗ್ರಾಮ ಆಡಳಿತ ಅಧಿಕಾರಿಗಳ ವೃಂದದಿಂದ ಕಳೆದ ವರ್ಷ ಕೈಗೊಂಡ ಮೊದಲ ಹಂತದ ಮುಷ್ಕರದ ಸಂದರ್ಭ ರಾಜ್ಯ ಸರ್ಕಾರ ಯಾವುದೇ ಬೇಡಿಕೆಗಳನ್ನು ಈಡೇರಿಸದ ಕಾರಣ ಈಗ ರಾಜ್ಯವ್ಯಾಪಿ 2ನೇ ಹಂತದ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಸರ್ಕಾರ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಗ್ರಾಮ ಆಡಳಿತ ಅಧಿಕಾರಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸಿ ಮೂಲಸೌಕರ್ಯಗಳನ್ನು ಒದಗಿಸಲು ಮುಂದಾಗಬೇಕು ಎಂದು ಸಂಘದ ತಾಲೂಕು ಅಧ್ಯಕ್ಷ ಆರ್.ಮಂಜುನಾಥ್ ಹೇಳಿದರು.
ಈ ಹಿಂದೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೇಡಿಕೆ ಈಡೇರಿಸುವ ಸಂಬಂಧ ಭರವಸೆ ನೀಡಿದ್ದರಿಂದ ರಾಜ್ಯವ್ಯಾಪಿ ಮುಷ್ಕರ ಹಿಂಪಡೆಯಲಾಗಿತ್ತು. ನಂತರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿಂದಿಗಿಂತಲೂ ಹೆಚ್ಚಿನ ಕಾರ್ಯದೊತ್ತಡ ಉಂಟಾಗಿರುವುದರಿಂದ 2ನೇ ಹಂತದಲ್ಲಿ ಮುಷ್ಕರ ನಡೆಸಲಾಗುತ್ತಿದೆ ಎಂದರು.
ಕರ್ನಾಟಕ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ರಮೇಶ್ ಮಾತನಾಡಿ, ರಾಜ್ಯ ಸಂಘದ ನಿರ್ದೇಶನದಂತೆ ಬೇಲೂರು ತಾಲೂಕು ಘಟಕದಿಂದ ಎರಡನೇ ಹಂತದಲ್ಲಿ ಮುಷ್ಕರಕ್ಕೆ ಮಾಡಲಾಗುತ್ತಿದೆ ಎಂದರು.
ಕರ್ನಾಟಕ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ತಾಲೂಕು ಗೌರವಾಧ್ಯಕ್ಷ ಹನುಮಂತು, ಉಪಾಧ್ಯಕ್ಷ ಭಾನುಪ್ರಕಾಶ್, ಪ್ರಧಾನ ಕಾರ್ಯದರ್ಶಿ ಆಯೇಷಾ ಭಾನು, ಖಜಾಂಚಿ ಬಸಪ್ಪ, ಸಹ ಕಾರ್ಯದರ್ಶಿ ಗಣೇಶ್, ನೌಕರರ ಸಂಘದ ಧರ್ಮೇಗೌಡ, ಪೂರ್ಣೇಶ್, ಸಂತೋಷ್ ಇತರರಿದ್ದರು.