ಬೆಂಗಳೂರು: "ಮಿಸ್ಟರ್ ಕಮಿಷನರ್, ಬಿ ಕೇರ್ ಫುಲ್. ಬಿಜೆಪಿ ಏಜೆಂಟ್ ರೀತಿ ನೀವು ಕೆಲಸ ಮಾಡಬಾರದು. ಇದನ್ನು ಮನವಿ ಎಂದುಕೊಳ್ಳಿ, ಎಚ್ಚರಿಕೆ ಅಂತಾದರೂ ಎಂದುಕೊಳ್ಳಿ. ನಿಷ್ಪಕ್ಷಪಾತವಾಗಿ ತನಿಖೆ ಮಾಡಿ, ಸರ್ಕಾರದ ತಾಳಕ್ಕೆ ಕುಣಿಯಬೇಡಿ. ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಿದರೆ ಈ ಡಿ.ಕೆ. ಶಿವಕುಮಾರ್ ಸುಮ್ಮನೆ ಕೂರುವ ಜಯಮಾನ ಹೊಂದಿಲ್ಲ...'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಬ್ಬರಿಸಿದ್ದಾರೆ.
ಕೆಪಿಸಿಸಿ ಗುರುವಾರ ಹಮ್ಮಿಕೊಂಡಿದ್ದ ಜನಧ್ವನಿ ಪ್ರತಿಭಟನೆ ವೇಳೆ ಮಾತನಾಡಿದ ಡಿಕೆಶಿ, ''ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್ ಭೈರಸಂದ್ರ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಿಲುಕಿಸುವ ಪ್ರಯತ್ನ ನಡೆದಿದೆ. ಪೊಲೀಸರ ವಿರುದ್ಧ ಹೋರಾಟ ಆರಂಭ ಮಾಡಲಾಗುವುದು'' ಎಂದು ಪೊಲೀಸ್ ಆಯುಕ್ತರನ್ನು ಎಚ್ಚರಿಸಿದರು.
ಇಷ್ಟಕ್ಕೆ ಸುಮ್ಮನಾಗದ ಡಿಕೆಶಿ, ''ಗಲಭೆ ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಆದರೆ, ಕಾಂಗ್ರೆಸ್ನ್ನು ಸಿಲುಕಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ಕಾಂಗ್ರೆಸ್ ಹಾಗೂ ನಾನು ಬಿಡೋಲ್ಲ. ಕಾಂಗ್ರೆಸ್ ನಾಯಕರು ಇನ್ನೂ ಸತ್ತಿಲ್ಲ. ನಿಮ್ಮ ವಿರುದ್ಧ ಹೋರಾಟ ಮಾಡುತ್ತೇವೆ'' ಎಂದರು. ''ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ. ಆದರೆ, ಅಮಾಯಕರನ್ನು ಬಂಧಿಸುವುದು ಸರಿಯಲ್ಲ'' ಎಂದು ಸರ್ಕಾರ ಹಾಗೂ ಪೊಲೀಸರಿಗೆ ಮತ್ತೆ ಎಚ್ಚರಿಕೆ ನೀಡಿದರು.
ಬೆಂಗಳೂರು ಗಲಭೆ ವಿಚಾರದಲ್ಲಿ ನಮಗೆ ಮ್ಯಾಜಿಸ್ಟ್ರೇಟ್ ತನಿಖೆ ಬೇಕಿಲ್ಲ. ನಮ್ಮ ನಾಯಕರಾದ ಖರ್ಗೆ ಮತ್ತು ಸಿದ್ದರಾಮಯ್ಯ ಈಗಾಗಲೇ ಹೇಳಿರುವಂತೆ ಹೈಕೋರ್ಟ್ ಜಡ್ಜ್ ಅವರಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.