ನ್ಯೂಸ್

ಪ್ರಯತ್ನ ವಿಫಲವಾಗಬಹುದು, ಪ್ರಾರ್ಥನೆಗೆ ಗೆಲುವು ನಿಶ್ಚಿತ! ಕೆಪಿಸಿಸಿ ಅಧ್ಯಕ್ಷರ ವದಂತಿ ಬೆನ್ನಲ್ಲೇ DK Shivakumar ಮಾರ್ಮಿಕ ಪೋಸ್ಟ್

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಕೂಗಿಗೆ ಸಿದ್ದರಾಮಯ್ಯ ಬಣದ ನಾಯಕರು ಪ್ರಮುಖವಾಗಿ ಆಗ್ರಹಿಸುತ್ತಿದ್ದು, ದೆಹಲಿಗೆ ಪ್ರಯಾಣ ಬೆಳೆಸಿ ರಾಷ್ಟ್ರೀಯ ನಾಯಕರ ಬಳಿ ತನ್ನ ಅಹವಾಲನ್ನು ಸಲ್ಲಿಸುತ್ತಿದ್ದಾರೆ. ಇದೆಲ್ಲದರ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಕೆಪಿಸಿಸಿ ಅಧ್ಯಕ್ಷದ ಬದಲಾವಣೆ ಸುಳಿವನ್ನು ನೀಡಿದ್ದು, ಕಾಂಗ್ರೆಸ್​ ಪಾಳಯದಲ್ಲಿ ಚಟುವಟಿಕೆಗಳು ಗರಿಗೆದರಿವೆ.

ಎಐಸಿಸಿ ಅಧ್ಯಕ್ಷರ ಹೇಳಿಕೆ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ. ಶಿವಕುಮಾರ್ (DK Shivakumar) ಮಾರ್ಮಿಕ ಟ್ವೀಟ್ ಒಂದನ್ನು ಮಾಡಿದ್ದು, ಸದ್ಯ ನಡೆಯುತ್ತಿರುವ ಬೆಳವಣಿಗೆಗಳ ನಡುವೆ ಈ ಟ್ವೀಟ್​ ಹೊರಬಂದಿರುವುದು ಹೊಸ ಚರ್ಚೆಗೆ ನಾಂದಿ ಹಾಡಿದೆ.

ಪ್ರಯತ್ನ ವಿಫಲವಾಗಬಹುದು, ಆದರೆ ಪ್ರಾರ್ಥನೆಗೆ ಗೆಲುವು ನಿಶ್ಚಿತ! ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗಿಯಾಗಿ ಗಂಗಾ ಆರತಿ ನೆರವೇರಿಸಿ, ಭಗವಂತನಲ್ಲಿ ಪ್ರಾರ್ಥಿಸಿದೆ. ಪುಣ್ಯಸ್ನಾನ ಮಾಡಿ ಭಕ್ತಿ-ಭಾವಗಳಲ್ಲಿ ಮಿಂದು ಭಾವಪರವಶನಾದೆ ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ. ಶಿವಕುಮಾರ್ (DK Shivakumar) ಟ್ವೀಟ್​ ಮಾಡಿದ್ದಾರೆ. ಸದ್ಯ ಈ ಟ್ವೀಟ್​ ಕಾಂಗ್ರೆಸ್ ವಲಯದಲ್ಲಿ ಹೊಸ ಚರ್ಚೆಯನ್ನ ಹುಟ್ಟುಹಾಕಿದೆ.

ಎಐಸಿಸಿ ಅಧ್ಯಕ್ಷರು ಹೇಳಿದ್ದೇನು? 

ಓಡಿಸ್ಸಾದಲ್ಲಿ ಅಧ್ಯಕ್ಷರ ಬದಲಾವಣೆ ಮಾಡಿ ಬಂದಿದ್ದೇನೆ. ಅಲ್ಲಿ ಹಿಂದುಳಿದ ವರ್ಗದವರು ಅಧ್ಯಕ್ಷರಾಗಿದ್ದಾರೆ. ಬಾಕಿ ಉಳಿದ ರಾಜ್ಯಗಳಲ್ಲೂ ಕೆಲವೇ ದಿನಗಳಲ್ಲಿ ಬದಲಾವಣೆ ಆಗುತ್ತದೆ. ಈ ಬಗ್ಗೆ ಯಾರನ್ನು ಬದಲಾವಣೆ ಮಾಡಲಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ಹೇಳಲಿಕ್ಕೆ ಆಗಲ್ಲ. ನಾವು ಒಂದೊಂದು ರಾಜ್ಯಗಳಲ್ಲಿ ಬದಲಾವಣೆ ಮಾಡುತ್ತಿದ್ದೇವೆ. ಇನ್ನೂ ಒಂದೆರಡು ದಿನದಲ್ಲಿ ಕೆಲವು ರಾಜ್ಯಗಳಲ್ಲಿ ಬದಲಾವಣೆ ಮಾಡುತ್ತೇವೆ. ಎಂಟು ದಿನದಲ್ಲಿ ಎಲ್ಲಾ ಬದಲಾವಣೆ ಮುಗಿಯುತ್ತದೆ ಎಂದು ಹೇಳಿದ್ದಾರೆ.