ನ್ಯೂಸ್

ಕರ್ನಾಟಕದಲ್ಲೇ ಮೊದಲು NEP ಜಾರಿ ಮಾಡುವ ತರಾತುರಿ ಏನಿದೆ: ಡಿ.ಕೆ. ಶಿವಕುಮಾರ್​

ಬೆಂಗಳೂರು: ಚುನಾವಣೆ ಸಮಯದಲ್ಲಿ ನಾವು ಜನತೆಗೆ ಕೊಟ್ಟ ಮಾತಿನಂತೆ ಅಧಿಕಾರಕ್ಕೆ ಬಂದ ನಂತರ ರಾಷ್ಟ್ರೀಯ ಶಿಕ್ಷಣ ನೀತಿ-2020(NEP)ಯನ್ನು ರದ್ದು ಮಾಡುತ್ತೇವೆ ಎಂದು ಹೇಳಿದ್ದೆವು. ಅದರಂತೆ ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಡಿ.ಕೆ. ಶಿವಕುಮಾರ್​ ಕರ್ನಾಟಕದಲ್ಲೇ ಮೊದಲು ಎನ್ಇಪಿ‌ ಜಾರಿ ಮಾಡುವ ತರಾತುರಿ ಏನಿದೆ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ಚಾಟಿ ಬೀಸಿದ್ದಾರೆ.

ಅಧಿಕಾರಕ್ಕೆ ಬಂದ ನಂತರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಮಾಡುತ್ತೇವೆ ಎಂದು ಮಾತು ಕೊಟ್ಟಿದ್ದೆವು ಆ‌ ಮಾತಿಗೆ ನಾವು ಬದ್ಧರಾಗಿದ್ದೇವೆ. ಕರ್ನಾಟಕದಲ್ಲೇ ಮೊದಲು ಎನ್ಇಪಿ‌ ಜಾರಿ ಮಾಡುವ ತರಾತುರಿ ಏನಿದೆ ಗುಜರಾತ್, ಉತ್ತರ ಪ್ರದೇಶದಲ್ಲಿ ಏಕೆ ಎನ್ಇಪಿ ಜಾರಿ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದಲ್ಲಿರುವ ಶಿಕ್ಷಣ ವ್ಯವಸ್ಥೆ ದೇಶಕ್ಕೇ ಮಾದರಿಯಾಗಿದೆ. ಅದರಿಂದಾಗಿಯೇ ಇಂದು ಬೆಂಗಳೂರು ಐಟಿ ರಾಜಧಾನಿಯಾಗಿರುವುದು. ರಾಜ್ಯದಲ್ಲಿನ ಅದೆಷ್ಟೋ ಜನ ವಿದೇಶದಲ್ಲಿ ಒಳ್ಳೆ ಸ್ಥಾನದಲ್ಲಿದ್ದಾರೆ, ಅದಕ್ಕೂ ನಮ್ಮ ಶಿಕ್ಷಣ ವ್ಯವಸ್ಥೆಯೇ ಕಾರಣ ಎಂದು NEP ರದ್ಧತಿ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ವಿವರಣೆ ನೀಡಿದ್ದಾರೆ.