ನ್ಯೂಸ್

ದಿವ್ಯಾ ಪಹುಜಾ ಹತ್ಯೆ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಯ್ತು ಶಾಕಿಂಗ್ ಸಂಗತಿ!

ಹರಿಯಾಣ: ಜನವರಿ 2ರಂದು ಮಾಜಿ ಮಾಡೆಲ್ ದಿವ್ಯಾ ಪಹುಜಾ ಅವರನ್ನು ಹೋಟೆಲ್​ನ ರೂಮ್​ ಸಂಖ್ಯೆ 111 ರೊಳಗೆ ಕರೆದೊಯ್ದು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ ಬೆನ್ನಲ್ಲೇ ಇದೀಗ ದಿವ್ಯಾ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದ್ದು, ಶವಪರೀಕ್ಷೆಯ ವರದಿ ಪೊಲೀಸರ ಕೈಸೇರುವ ಮೂಲಕ ಅಚ್ಚರಿ ಸಂಗತಿಯನ್ನು ಬಹಿರಂಗಪಡಿಸಿದೆ.

ಮಾಜಿ ಮಾಡೆಲ್ ದಿವ್ಯಾ ಪಹುಜಾಗೆ ಪಾಯಿಂಟ್ ಬ್ಲಾಂಕ್ ರೇಂಜ್​ನಲ್ಲಿ ಗುಂಡು ಹಾರಿಸಲಾಗಿದ್ದು, ಆಕೆಯ ತಲೆಯಿಂದ ಬುಲೆಟ್ ಹೋಗಿರುವುದು ಪತ್ತೆಯಾಗಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತಿಳಿಸಲಾಗಿದೆ. ಹರಿಯಾಣದ ಹಿಸಾರ್‌ನ ಅಗ್ರೋಹಾ ವೈದ್ಯಕೀಯ ಕಾಲೇಜಿನಲ್ಲಿ ಮೋಹನ್ ಸಿಂಗ್ ಅವರ ನಿರ್ದೇಶನದಂತೆ ಇಬ್ಬರು ಮಹಿಳಾ ವೈದ್ಯರು ಸೇರಿದಂತೆ ನಾಲ್ವರು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ದಿವ್ಯಾ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಕುಟುಂಬದ ಸದಸ್ಯರು ಪಹುಜಾ ಮೃತದೇಹವನ್ನು ಗುರುಗ್ರಾಮಕ್ಕೆ ಕೊಂಡೊಯ್ದಿದ್ದು, ಅಲ್ಲಿಯೇ ಅಂತಿಮ ವಿಧಿವಿಧಾನಗಳನ್ನು ನಡೆಸಲಾಗುವುದು ಎಂದು ಹೇಳಿದೆ.

ಘಟನೆಯ ವಿವರ: ಜನವರಿ 2ರಂದು 27 ವರ್ಷದ ಮಾಜಿ ಮಾಡೆಲ್ ದಿವ್ಯಾ ಪಹುಜಾರನ್ನು ಗುರುಗ್ರಾಮ್‌ನ ಸಿಟಿ ಪಾಯಿಂಟ್ ಹೋಟೆಲ್‌ನ ಮಾಲೀಕ ಅಭಿಜೀತ್ ಸಿಂಗ್ (56) ಕೊಲೆ ಮಾಡಿದ್ದು, ಹತ್ಯೆಯಾದ ಹನ್ನೊಂದು ದಿನಗಳ ಬಳಿಕ ಆಕೆಯ ಶವ ಶನಿವಾರ ಹರಿಯಾಣದ ಫತೇಹಾಬಾದ್ ಜಿಲ್ಲೆಯ ತೊಹಾನಾದಲ್ಲಿರುವ ಕಾಲುವೆಯಲ್ಲಿ ಪತ್ತೆಯಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಪಹುಜಾ ಕೆಲವು ವೀಡಿಯೊಗಳನ್ನು ಮುಂದಿಟ್ಟು ತನ್ನನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಳು ಎಂದು ಆರೋಪಿ ಸಿಂಗ್ ಹೇಳಿಕೊಂಡಿದ್ದು, ಆಕೆಯ ಕೊಲೆಯಲ್ಲಿ ಭಾಗಿಯಾಗಿರುವುದು ದೃಢವಾಗಿದೆ. ಸಿಂಗ್ ಮಾಡಿರುವ ಆರೋಪ, ಹೇಳಿಕೆಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಗೆ ಸಂಬಂಧಿಸಿದಂತೆ ಇದುವರೆಗೆ ಪೊಲೀಸರು ಸಿಂಗ್, ಹೇಮರಾಜ್, ಓಂ ಪ್ರಕಾಶ್ ಸೇರಿದಂತೆ ಐವರನ್ನು ಸದ್ಯ ಬಂಧಿಸಿದ್ದು, ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ,(ಏಜೆನ್ಸೀಸ್).