Dipankar Bhattacharya: ದೇಶ್ಯಾದ್ಯಂತ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು (ಎಸ್‌ಐಆರ್) ವಿಸ್ತರಣೆ ಮಾಡುವ ನಿರ್ಧಾರ ತೆಗೆದುಕೊಂಡಿರುವ ಚುನಾವಣಾ ಆಯೋಗದ ಕ್ರಮವನ್ನು ಸಿಪಿಐ (ಎಂಎಲ್) ಲಿಬರೇಶನ್ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಖಂಡಿಸಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಭಟ್ಟಾಚಾರ್ಯˌ ಎಸ್‌ಐಆರ್ ಅನ್ನು "ನೋಟು ರದ್ದತಿಯಂತಹ ವಿಚ್ಛಿದ್ರಕಾರಕ ಪ್ರಕ್ರಿಯೆ ಎಂದು ಕರೆದಿದ್ದು ˌ ಮತಕಳ್ಳತನಕ್ಕೆ ಪರೋಕ್ಷ ಬೆಂಬಲವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಚುನಾವಣಾ ಆಯೋಗ (EC) ಪೌರತ್ವವನ್ನು ನಿರ್ಣಯಿಸಲು ಸಮರ್ಥ ಸಂಸ್ಥೆಯಲ್ಲ. ಆದರೂ ಕಳೆದ 75 ವರ್ಷಗಳ ಭಾರತೀಯ ಪ್ರಜಾಪ್ರಭುತ್ವದಲ್ಲಿ ಮೊಟ್ಟ ಮೊದಲ ಬಾರಿಗೆ ಜನರನ್ನು ತಮ್ಮ ಪೌರತ್ವವನ್ನು ಸಾಬೀತುಪಡಿಸುವಂತೆ ಕೇಳಲಾಗುತ್ತಿದೆ. ಹಿಂದೆಂದೂ ಈ ರೀತಿಯಾಗಿ ಯಾರು ಸೂಚನೆ ನೀಡಿರಲಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ಮೂಲಕ ಈ ಹಿಂದೆ ಇದ್ದ ಕಾರ್ಯವಿಧಾನಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆˌ ಸುಮಾರು ಎರಡು ಕೋಟಿ ಮತದಾರರ ಮೇಲೆ ಇದು ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ.
ವಿಪಕ್ಷಗಳು ಮಾಡುತ್ತಿರುವ ಆರೋಪಗಳೆಲ್ಲಾ ಸತ್ಯˌ ಇದರಲ್ಲಿ ಯಾವುದು ಕಾಲ್ಪನಿಕವಲ್ಲ ˌ ಈಗಾಗಲೇ 65 ಲಕ್ಷ ಹೆಸರುಗಳನ್ನು ಅಳಿಸಲಾಗಿದೆ ಮತ್ತು ಮೂರು ಲಕ್ಷಕ್ಕೂ ಹೆಚ್ಚು ಮತದಾರರಿಗೆ ನೋಟಿಸ್ ನೀಡಲಾಗಿದೆˌ ಗಮನಾರ್ಹ ಸಂಗತಿ ಎಂದರೆˌ ಬಿಜೆಪಿ ನಾಯಕರು ಹೇಳಿಕೊಳ್ಳುವ ಯಾವ ವಿದೇಶಿ ಒಳನುಸುಳುಕೋರರು ಇದರಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದರು.
ನೋಟು ರದ್ದತಿಯು ಆರ್ಥಿಕತೆಯನ್ನು ಅಸ್ತವ್ಯಸ್ತಗೊಳಿಸಿದಂತೆಯೇ, ಪಟ್ಟಿ ಪರಿಷ್ಕರಣೆ ಚುನಾವಣಾ ಪ್ರಕ್ರಿಯೆಯನ್ನು ಅಸ್ತವ್ಯಸ್ತಗೊಳಿಸಿದೆ ಮತ್ತು ಎರಡೂ ಹಠಾತ್, ಅನಿಯಂತ್ರಿತ ಮತ್ತು ಅತ್ಯಂತ ವಿಚ್ಛಿದ್ರಕಾರಕ ನಿರ್ಧಾರಗಳು ಎಂದು ಭಟ್ಟಾಚಾರ್ಯ ಹೇಳಿದ್ದಾರೆ. ಜನರು ನೋಟು ರದ್ದತಿಯಿಂದ ಬದುಕುಳಿದಂತೆಯೇ, ಬಿಹಾರ ಕೂಡ ಈ ಅಡಚಣೆಯನ್ನು ನಿವಾರಿಸಿ ಬದಲಾವಣೆಗೆ ನಿರ್ಣಾಯಕ ಜನಾದೇಶವನ್ನು ನೀಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. (ಏಜೆನ್ಸೀಸ್)