

ಚಿತ್ರದುರ್ಗ: ಐತಿಹಾಸಿಕ ಪ್ರಸಿದ್ಧ ಕೋಟೆನಾಡು ಚಿತ್ರದುರ್ಗ ತಾಲೂಕಿನ ಸಿದ್ದಾಪುರದ ಪಟೇಲ್ ಶಿವಕುಮಾರ್ ಅವರು, ಅಡಕೆ ವರ್ತಕರಾಗಿ ಭಾರಿ ಯಶಸ್ಸು ಕಂಡಿದ್ದಾರೆ. ಅವರ ವ್ಯಕ್ತಿತ್ವ ಕೇವಲ ವ್ಯವಹಾರಕ್ಕೆ ಸೀಮಿತವಲ್ಲ, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಅಪರೂಪದ ವ್ಯಕ್ತಿತ್ವ.
ಮೂಲತಃ ಕೃಷಿಕ ಕುಟುಂಬದಿಂದ ಬಂದು, ದ್ವಿತೀಯ ಪಿಯುಸಿಯ ನಂತರ ತಂದೆ ಆರಂಭಿಸಿದ್ದ ಅಡಕೆ ವ್ಯಾಪಾರಕ್ಕೆ ಹೆಗಲು ಕೊಟ್ಟರು. ಕ್ರಮೇಣವಾಗಿ ತಮ್ಮ ವೃತ್ತಿಬದ್ಧತೆ, ಅಡಕೆ ಬೆಳೆಗಾರರೊಂದಿಗೆ ಉತ್ತಮ ಒಡನಾಟ, ಚಾಣಾಕ್ಷತನ ಮತ್ತು ಸರಳ ಸಜ್ಜನಿಕೆಯ ನಡೆಯಿಂದ ಅಡಕೆ ವ್ಯಾಪಾರವನ್ನು ಉದ್ಯಮವಾಗಿ ಪರಿವರ್ತಿಸಿಕೊಂಡಿದ್ದಾರೆ. ‘ಯಶಸ್ವಿ ವರ್ತಕ’ ಎಂಬ ಹೆಗ್ಗಳಿಕೆ ಇವರದು.
ಒಂದು ಕಾಲದಲ್ಲಿ ಸಿದ್ದಾಪುರ ಅಡಕೆ ವ್ಯಾಪಾರಕ್ಕೆ ಪ್ರಸಿದ್ಧವಾಗಿದ್ದರೂ, ನಂತರ ರಾಜ್ಯದ ಪ್ರಮುಖ ಕೇಂದ್ರಗಳಲ್ಲಿ ಒಂದಾದ ಭೀಮಸಮುದ್ರದ ಅಡಕೆ ವರ್ತಕ ದಿಗ್ಗಜರ ನಡುವೆಯೂ ತಮ್ಮ ಉದ್ಯಮವನ್ನು ಅಭಿವೃದ್ಧಿಪಡಿಸಿದ ಪರಿ ಅನನ್ಯ. ಇದು ಅವರನ್ನು ಯಶಸ್ವಿ ಅಡಕೆ ವ್ಯಾಪಾರೋದ್ಯಮಿಗಳ ಸಾಲಿನಲ್ಲಿ ಗಟ್ಟಿಯಾಗಿ ನಿಲ್ಲುವಂತೆ ಮಾಡಿದೆ.
ಬಾಲ್ಯ, ಶೈಕ್ಷಣಿಕ ಹಿನ್ನೆಲೆ
ಶಿವಕುಮಾರ್ ಜನಿಸಿದ್ದು 1963ರ ಜೂನ್ 20 ರಂದು. ಒಂದರಿಂದ ಮೂರನೇ ತರಗತಿವರೆಗೆ ಸಿದ್ದಾಪುರದಲ್ಲಿ ವಿದ್ಯಾಭ್ಯಾಸ ಮಾಡಿದರು. ಬಳಿಕ ಸ್ವಾತಂತ್ರ್ಯ ಹೋರಾಟಗಾರರು, ಪಿಡಬ್ಲ್ಯೂಡಿ ಇಇ ಆಗಿದ್ದ ಸಂಬಂಧಿ ಜಿ. ಬಸಪ್ಪ ಅವರ ಒತ್ತಾಸೆಯ ಮೇರೆಗೆ ಚಿಕ್ಕಮಗಳೂರು ಸೇಂಟ್ ಜೋಸೆಫ್ ಕಾನ್ವೆಂಟ್‌ನಲ್ಲಿ 7 ನೇ ತರಗತಿವರೆಗೆ ಓದಿದರು.
8 ರಿಂದ 10ನೇ ತರಗತಿವರೆಗೆ ಚಿತ್ರದುರ್ಗದ ಕೋಟೆ ಮುನ್ಸಿಪಲ್ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿ, ಬಳಿಕ ಎಸ್‌ಜೆಎಂ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಸೈನ್ಸ್ ಪೂರ್ಣಗೊಳಿಸಿದರು. ಬಿಎಸ್‌ಸಿ ಪದವಿ ಪಡೆಯುವ ಇಚ್ಛೆಯಿದ್ದರೂ, ಎರಡು ವರ್ಷಗಳ ಕಾಲ ಭೀಮಸಮುದ್ರದಲ್ಲಿ ಅಡಕೆ ವ್ಯಾಪಾರದ ಆಳ-ಅಗಲ ಕಲಿತು ವ್ಯಾಪಾರಕ್ಕೆ ಧುಮುಕಿದರು.
ವೈಯಕ್ತಿಕ ಜೀವನ ಮತ್ತು ಕುಟುಂಬ
ರುದ್ರಪ್ಪ-ಕಲ್ಯಾಣಮ್ಮ ದಂಪತಿಯ ಮಗನಾದ ಶಿವಕುಮಾರ್ ಅವರದ್ದು ತುಂಬು ಕುಟುಂಬ. ಪ್ರಸ್ತುತ ಅವರ ಕುಟುಂಬ ಚಿತ್ರದುರ್ಗದ ಧವಳಗಿರಿ ಬಡಾವಣೆಯಲ್ಲಿ ನೆಲೆಸಿದೆ.
1995 ರಲ್ಲಿ ಇವರು ಭದ್ರಾವತಿಯ ಕವಿತಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಗೆ ಇಬ್ಬರು ಗಂಡು ಮಕ್ಕಳು. ಈಚೆಗೆ ಸಂಭವಿಸಿದ ಪುತ್ರ ಅಭಿಷೇಕ್ ಅಕಾಲಿಕ ನಿಧನ, ಅವರ ಬಾಳಿನಲ್ಲಿ ಭರಿಸಲಾಗದ ದುಃಖವಾಗಿದೆ.
ತಂದೆ, ತಾಯಿ, ಅಕ್ಕ ವಿಜಯಾ ಡಾ. ಚನ್ನಬಸಪ್ಪ, ತಂಗಿ ಪುಷ್ಪಾ ಪಿ.ಆರ್. ಮಂಜುನಾಥ್ ಹಾಗೂ ತಮ್ಮ ಜಿ.ಆರ್. ಪ್ರಭಾಕರ್ ಅವರು, ಸಹೋದರನ ಉದ್ಯಮದ ಏಳಿಗೆಗೆ ಕೈಜೋಡಿಸಿದ್ದಾರೆ. ತಂದೆ, ತಾಯಿ ಆಶೀರ್ವಾದ, ಕುಟುಂಬ ವರ್ಗದವರು, ಹಿತೈಷಿಗಳು, ರೈತರ ಸಹಕಾರದೊಂದಿಗೆ ಈ ಮಟ್ಟಕ್ಕೆ ಬೆಳೆದಿರುವುದಾಗಿ ಶಿವಕುಮಾರ್ ವಿನಮ್ರವಾಗಿ ಹೇಳುತ್ತಾರೆ.
ಬಿಬಿಎಂ ಪೂರ್ಣಗೊಳಿಸಿರುವ 2 ನೇ ಪುತ್ರ ಆದರ್ಶ ಅಪ್ಪನ ಉದ್ಯಮಕ್ಕೆ ಸಾಥ್ ನೀಡಿದ್ದಾರೆ. ಪಾನ್‌ಮಸಾಲ ನಿಷೇಧದಂತಹ ಸಂದರ್ಭದಲ್ಲಿ ಕೆಲವು ತಿಂಗಳುಗಳ ಕಾಲ ವಹಿವಾಟಿಗೆ ಅಡಚಣೆ ಆಗಿದ್ದರೂ, ಆ ಎಲ್ಲ ಸವಾಲುಗಳನ್ನು ಮೆಟ್ಟಿ ಗೆದ್ದಿದ್ದಾರೆ.
ಚನ್ನಗಿರಿ, ಶಿವಮೊಗ್ಗ, ಸಾಗರ, ಸಿದ್ದಾಪುರ, ತುಮಕೂರು, ದಾವಣಗೆರೆ ಇತ್ಯಾದಿಗಳಿಂದ ಅಡಕೆ ಖರೀದಿಸಿ ಉತ್ತರಪ್ರದೇಶದ ಕಾನ್ಪುರಕ್ಕೆ ಕಳುಹಿಸುತ್ತಿದ್ದಾರೆ.
ಕಷ್ಟ-ಸುಖಗಳಲ್ಲಿ ಸಮಾನವಾಗಿ ಭಾಗಿ
ಪತಿಯ ಆರ್ಥಿಕ, ಸಾಮಾಜಿಕ ಬೆಳವಣಿಗೆಯನ್ನು ಗಮನಿಸಿರುವ ಪತ್ನಿ ಕವಿತಾ, ಪ್ರೀತಿಯ ಮಡದಿಯಾಗಿ ಪತಿಯ ಕಷ್ಟ ಸುಖಗಳಲ್ಲಿ ಸಮಾನ ವಾಗಿ ಭಾಗಿಯಾಗುತ್ತಾ ಬಂದಿದ್ದಾರೆ. ಕೋವಿಡ್ ಸಂದರ್ಭದಲ್ಲಿ ನಮ್ಮ ಕುಟುಂಬ ವರ್ಗದ ಹತ್ತಕ್ಕೂ ಹೆಚ್ಚು ಮಂದಿ ಅನಾರೋಗ್ಯಕ್ಕೆ ಒಳಗಾಗಿ ಅನುಭವಿಸಿದ ಕಷ್ಟವನ್ನು ಗಮನಿಸಿ, ಅನೇಕರಿಗೆ ಆ ಸಂದರ್ಭದಲ್ಲಿ ಚಿಕಿತ್ಸೆಗೆ ನೆರವಾಗಿದ್ದಾರೆ.
ಇಂಜಿನಿಯರಿಂಗ್ ಓದುವ ಹಂಬಲವಿದ್ದರೂ, ಅವರನ್ನು ವ್ಯವಹಾರ ಸೆಳೆಯಿತು, ಅದರಲ್ಲಿ ಯಶಸ್ವಿಯಾಗಿದ್ದಾರೆ. ಶಿಸ್ತು, ಹೇಳಿದ ಸಮಯಕ್ಕೆ ಕೆಲಸವಾಗಬೇಕೆಂಬುದು ಪತಿಯ ನಿಲುವು. ವಿಜಯವಾಣಿ ಅವರಿಗೆ ವಿಜಯರತ್ನ ಅವಾರ್ಡ್ ಪ್ರದಾನ ಮಾಡುತ್ತಿರುವುದು ತುಂಬಾನೇ ಸಂತೋಷವೆನಿಸುತ್ತದೆ. ಶಿವಕುಮಾರ್ ಅವರನ್ನು ಅಭಿನಂದಿಸುತ್ತೇನೆ ಎನ್ನುತ್ತಾರೆ ಕವಿತಾ.
ಉದ್ಯಮದ ಬೆಳವಣಿಗೆ
ಆರಂಭದಲ್ಲಿ ಒಂದು ಲಕ್ಷ ರೂ. ಬಂಡವಾಳದೊಂದಿಗೆ ವ್ಯಾಪಾರ ಆರಂಭಿಸಿದ ಅವರು, ವಾರ್ಷಿಕ 100 ಕೋಟಿ ರೂ.ವರೆಗೆ ಉದ್ಯಮ ಕಟ್ಟಿ ಬೆಳೆಸಲು ಶ್ರಮಿಸಿದ್ದಾರೆ.
ಆದರ್ಶ ಟ್ರೇಡಿಂಗ್ ಕಂಪನಿ ಮತ್ತು ಆದರ್ಶ ಬೆಟಲ್‌ನಟ್ ಸೆಂಟರ್‌ಗಳನ್ನು ಸ್ಥಾಪಿಸಿ ನೂರಾರು ಕೋಟಿ ರೂ. ವಹಿವಾಟನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಉತ್ತರ ಭಾರತದ ಖರೀದಿದಾರರು ಮತ್ತು ದೊಡ್ಡ ದೊಡ್ಡ ಪಾನ್ ಮಸಾಲ ಕಂಪನಿ ಮಾಲೀಕರ ವಿಶ್ವಾಸದ ವ್ಯಕ್ತಿ ಇವರು. ಪಾನ್‌ಮಸಾಲ ಕಂಪನಿ ಮಾಲೀಕರ ಒಡನಾಟವಿದ್ದರೂ, ಪಾನ್‌ಮಸಾಲ ತಯಾರಿಕೆಗೆ ಕೈಹಾಕದ ಇವರು, ರಿಯಲ್ ಎಸ್ಟೇಟ್ ಮತ್ತು ಕಟ್ಟಡ ನಿರ್ಮಾಣ ಉದ್ಯಮಕ್ಕೂ ತಮ್ಮ ವಹಿವಾಟು ವಿಸ್ತರಿಸಿಕೊಂಡಿದ್ದಾರೆ.
ಅಡಕೆ ವ್ಯಾಪಾರದ ಆರಂಭದಲ್ಲಿ ಬಂಡವಾಳದ ಕೊರತೆ, ಪೈಪೋಟಿ, ಸವಾಲುಗಳ ನಡುವೆ ಗೆಲುವಿಗೆ ಹರಸಾಹಸ ಪಟ್ಟಿದ್ದಾರೆ. ಅವತ್ತಿನ ಕಾಲದಲ್ಲೇ ಕೋಟ್ಯಂತರ ರೂ. ವಹಿವಾಟು ನಡೆಸುತ್ತಿದ್ದ ಸಂದರ್ಭದಲ್ಲಿ ಯಶಸ್ವಿಯಾಗುವುದು ಹೇಗೆ ಎಂಬ ಶಂಕೆ ಎದುರಾದರೂ, ಛಲ ಬಿಡದೆ ವ್ಯಾಪಾರದಲ್ಲಿ ಏಳಿಗೆಯನ್ನು ಕಂಡಿದ್ದಾರೆ.
ಬಿ.ಟಿ. ಚನ್ನಬಸಪ್ಪ ಸಹೋದರರು, ಮಾಜಿ ಸಂಸದ ಜಿ.ಎಂ. ಮಲ್ಲಿಕಾರ್ಜುನಪ್ಪ ಆ್ಯಂಡ್ ಸನ್ಸ್, ಬಿ.ಎಸ್. ಕೋ. ದ ಜಿ.ಎಸ್. ಮಂಜುನಾಥ್ ಮೊದಲಾದ ದಿಗ್ಗಜರು ಹಾಕಿಕೊಟ್ಟ ಭದ್ರ ಬುನಾದಿಯೊಂದಿಗೆ ತಮ್ಮ ಸ್ಥಾನ ಗುರುತಿಸಿಕೊಂಡಿದ್ದಾರೆ.
1990ರಲ್ಲಿ ವ್ಯಾಪಾರದ ಕಲಿಕೆ ಆರಂಭಿಸಿದ ಇವರು, ಎರಡು ವರ್ಷಗಳಲ್ಲಿ ಅಧಿಕೃತವಾಗಿ ಅಡಕೆ ವ್ಯಾಪಾರ ಆರಂಭಿಸಿದರು. ರೈತರಿಂದ ಅಡಕೆ ಖರೀದಿಸಿ, ಉತ್ತರದ ರಾಜ್ಯಗಳಿಗೆ ಕಳುಹಿಸಲು ಆರಂಭಿಸಿದರು.
ಮಾರುಕಟ್ಟೆ ಏರಿಳಿತ ಅರಿತು ವ್ಯಾಪಾರ-ವಹಿವಾಟಿನ ಗ್ರಾಫ್ ಸದಾ ಏರಿಕೆಯತ್ತ ಇರುವಂತೆ ನೋಡಿ ಕೊಳ್ಳುತ್ತಿದ್ದಾರೆ. ಪ್ರಾಮಾಣಿಕತೆ, ರೈತರು ಮತ್ತು ವ್ಯಾಪಾರಿಗಳೊಂದಿಗೆ ನಿಕಟ ಸಂಪರ್ಕ, ಹೇಳಿದ ಸಮಯಕ್ಕೆ ರೈತರಿಗೆ ಪಾವತಿ ಮಾಡುವುದು, ಟ್ರೇಡಿಂಗ್ ಮೇಲಿದ್ದ ಹಿಡಿತ ಮತ್ತು ಅನುಭವ ಇವರನ್ನು ಯಶಸ್ವಿ ಉದ್ಯಮಿಯಾಗಿ ಗುರುತಿಸುವಂತೆ ಮಾಡಿದೆ.
ವ್ಯಾಪಾರದ ಗುರುಗಳು ಮತ್ತು ಸ್ಫೂರ್ತಿ
ತಂದೆ ಜಿ.ವಿ. ಪಟೇಲ್ ರುದ್ರಪ್ಪ ಅವರಿಂದ ವ್ಯಾಪಾರದ ಪಟ್ಟುಗಳನ್ನು ಕಲಿತ ಶಿವಕುಮಾರ್, ವ್ಯಾಪಾರದ ಸೂಕ್ಷ್ಮತೆಗಳನ್ನುಭೀಮಸಮುದ್ರದ ಬಿಟಿವಿ ಮಾಲೀಕರು, ಎಂಎಲ್‌ಸಿ ಆಗಿದ್ದ ಬಿ.ಟಿ. ಚನ್ನಬಸಪ್ಪ ಅವರಿಂದ ಕಲಿತರು. ಆದ್ದರಿಂದಲೇ ಶಿವಕುಮಾರ್, ಚನ್ನಬಸಪ್ಪ ಅವರನ್ನು ತಮ್ಮ ‘ಗಾಡ್‌ಫಾದರ್’ ಎಂದೇ ಅಭಿಮಾನದಿಂದ ಸ್ಮರಿಸುತ್ತಾರೆ.
ಸಾಮಾಜಿಕ ಮತ್ತು ಸಹಕಾರ ಕ್ಷೇತ್ರದ ಕೊಡುಗೆ
ಅಡಕೆ ಉದ್ಯಮವೊಂದೇ ಅಲ್ಲದೆ, ಸಂಘ-ಸಂಸ್ಥೆಗಳು, ಸಾಮಾಜಿಕ ಮತ್ತು ಧಾರ್ಮಿಕ ಸೇವೆಯಲ್ಲೂ ಶಿವಕುಮಾರ್ ಬದ್ಧತೆಯಿಂದ ತೊಡಗಿಸಿಕೊಂಡಿದ್ದಾರೆ. ಸಹಕಾರ ಕ್ಷೇತ್ರದಲ್ಲೂ ಗಣನೀಯ ಸೇವೆ ಸಲ್ಲಿಸುತ್ತಾ ಉತ್ತಮ ಸಹಕಾರಿಯಾಗಿಯೂ ಹೊರಹೊಮ್ಮಿದ್ದಾರೆ. ಈ ಸಾಮಾಜಿಕ ಸೇವೆಗೆ ತಂದೆಯೇ ಪ್ರೇರಣೆ.
ರುದ್ರಪ್ಪ ಅವರು ಸಿದ್ಧಾಪುರದ ವ್ಯವಸಾಯ ಸಹಕಾರ ಸಂಘದಲ್ಲಿ 15 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಚಿತ್ರದುರ್ಗದ ವೀರಶೈವ ಅರ್ಬನ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಐದು ವರ್ಷಗಳಿಂದ ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದು, ವಾರ್ಷಿಕ 55 ಲಕ್ಷ ರೂ.ಗಳಿಂದ 80-85 ಲಕ್ಷ ರೂ.ವರೆಗೆ ಲಾಭದಲ್ಲಿ ಮುನ್ನಡೆಸುತ್ತಿದ್ದಾರೆ. ಇದಕ್ಕೆ ಎಲ್ಲ ಸದಸ್ಯರ ಸಹಕಾರ ಕಾರಣವೆಂದು ಹೇಳುತ್ತಾರೆ.
ಸೊಸೈಟಿಯ ರಜತ ಮಹೋತ್ಸವದ ವೇಳೆ ಚಿತ್ರದುರ್ಗದ ಧವಳಗಿರಿ ಬಡಾವಣೆಯಲ್ಲಿ 3.5 ಕೋಟಿ ರೂ. ವೆಚ್ಚದ ರಜತ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ಆಗಿದೆ. ಇವರು ನಿರ್ದೇಶಕರಾಗಿದ್ದ ವೇಳೆ ಎಸ್‌ಜೆಎಂ ವಿದ್ಯಾಪೀಠದ ಶ್ರೀ ಬಸವೇಶ್ವರ ಮೆಡಿಕಲ್ ಕಾಲೇಜಿನ ಸೀಟುಗಳ ಸಂಖ್ಯೆ 100 ರಿಂದ 150 ಕ್ಕೆ ಏರಿಕೆಯಾಗಿದೆ.
ವಿಜಯರತ್ನ ಪ್ರಶಸ್ತಿ ಮತ್ತು ಹೆಮ್ಮೆಯ ಕ್ಷಣ
ವಿಜಯರತ್ನ ಅವಾರ್ಡ್ ಸಮಾಜ ಸೇವೆಗೆ ಮತ್ತಷ್ಟು ಒತ್ತಾಸೆಯಾಗಿದೆ. ಕನ್ನಡ ನಂ.1 ದಿನಪತ್ರಿಕೆ ನನ್ನಂತಹ ಸಾಮಾನ್ಯ ವರ್ತಕನನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಸಂತೋಷ ತಂದಿದೆ. ಸಾರಿಗೆ ಕ್ಷೇತ್ರದ ದಿಗ್ಗಜ ವಿಆರ್‌ಎಲ್ ಸಮೂಹದ ವಿಆರ್‌ಎಲ್ ಮೀಡಿಯಾ ಸಂಸ್ಥೆಯ ಪ್ರಶಸ್ತಿ ಪಡೆಯುವುದೇ ಹೆಮ್ಮೆ ತರುವಂಥದ್ದಾಗಿದೆ. ಸಿಂಡಿಕೇಟ್ ಬ್ಯಾಂಕಿನ ಹಿರಿಯರಾಗಿದ್ದ ಕೆ.ಕೆ. ಪೈ ಅವರು ನಮ್ಮ ತಂದೆಯನ್ನು ಕರೆಸಿ ಗೌರವಿಸಿದ್ದರು ಎಂದು ಶಿವಕುಮಾರ್ ನೆನಪಿಸಿಕೊಳ್ಳುತ್ತಾರೆ.
ಹತ್ತು ಹಲವು ಸನ್ಮಾನಗಳಿಗೆ ಭಾಜನ
ಇವರ ಸಾಮಾಜಿಕ ಮತ್ತು ಧಾರ್ಮಿಕ ಸೇವೆಗಳನ್ನು ಗುರುತಿಸಿ ರೋಟರಿ, ಬಾಳೆಹೊನ್ನೂರು ರಂಭಾಪುರಿ ಗುರುಪೀಠ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ನಾನಾ ಪ್ರಶಸ್ತಿಗಳಿಂದ ಇವರನ್ನು ಗೌರವಿಸಿವೆ. ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಕೂಡ ಇವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದ್ದಾರೆ.
ತಾವಾಯಿತು, ತಮ್ಮ ವ್ಯಾಪಾರ ವಹಿವಾಟು ಆಯಿತು ಎಂಬಂತೆ ಇರುವ ಶಿವಕುಮಾರ್ ಸದ್ದುಗದ್ದಲವಿಲ್ಲದೆ, ಎಲೆಮರೆ ಕಾಯಿಯಂತೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವಂಥವರು. ಓದು ಇವರ ನೆಚ್ಚಿನ ಹವ್ಯಾಸಗಳಲ್ಲಿ ಒಂದು.
ಪುತ್ರ ಅಭಿಷೇಕ್ ಸ್ಮರಣಾರ್ಥ 10 ಕಾರ್ಮಿಕರಿಗೆ ತಲಾ ಒಂದು ಲಕ್ಷ ರೂ. ಆರ್ಥಿಕ ನೆರವು ನೀಡಿದ್ದಾರೆ. ತಂದೆ ರುದ್ರಪ್ಪ ಅವರ ನಿರ್ದೇಶನದಂತೆ ಸಿದ್ದಾಪುರದ ಶ್ರೀ ವೀರಭದ್ರೇಶ್ವರ ದೇವಾಲಯದ ಜೀರ್ಣೋದ್ಧಾರವಾಗಿದೆ. ವಿಶೇಷವಾಗಿ ಶಿಕ್ಷಣಕ್ಕೆ ಆದ್ಯತೆ ಕೊಡುತ್ತ ಅನೇಕರ ಓದಿಗೆ ನೆರವಾಗುತ್ತಾ ಬಂದಿದ್ದಾರೆ.
ಇವರ ತಂದೆ ಹಲವರಿಗೆ ಸರ್ಕಾರಿ ನೌಕರಿ ಸಿಗಲು ಸಹಾಯ ಹಸ್ತ ಚಾಚಿದ್ದಾರೆ. ಕೋವಿಡ್‌ನಂತಹ ಸಂದರ್ಭದಲ್ಲಿ ಚಿಕಿತ್ಸೆ ವೆಚ್ಚ, ಆಹಾರ ಧಾನ್ಯಗಳ ಕಿಟ್ ವಿತರಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಹೊರ ರಾಜ್ಯದ ಕಾರ್ಮಿಕರಿಗೆ ಮೂರ್ನಾಲ್ಕು ತಿಂಗಳ ಕಾಲ ಊಟ ಮತ್ತು ವಸತಿಯನ್ನು ಒದಗಿಸಿದ್ದಾರೆ.
ಮಠಾಧೀಶರೊಂದಿಗೆ ಅವಿನಾಭಾವ ಸಂಬಂಧ
ನಾಡಿನ ನಾನಾ ಪೂಜ್ಯ ಮಠಾಧೀಶರೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ, ಚಿತ್ರದುರ್ಗ ತಾಲೂಕು ಸಿದ್ದಾಪುರದ ಅಡಕೆ ವರ್ತಕ ಪಟೇಲ ಶಿವಕುಮಾರ್ ಸಮಾಜ ಸೇವಕರೂ ಹೌದು. ವಿವಿಧ ಪಕ್ಷಗಳ ನಾಯಕರೊಂದಿಗೆ ಉತ್ತಮ ಒಡನಾಟವಿದೆ. ಆದರೂ ಯಾವ ಪಕ್ಷದೊಂದಿಗೂ ನಿಕಟವಾಗಿ ಗುರುತಿಸಿಕೊಂಡಿಲ್ಲ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹೀಗೆ ನಾಡಿನ ಪ್ರಮುಖ ಪಕ್ಷಗಳ ಹಿರಿಯ-ಕಿರಿಯ ನಾಯಕರೊಂದಿಗೆ ಹಾಗೂ ಸ್ಥಳೀಯ ರಾಜಕೀಯ ಪ್ರಮುಖರೊಂದಿಗೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ.
ಗ್ರಾಮ ಪಂಚಾಯಿತಿ ಸದಸ್ಯರಿಂದ ಮಂತ್ರಿ, ಮುಖ್ಯಮಂತ್ರಿಗಳವರೆಗೆ ಇವರ ಸ್ನೇಹವಿದೆ. ರಾಜಕಾರಣದ ಹೊರತಾಗಿಯೂ ಸಮಾಜ ಸೇವೆಗೆ ಅವಕಾಶವಿದೆ ಎಂಬುದು ಇವರ ನಂಬಿಕೆ.
ಶಿವಕುಮಾರ್ ಗೌರವಿಸಿದ ವಿಜಯೇಂದ್ರ ವಿಜಯವಾಣಿ ವಿಜಯ ರತ್ನ ಇಂಟರ್‌ನ್ಯಾಷನಲ್ ಆವಾರ್ಡ್‌ಗೆ ಭಾಜನರಾಗಿರುವ ಉದ್ಯಮಿ ಪಟೇಲ್ ಶಿವಕುಮಾರ್ ಅವರನ್ನು ಈಚೆಗೆ ಚಿತ್ರದುರ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗೌರವಿಸಿದರು.
ಚಿತ್ರದುರ್ಗದ ಸಿದ್ದಾಪುರದ ಪಟೇಲ್ ಶಿವಕುಮಾರ್ ಅವರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ವಿಶಿಷ್ಟವಾದ ಸೇವೆ ಸಲ್ಲಿಸುತ್ತಾ ಕ್ರಿಯಾಶೀಲರಾಗಿದ್ದಾರೆ. ಇಂತಹ ಪ್ರತಿಭಾವಂತರಿಗೆ ವಿಜಯವಾಣಿಯ ಅತ್ಯುನ್ನತ ಪ್ರಶಸ್ತಿ ಲಭಿಸುತ್ತಿರುವುದು ಇಡೀ ಕನ್ನಡ ನಾಡಿನ ಜನತೆಗೆ ಸಂತೋಷವನ್ನು ಉಂಟುಮಾಡಿದೆ. ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ. ಡಾ. ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ರಂಭಾಪುರೀ ಪೀಠ ಪಟೇಲ್ ಶಿವಕುಮಾರ್ ಈ ಪ್ರಶಸ್ತಿಗೆ ಭಾಜನರಾಗಿರುವುದು ಒಳ್ಳೆಯ ವಿಚಾರವಾಗಿದೆ. ಅವರು, ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಆದರ್ಶಪ್ರಿಯ ಜೀವನವನ್ನು ನಡೆಸಿದ್ದಾರೆ. ಧರ್ಮ, ತತ್ವ, ಪರಂಪರೆಗಳನ್ನು ನಿಷ್ಠೆಯಿಂದ ತಮ್ಮ ಕಾರ್ಯಗಳನ್ನು ನಿರ್ವಹಿಸಿದ್ದಾರೆ. ಇಂತಹ ಶ್ರೇಷ್ಟ ವ್ಯಕ್ತಿತ್ವವನ್ನು ಗುರುತಿಸಿ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪ್ರದಾನ ಮಾಡಿರುವುದು ಸಂತೋಷದ ಸಂಗತಿಯಾಗಿದೆ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಕಣ್ವಕುಪ್ಪೆ ಗವಿಮಠ ದೊಡ್ಡಪ್ಪಾಜಿಯ ಸಾಧನೆ ಖುಷಿ ತಂದಿದೆ. ಎಲ್ಲರೂ ಒಂದೇ ಎಂಬ ಭಾವನೆಯಿಂದ ಎಲ್ಲರನ್ನೂ ನೋಡುತ್ತಾರೆ. ಜನರ ಕಷ್ಟ ಸುಖಗಳಿಗೆ ಸ್ಪಂದಿಸುವಂತಹ ಒಳ್ಳೆಯ ಗುಣ ಅವರಲ್ಲಿದೆ. ವ್ಯಾಪಾರವೊಂದೇ ಅಲ್ಲ, ಅವರು ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಪ್ರಶಸ್ತಿಗಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಕಲ್ಯಾಣಿ, ಶಿವಕುಮಾರ್ ಸಹೋದರ ಪ್ರಭಾಕರ್ ಅವರ ಪುತ್ರಿ ಕುಟುಂಬ ವರ್ಗದವರೇ ಇರಲಿ, ಮತ್ತೊಬ್ಬರು ಇರಲಿ, ಅವರ ಕಷ್ಟ-ಸುಖಕ್ಕೆ ಕೈಲಾದ ನೆರವನ್ನು ನೀಡುವುದನ್ನು ಶಿವಕುಮಾರ್ ಮೊದಲಿನಿಂದಲೂ ರೂಢಿಸಿಕೊಂಡಿದ್ದಾರೆ. ಲಾಕ್‌ಡೌನ್ ವೇಳೆ ಹಲವರಿಗೆ ನೆರವಾಗಿದ್ದಾರೆ. ಅವರ ಜೀವನದ ಕಹಿ ಘಟನೆ ಅವರ ಪುತ್ರ ಅಭಿಷೇಕನ ಅಗಲಿಕೆ. ಇದರ ಹೊರತು ಕುಟುಂಬ ವರ್ಗದವರೆಲ್ಲ ಸಂತೋಷವಾಗಿದ್ದೇವೆ. ರಾಜಕೀಯ ಅವಕಾಶಗಳನ್ನು ಅವರು ವಿನಮ್ರವಾಗಿ ನಿರಾಕರಿಸಿದ್ದಾರೆ. ಪ್ರಶಸ್ತಿಗಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಪಿ.ಆರ್. ಮಂಜುನಾಥ್ ಭಾವ ಕುಟುಂಬದ ಒಗ್ಗಟ್ಟು ಹೆಮ್ಮೆಯ ವಿಷಯ ಆರೋಗ್ಯವೆಂಬುದು ಮುಖ್ಯ. ನನಗೆ ಈಗ 89 ವರ್ಷ, ನಾನು ಇವತ್ತಿಗೂ ಅರ್ಧ ಗಂಟೆ ನಡಿಗೆ, ಲಘು ವ್ಯಾಯಾಮ ಮಾಡುತ್ತೇನೆ. ಎಂಥದ್ದೇ ಸಂದರ್ಭದಲ್ಲೂ ಮನೆಯಲ್ಲೇ ಊಟ, ಉಪಾಹಾರ ಸೇವಿಸುವುದನ್ನು ಇಷ್ಟಪಡುತ್ತೇವೆ. ಕುಟುಂಬ ವರ್ಗದವರೆಲ್ಲ ಒಂದಾಗಿರುವುದು ನೆಮ್ಮದಿಯ ವಿಚಾರ. ನಮ್ಮೂರ ದೇವಾಲಯ ಜೀರ್ಣೋದ್ಧಾರವಾಗಿರುವುದು ಸಂತೋಷ ತಂದಿದೆ. ಆವತ್ತಿನ ಕಾಲದಲ್ಲಿ ನಾವು ಗಾಡಿಯಲ್ಲಿ ಅಡಕೆ ತಂದು ಚಳ್ಳಕೆರೆ, ಹಿರಿಯೂರು, ಚಿತ್ರದುರ್ಗದಲ್ಲಿ ಸಂತೆ ಮಾಡುತ್ತಿದ್ದೆವು. ರಸ್ತೆಗಳು ಸರಿಯಾಗಿ ಇರದ ಕಾಲವದು. ನನ್ನ ಮಗ ತುಂಬಾನೇ ಕಷ್ಟಪಟ್ಟು ಮೇಲೆ ಬಂದಿದ್ದಾನೆ. ಪಟೇಲ್ ಜಿ.ವಿ. ರುದ್ರಪ್ಪ ತಂದೆ ವ್ಯಾಪಾರದಲ್ಲಿ ನನಗೆ ಕ್ಲೀನ್ ಆಗಿ ಗೈಡ್ ಮಾಡುತ್ತಿದ್ದಾರೆ. ಅವರದ್ದು ಎಲ್ಲರೂ ಒಂದೇ ಎಂಬ ಭಾವನೆ. ಏನೇ ಖರ್ಚು ಮಾಡಿದರೂ ಲೆಕ್ಕ ಇಡಬೇಕೆಂಬುದು ಅವರ ಕಠಿಣ ನಿಲುವು. ಸಮಾಜ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಮಾಜ ಸೇವೆ ಎಂಬುದು ಅವರ ರಕ್ತದಲ್ಲೇ ಬಂದಿದೆ. ಪ್ರಶಸ್ತಿ ದೊರಕಿರುವುದಕ್ಕೆ ಅವರಿಗೆ ಕಂಗ್ರಾಟ್ಸ್ ಹೇಳುವೆ. ಆದರ್ಶ ಪುತ್ರ ಅಡಕೆ ಉದ್ಯಮಿ ಪಟೇಲ್ ಶಿವಕುಮಾರ್ ಅವರು ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಬಡವರು, ಕಾರ್ಮಿಕರು, ವಿದ್ಯಾರ್ಥಿಗಳಿಗೆ ನೆರವು ನೀಡುತ್ತಾ ಬಂದಿದ್ದಾರೆ. ಅವರು ವಿಜಯರತ್ನ ಇಂಟರ್ ನ್ಯಾಷನಲ್ ಆವಾರ್ಡ್‌ಗೆ ಭಾಜನರಾಗಿರುವುದು ಹರ್ಷ ತರಿಸಿದೆ. ಜಿ.ಎಚ್. ತಿಪ್ಪಾರೆಡ್ಡಿ ಮಾಜಿ ಶಾಸಕರು, ಚಿತ್ರದುರ್ಗ ಮಲೇಷಿಯಾದಲ್ಲಿ ಇತ್ತೀಚೆಗೆ ಜರುಗಿದ ಸಮಾರಂಭದಲ್ಲಿ ವಿಜಯವಾಣಿ ಕನ್ನಡದ ನಂ. 1ದಿನಪತ್ರಿಕೆ ವಿಜಯರತ್ನ ಇಂಟರ್ ನ್ಯಾಷನಲ್ ಆವಾರ್ಡ್‌ಗೆ ಪಟೇಲ್ ಶಿವಕುಮಾರ್ ಭಾಜನರಾಗಿರುವುದು ಅವರ ಬಹುಪಯೋಗಿ ಕೆಲಸಗಳಿಗೆ ಸಂದ ಗೌರವವಾಗಿದೆ. ಎಸ್. ಲಿಂಗಮೂರ್ತಿ ಮಾಜಿ ಅಧ್ಯಕ್ಷ, ರಾಜ್ಯ ಖನಿಜ ನಿಗಮ