ಬೆಂಗಳೂರು: ರಾಜ್ಯದ ಮಲೆನಾಡು ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಮಂಗನ ಕಾಯಿಲೆ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಟ್ವೀಟ್ ಮೂಲಕ ಕಿಡಿಕಾರಿದ್ದ ವಿಪಕ್ಷ ನಾಯಕ ಆರ್. ಅಶೋಕ್ಗೆ ಇದೀಗ ಸಚಿವರು ತಿರುಗೇಟು ಮಾಡಿದ್ದು, ವಿಪಕ್ಷ ನಾಯಕರಾದ ನಿಮಗೆ ಮಾಹಿತಿ ಇಲ್ಲವೆಂದರೆ ಹೇಗೆ? ಎಂದು ಹೇಳಿದ್ದಾರೆ.
“ಮಲೆನಾಡು ಜಿಲ್ಲೆಗಳಲ್ಲಿ ಮಾರಣಾಂತಿಕ ಮಂಗನ ಕಾಯಿಲೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ನವೆಂಬರ್ ತಿಂಗಳಿನಲ್ಲೇ ಮಲೆನಾಡು ಭಾಗದ ಅಲ್ಲಲ್ಲಿ ಕಾಯಿಲೆ ಕಾಣಿಸಿಕೊಂಡ ಬಗ್ಗೆ ವರದಿಯಾಗಿದ್ದರೂ ಎಚ್ಚೆತ್ತುಕೊಳ್ಳದ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದಿಂದ ಈಗಾಗಲೇ ಇಬ್ಬರು ಸೊಂಕಿತರು ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟೆಲ್ಲಾ ಮಾಹಿತಿ ಇದ್ದರೂ ಮುಂಜಾಗ್ರತಾ ಕ್ರಮ ಕೈಗೊಳ್ಳದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ ಈ ಸಾವುಗಳಿಗೆ ನೇರ ಹೊಣೆ ಎಂದು ಆರ್. ಆಶೋಕ ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ದಿನೇಶ್ ಗುಂಡೂರಾವ್, "ಮಂಗನ ಕಾಯಿಲೆಯಿಂದ ಯಾರಾದರೂ ಸಾವೀಗೀಡಾದರೆ ಆರೋಗ್ಯ ಸಚಿವರೆ ಹೊಣೆ ಎಂದಿರುವ ಮಾನ್ಯ ವಿಪಕ್ಷ ನಾಯಕರಾದ ಆರ್. ಅಶೋಕರವರೆ, ಮಲೆನಾಡು ಭಾಗದಲ್ಲಿ ಬೇಸಿಗೆ ಪ್ರಾರಂಭದಲ್ಲಿ ಕಂಡು ಬರುವ ಮಂಗನ ಕಾಯಿಲೆ (KFD) ನಿಯಂತ್ರಣಕ್ಕೆ ನಾವು ಈಗಾಗಲೇ ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ" ಎಂದರು.
"ಈ ಸೋಮವಾರವಷ್ಟೇ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರೋಗ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದೇನೆ. ಸೋಂಕಿನ ಪ್ರಾಥಮಿಕ ಲಕ್ಷಣ ಕಂಡ ಕೂಡಲೇ ಚಿಕಿತ್ಸೆ ನೀಡಲು ಆದೇಶಿಸಿದ್ದೇನೆ. ಅಲ್ಲದೆ ಖಾಯಿಲೆ ಹೆಚ್ಚಾಗಿರುವ ಪ್ರದೇಶಗಳಿಗೆ ನನ್ನ ಸೂಚನೆ ಮೇರೆಗೆ ಆಯುಕ್ತರಾದ ರಣದೀಪ್ ದೇವ್ ಅಧಿಕಾರಿಗಳ ಜೊತೆ ಹೋಗಿ ಪರಿಸ್ಥಿತಿ ಅವಲೋಕಿಸಿದ್ದಾರೆ" ಎಂದು ಹೇಳಿದರು.
"ಇಷ್ಟೆಲ್ಲಾ ಅಗತ್ಯ ಕ್ರಮ ತೆಗೆದುಕೊಂಡಿದ್ದರೂ ವಿಪಕ್ಷ ನಾಯಕರಾದ ನಿಮಗೆ ಮಾಹಿತಿ ಇಲ್ಲವೆಂದರೆ ಹೇಗೆ? ಆರೋಪಿಸಬೇಕು ಎನ್ನುವ ಕಾರಣಕ್ಕೆ ಗಾಳಿಯಲ್ಲಿ ಗುಂಡು ಹಾರಿಸಬೇಡಿ. ನೀವು ಆಧಿಕಾರದಲ್ಲಿದ್ದಾಗ ಕೋವಿಡ್ ವೇಳೆ ಚಾಮರಾಜನಗರದಲ್ಲಿ ಆಕ್ಸಿಜನ್ ಕೊಡದೆ 36 ಜನರನ್ನು ಸಾಯಿಸಿದ್ದ ಹೊಣೆ ಯಾರು ಹೊರುವರು ಮೊದಲು ತಿಳಿಸಿ" ಎಂದು ಟ್ವೀಟ್ ಮೂಲಕವೇ ತಿರುಗೇಟು ನೀಡಿದ್ದಾರೆ.