ಕೋಲ್ಕತ: ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಮತ್ತು ಕೆಲ ಕಾರ್ಯಕರ್ತರ ಮೇಲೆ ಗುರುವಾರ ಹಲ್ಲೆ ನಡೆಸಲಾಗಿದೆ. ದಿಲೀಪ್ ಘೋಷ್ ಅವರು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಹಲ್ಲೆ ನಡೆದಿದ್ದು, ಮಮತಾ ಬ್ಯಾನರ್ಜಿ ಅವರ ಸರ್ಕಾರದ ಮೇಲಿನ ಅನುಮಾನ ಹೆಚ್ಚಾಗುವಂತಾಗಿದೆ.
ಅಲಿಪುರ್ದಾರ್ ಜಿಲ್ಲೆಯಲ್ಲಿ ಈ ಹಲ್ಲೆ ನಡೆಸಲಾಗಿದೆ. ವರದಿಗಳ ಪ್ರಕಾರ, ಕಾಲ್ಚಿನಿ ಕ್ಷೇತ್ರದ ಶಾಸಕ ವಿಲ್ಸನ್ ಚಂಪಪುರಿ ಅವರು ಪ್ರಯಾಣಿಸುತ್ತಿದ್ದ ಗಾಡಿಯ ಮೇಲೂ ದಾಳಿ ನಡೆಸಲಾಗಿದೆ. ಇದರಿಂದಾಗಿ ಗಾಡಿಗೆ ಸಾಕಷ್ಟು ಹಾನಿಯಾಗಿದೆ ಎಂದು ಹೇಳಲಾಗಿದೆ.
ಈ ಹಿಂದೆ ಪೂರ್ವ ಮಿಡ್ನಾಪೋರ್ ಜಿಲ್ಲೆಯ ಹಲ್ಡಿಯಾ ಪಟ್ಟಣದಲ್ಲಿ ನಡೆದ ರ್ಯಾಲಿಯಲ್ಲಿ ಭಾಗವಹಿಸಿದ್ದ ದಿಲೀಪ್ ಅವರು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು. ಮುಂದಿನ ವಿಧಾನಸಭಾ ಚುನಾವಣೆಯ ಮತದಾನವನ್ನು ರಾಜ್ಯ ಪೊಲೀಸರ ಉಪಸ್ಥಿತಿಯ ಬದಲು ಕೇಂದ್ರ ಪಡೆಗಳ ಉಪಸ್ಥಿತಿಯಲ್ಲಿ ನಡೆಸಲಾಗುವುದು. ಟಿಎಂಸಿ ಕಾರ್ಯಕರ್ತರು ಚುನಾವಣೆಯಲ್ಲಿ ಅನ್ಯಾಯ ಮಾಡದಿರುವಂತೆ ಕಾವಲು ಕಾಯಲಾಗುವುದು. ಸಾಮಾನ್ಯರನ್ನು ಹಿಂಸಿಸುವ ಪಕ್ಷ ಮುಂದಿನ ಆರು ತಿಂಗಳಲ್ಲಿ ತಮ್ಮನ್ನು ತಾವು ತಿದ್ದಿಕೊಳ್ಳಬೇಕು. ಇಲ್ಲದಿದ್ದರೆ ಅವರ ಕೈ, ಕಾಲು, ಪಕ್ಕೆಲುಬು ಮುರಿಯುತ್ತದೆ ಎಂದು ಅವರು ಎಚ್ಚರಿಸಿದ್ದರು.
ಇದನ್ನೂ ಓದಿ: ಧ್ರುವ ಸರ್ಜಾ ಪ್ರೀತಿಯಿಂದ ತಂದ ತೊಟ್ಟಿಲಲ್ಲಿ ಜೂ.ಚಿರುವನ್ನು ಹಾಕದ ಮೇಘನಾ! ಬೇರೆ ತೊಟ್ಟಿಲು ತರಿಸಿದ್ದೇಕೆ?
ಕಿಡಿಗೇಡಿತನವನ್ನು ಹೆಚ್ಚು ಮಾಡಿದರೆ ಸ್ಮಶಾನಕ್ಕೆ ಕಳುಹಿಸುವ ಎಚ್ಚರಿಕೆಯನ್ನೂ ಅವರು ನೀಡಿದ್ದರು. ಇದೇ ದ್ವೇಷದಿಂದ ಟಿಎಂಸಿ ಕಾರ್ಯಕರ್ತರೇ ದಿಲೀಪ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಅನುಮಾನಗಳು ವ್ಯಕ್ತವಾಗಿವೆ. (ಏಜೆನ್ಸೀಸ್)