ನ್ಯೂಸ್

8 ತಿಂಗಳ ಹಿಂದೆ ಕಳೆದುಹೋಗಿದ್ದ, ಒಂದೇ ಒಂದು ಪದ ಉಸುರಿದ್ದರಿಂದ ಮತ್ತೆ ಮನೆ ಸೇರಿದ!; ಅಪರಿಚಿತನಿಗೆ ನೆರವಾದ ಪೊಲೀಸ್​

ನವದೆಹಲಿ: ಇಲ್ಲೊಬ್ಬ ಬುದ್ಧಿಮಾಂದ್ಯ ವ್ಯಕ್ತಿ ಎಂಟು ತಿಂಗಳ ಹಿಂದೆ ತಪ್ಪಿಸಿಕೊಂಡು ಪರದಾಡುತ್ತಿದ್ದು, ಕೊನೆಗೂ ಒಂದೇ ಒಂದು ಪದದಿಂದಾಗಿ ಈತ ಮತ್ತೆ ಮನೆ ಸೇರುವಂತಾಗಿದೆ. 30 ವರ್ಷದ ಈ ಬುದ್ಧಿಮಾಂದ್ಯ ವ್ಯಕ್ತಿಯನ್ನು ಪುನಃ ತನ್ನ ಮನೆಯವರೊಂದಿಗೆ ಸೇರಿಸುವ ಮೂಲಕ ದೆಹಲಿ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.

ಫೆ. 23-24ರ ರಾತ್ರಿ ಗಸ್ತಿನಲ್ಲಿದ್ದ ದೆಹಲಿ ಪೊಲೀಸ್ ಸಿಬ್ಬಂದಿಗೆ ದೆಹಲಿಯ ಸುಲ್ತಾನ್​ಪುರ ಗ್ರಾಮದಲ್ಲಿ ಈ ವ್ಯಕ್ತಿ ಕಾಣಿಸಿದ್ದಾನೆ. ಪೊಲೀಸರು ಈತನನ್ನು ವಿಚಾರಿಸಿದರೆ ಒಂದೇ ಒಂದು ಪದ ಬಿಟ್ಟು ಬೇರೇನೂ ಹೇಳುತ್ತಿರಲಿಲ್ಲ. ಆದರೂ ಬೇಸರಗೊಳ್ಳದ ಪೊಲೀಸ್ ಅದೊಂದು ಪದವನ್ನೇ ಆಧಾರವಾಗಿಟ್ಟುಕೊಂಡು ತನಿಖೆ ನಡೆಸಿ ಕೊನೆಯೂ ಈ ವ್ಯಕ್ತಿಯನ್ನು ಮನೆಯವರೊಂದಿಗೆ ಸೇರಿಸಿದ್ದಾರೆ.

ಪೊಲೀಸರು ಕೇಳಿದಾಗ ತನ್ನ ಹೆಸರು ಗೌರವ್ ಎಂಬುದನ್ನು ಬಿಟ್ಟರೆ ಆತ ಹೇಳುತ್ತಿದ್ದುದು ಒಂದೇ ಪದ, ಅದು 'ಹಾಸ್ಪಿಟಲ್'. ಹಾಸ್ಪಿಟಲ್​ ಎಂಬ ಪದವನ್ನು ಬಿಟ್ಟು ಬೇರೇನೂ ಹೇಳದ ಈ ವ್ಯಕ್ತಿಯನ್ನು ಮನೆ ಸೇರಿಸುವ ಸಲುವಾಗಿ ಪೊಲೀಸರು ಸುತ್ತಮುತ್ತ ತಮ್ಮ ನೆಟ್​ವರ್ಕ್ ಬಳಸಿ ವಿಚಾರಿಸಿದರೂ ಸುಳಿವು ಸಿಗಲಿಲ್ಲ.

ನಂತರ ಮನೋವೈದ್ಯರ ಬಳಿಗೆ ಕರೆದೊಯ್ದು ಈ ವ್ಯಕ್ತಿಯನ್ನು ಕೌನ್ಸೆಲಿಂಗ್​ಗೆ ಒಳಪಡಿಸಿದಾಗ ಈತ ಇನ್ನೊಂದು ಪದ ಹೇಳಿದ್ದ. ಈ ಬಾರಿ 'ಕಲಾವತಿ ಹಾಸ್ಪಿಟಲ್' ಎಂದು ಹೇಳಿದ್ದ. ಅಲ್ಲಿಂದ ಕಲಾವತಿ ಹಾಸ್ಪಿಟಲ್​ಗೆ ಈತನನ್ನು ಕರೆದೊಯ್ದು ವಿಷಯ ತಿಳಿಸಿದರೂ ಅಲ್ಲಿ ಯಾರೂ ಈತನನ್ನು ಗುರುತಿಸಲಿಲ್ಲ, ಅಂದರೆ ಈತನಿಗೆ ಸಂಬಂಧಪಟ್ಟವರು ಯಾರೂ ಅಲ್ಲಿರಲಿಲ್ಲ.

ಬಳಿಕ ಈತನ ಹೆಸರನ್ನು ಆಧರಿಸಿ ಸುತ್ತಮುತ್ತಲ ಊರಿನಲ್ಲಿ ದಾಖಲಾಗಿರುವ ನಾಪತ್ತೆ ಪ್ರಕರಣಗಳ ವಿವರಗಳನ್ನು ಕಲೆ ಹಾಕಿದಾಗ ದೆಹಲಿಯ ಶಾಸ್ತ್ರಿಪಾರ್ಕ್​ನ ಪಟ್ವಾ ಚೌಕ್​ ನಿವಾಸಿ ಗೌರವ್​ ಎಂಬ 30 ವರ್ಷದ ವ್ಯಕ್ತಿ ಕಾಣೆಯಾಗಿರುವ ಕುರಿತು 2020ರ ಜುಲೈ 11ರಂದು ದೂರು ದಾಖಲಾಗಿರುವುದು ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಹುಡುಕಾಟ ನಡೆಸಿದ ಪೊಲೀಸರಿಗೆ ಗೌರವ್​ ತಾಯಿಯನ್ನು ಪತ್ತೆ ಮಾಡಿ ಒಪ್ಪಿಸುವುದು ಸಾಧ್ಯವಾಗಿತ್ತು. ಕಳೆದ ಜುಲೈನಲ್ಲಿ ಈತನ ತಾಯಿ ಕಲಾವತಿ ಹಾಸ್ಪಿಟಲ್​ಗೆ ತಪಾಸಣೆಗೆಂದು ಕರೆದುಕೊಂಡು ಬಂದಿದ್ದಾಗ ಈತ ತಪ್ಪಿಸಿಕೊಂಡಿದ್ದು, ಹುಡುಕಾಡಿದರೂ ಸಿಕ್ಕಿರಲಿಲ್ಲ. ಆದರೆ ಈಗ ಪೊಲೀಸರು ಒಂದು ಪದದ ಬೆನ್ನತ್ತಿ ಇಬ್ಬರನ್ನು ಮತ್ತೆ ಒಂದಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. (ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ