ನ್ಯೂಸ್

ದಿಲ್ ರಾಜು ನಿರ್ಮಾಣದ ಮೂರು ಚಿತ್ರಕ್ಕೂ ವೈಷ್ಣವಿ ಚೈತನ್ಯ ನಾಯಕಿ! ಒಪ್ಪಂದಕ್ಕೆ ಸಹಿ ಮಾಡಿದ್ರಾ 'ಬೇಬಿ' ನಟಿ?

ಆಂಧ್ರಪ್ರದೇಶ: 2023ರ ಜುಲೈ 14ರಂದು ಕೇವಲ ತೆಲುಗು ಭಾಷೆಯಲ್ಲಿ ಮಾತ್ರ ಬಿಡುಗಡೆಗೊಂಡ ಆನಂದ್​ ದೇವರಕೊಂಡ ಮತ್ತು ವೈಷ್ಣವಿ ಚೈತನ್ಯ ಮುಖ್ಯಭೂಮಿಕೆಯಲ್ಲಿ ನಟಿಸಿದ 'ಬೇಬಿ' ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸುವುದರ ಜತೆಗೆ ಸಿನಿಪ್ರಿಯರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಚಿತ್ರದ ಕಥಾಹಂದರಕ್ಕೆ ವ್ಯಾಪಕ ಮೆಚ್ಚುಗೆ ಸಲ್ಲಿಸಿದ್ದ ಪ್ರೇಕ್ಷಕರು, ವೈಷ್ಣವಿ ಪಾತ್ರದಲ್ಲಿ ಮಿಂಚಿದ ಚೈತನ್ಯ ನಟನೆಗೆ ಫಿದಾ ಆಗಿ, ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದರು. ಬೇಬಿ ಸಿನಿಮಾದ ಸಕ್ಸಸ್​ ಬೆನ್ನಲ್ಲೇ ನಟಿಗೆ ಅನೇಕ ಸಿನಿಮಾಗಳ ಆಫರ್​ ಒಲಿದು ಬಂದಿದ್ದವು! ಆದ್ರೆ, ಯಾವ ಚಿತ್ರಗಳನ್ನು ಆಯ್ದುಕೊಂಡರು ಎಂಬುದರ ಮಾಹಿತಿ ದೊರೆತಿರಲಿಲ್ಲ. ಇದೀಗ ಅದರ ಸುಳಿವು ಸಿಕ್ಕಿದೆ.

ಸಾಯಿ ರಾಜೇಶ್​ ನಿರ್ದೇಶನದಲ್ಲಿ ಮೂಡಿಬಂದ 'ಬೇಬಿ' ಚಿತ್ರವು ಅಷ್ಟು ಪ್ರಚಾರ ಪಡೆಯದೆ ಹೋದರೂ, ಪ್ರೇಕ್ಷಕರ ಅಭಿಪ್ರಾಯಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡಿತು. ಇಬ್ಬರ ನಾಯಕರ ಮಧ್ಯೆ ತಮ್ಮ ನಟನೆಯ ಮೂಲಕ ಕಂಗೊಳಿಸಿದ ವೈಷ್ಣವಿ, ಅಪಾರ ಸಂಖ್ಯೆಯ ಸಿನಿರಸಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಸದ್ಯ ತೆಲುಗು ಚಿತ್ರರಂಗದ ಬಹುಬೇಡಿಕೆಯ ನಟಿಯರಲ್ಲಿ ಚೈತನ್ಯ ಕೂಡ ಒಬ್ಬರಾಗಿದ್ದು, ನಿರ್ಮಾಪಕ ದಿಲ್ ರಾಜು ಅವರ ಮುಂದಿನ ಚಿತ್ರಗಳಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಸದ್ಯ ಟಾಲಿವುಡ್​ ಅಂಗಳದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

'ಲವ್ ಮಿ' ಎಂಬ ಚಿತ್ರಕ್ಕೆ ನಾಯಕಿಯಾಗಿ ವೈಷ್ಣವಿಯನ್ನು ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಇದೀಗ ಹೊರಬಿದ್ದಿದೆ. ಈ ಚಿತ್ರದಲ್ಲಿ ದಿಲ್ ರಾಜು ಸೋದರಳಿಯ, ಆಶಿಶ್ ರೆಡ್ಡಿ ನಾಯಕನಾಗಿದ್ದು, ಇದೊಂದು ಹಾರರ್, ಕಾಮಿಡಿ ಜಾನರ್​ ಒಳಗೊಂಡ ಸಿನಿಮಾ. ಆಶಿಶ್ ಜತೆಗೆ ವೈಷ್ಣವಿ ರೊಮ್ಯಾನ್ಸ್ ಮಾಡಲಿದ್ದಾರೆ. ಇದರೊಟ್ಟಿಗೆ ದಿಲ್ ರಾಜು ಅವರ ಮುಂದಿನ ಎರಡು ಚಿತ್ರಗಳಿಗೂ ವೈಷ್ಣವಿ ಸಹಿ ಹಾಕಿದ್ದಾರೆ ಎನ್ನಲಾಗಿದೆ.

ದಿಲ್ ರಾಜು ಅವರ ಮೂರು ಸಿನಿಮಾಗಳ ಪೈಕಿ 'ಲವ್ ಮಿ' ಮೊದಲನೆಯದು ಎಂದು ಹೇಳಲಾಗಿದ್ದು, ಈ ಮೂರು ಚಿತ್ರಗಳಲ್ಲಿ ಅಭಿನಯಿಸುತ್ತಿರುವ ವೈಷ್ಣವಿಗೆ ರಾಜು ಭರ್ಜರಿ ಸಂಭಾವನೆಯನ್ನೇ ನೀಡಿದ್ದಾರೆ ಎಂಬ ಸುದ್ದಿಯೂ ಇದೆ. ಸದ್ಯ ಈ ಬಗ್ಗೆ ಇಲ್ಲಿಯವರೆಗೂ ಯಾವುದೇ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ. ಆದ್ರೆ, ಈ ಸುದ್ದಿ ಸಿನಿಪ್ರಿಯರ ಗಮನ ಸೆಳೆದಿದೆ. ಲವ್ ಮಿ ಚಿತ್ರದ ಶೂಟಿಂಗ್ ಶೀಘ್ರವೇ ಪ್ರಾರಂಭವಾಗಲಿದ್ದು, ದಿಲ್ ರಾಜು 2024ರ ಮೊದಲಾರ್ಧದಲ್ಲಿ ಚಿತ್ರವನ್ನು ತೆರೆಗೆ ತರಲು ಯೋಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ,(ಏಜೆನ್ಸೀಸ್).