ನ್ಯೂಸ್

ಸುಶಾಂತ್​ ಸಿಂಗ್​ ರಜಪೂತ್​ ಪಾಲಿಗೆ ವೃತ್ತಿವೈಷಮ್ಯ ಆಯಿತೇ ಉರುಳು?

ಮುಂಬೈ: ಬಾಲಿವುಡ್​ ನಟರಾಗಿದ್ದ ಸುಶಾಂತ್​ ಸಿಂಗ್​ ರಜಪೂತ್​ ಅವರ ಪಾಲಿಗೆ ವೃತ್ತಿವೈಷಮ್ಯ ಉರುಳಾಯಿತೇ ಎಂಬ ಬಗ್ಗೆ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಡಾ. ಆರ್​.ಎನ್​. ಕೂಪರ್​ ಮುನ್ಸಿಪಲ್​ ಸಾರ್ವಜನಿಕ ಆಸ್ಪತ್ರೆ ವೈದ್ಯರು ಸಲ್ಲಿಸಿರುವ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಗೃಹ ಸಚಿವ ಅನಿಲ್​ ದೇಶ್​ಮುಖ್​, ನೇಣು ಬಿಗಿದುಕೊಂಡಿದ್ದರಿಂದಲೇ ಉಸಿರುಗಟ್ಟಿ ಸುಶಾಂತ್​ ಮೃತಪಟ್ಟಿದ್ದಾರೆ ಎಂದು ಹೇಳಿದರು.

ಆದರೆ, ಕೆಲವು ಮಾಧ್ಯಮಗಳಲ್ಲಿ ವೃತ್ತಿವೈಷಮ್ಯದಿಂದಾಗಿ ಸುಶಾಂತ್​ ಖಿನ್ನತೆಗೆ ಒಳಗಾಗಿದ್ದರು ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ಆಯಾಮದಲ್ಲೂ ತನಿಖೆ ನಡೆಸುವಂತೆ ಮುಂಬೈ ಪೊಲೀಸರಿಗೆ ಸೂಚಿಸಿರುವುದಾಗಿ ತಿಳಿಸಿದರು.

ಸೋಮವಾರ ನಡೆದ ಸುಶಾಂತ್​ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸುಶಾಂತ್​ ಅವರ ಸ್ನೇಹಿತೆ ರಿಯಾ ಚಕ್ರವರ್ತಿ ಮತ್ತು

ಸ್ನೇಹಿತ ಮಹೇಶ್​ ಶೆಟ್ಟಿಯನ್ನು ಮುಂಬೈ ಪೊಲೀಸರು ವಿಚಾರಣೆಗೆ ಒಳಪಡಿಸಿದರು ಎನ್ನಲಾಗಿದೆ.

ಇವರೊಂದಿಗೆ ಇನ್ನೂ ಹಲವಾರು ಜನರನ್ನು ಪ್ರಶ್ನಿಸಲಾಗಿದೆ. ಅವರೆಲ್ಲರಿಂದಲೂ ಸುಶಾಂತ್​ ಸಾವಿಗೆ ನಿಖರವಾದ ಕಾರಣ ಏನೆಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಲಾಯಿತು ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

ಸುಶಾಂತ್​ ಆತ್ಮಹತ್ಯೆ ಪ್ರಕರಣದ ತನಿಖೆಗಾಗಿ ಮುಂಬೈ ಪೊಲೀಸರು ಬಾಂದ್ರಾ ಪೊಲೀಸ್​ ಠಾಣೆಯ ಸಿಬ್ಬಂದಿಯನ್ನು ಒಳಗೊಂಡ ತಂಡವನ್ನು ರಚಿಸಿದ್ದಾರೆ. ಅಲ್ಲದೆ, ಕ್ರೈಂ ಬ್ರ್ಯಾಂಚ್​-ಸಿಐಡಿ ಕೂಡ ತನಿಖೆ ಆರಂಭಿಸಿದ್ದಾರೆ. ಈ ಎರಡು ತಂಡದ ಅಧಿಕಾರಿಗಳೊಂದಿಗೆ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸುಶಾಂತ್​ ಅವರ ಫ್ಲ್ಯಾಟ್​ಗೆ ಭೇಟಿ ನೀಡಿ ಪರಿಶೀಲಿಸಿದರು.