ರಾಯಭಾರ ಕಚೇರಿ ಸಿಬ್ಬಂದಿಯನ್ನು ಹೊಡೆದದ್ದು ನಾವಲ್ಲ, ಜನರ ಗುಂಪು!

pak indian high commission1
Published on

ಇಸ್ಲಾಮಾಬಾದ್​: ಭಾರತೀಯ ರಾಯಭಾರ ಕಚೇರಿ ಇಬ್ಬರು ಸಿಬ್ಬಂದಿಯನ್ನು ಅಪಹರಿಸಿ, 10 ಗಂಟೆ ಅಕ್ರಮ ಬಂಧನದಲ್ಲಿ ಇರಿಸಿಕೊಂಡಿದ್ದ ಪಾಕಿಸ್ತಾನದ ಅಧಿಕಾರಿಗಳು ಅವರಿಬ್ಬರ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ.

ಬಿಡುಗಡೆಯಾದ ಬಳಿಕ ರಾಯಭಾರ ಕಚೇರಿಗೆ ಮರಳಿದ ಸಿಬ್ಬಂದಿ ಈ ಮಾಹಿತಿಯನ್ನು ನೀಡಿದ್ದಾರೆ. ಅಕ್ರಮ ಬಂಧನದಲ್ಲಿ ಇರಿಸಿಕೊಂಡಿದ್ದ ಸಂದರ್ಭದಲ್ಲಿ ನಮ್ಮ ಮೇಲೆ ಮನಬಂದಂತೆ ಹಲ್ಲೆ ಮಾಡಲಾಯಿತು. ಅಲ್ಲದೆ, ನಾವು ಪ್ರಯಾಣಿಸುತ್ತಿದ್ದ ಬಿಎಂಡಬ್ಲ್ಯು 8ಎಲ್​-104 ಕಾರನ್ನು ಬೇಕೆಂದೇ ಜಖಂಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗುಂಪಿನಿಂದ ಹಲ್ಲೆ: ಈ ಇಬ್ಬರು ಸಿಬ್ಬಂದಿ ತಮ್ಮ ಕಾರನ್ನು ಅತಿವೇಗವಾಗಿ ಚಲಾಯಿಸಿ, ಪಾದಾಚಾರಿಗಳ ಮೇಲೆ ಹರಿಸಿದ್ದರು. ಅಲ್ಲದೆ, ಕಾರನ್ನು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದರು. ಇದರಿಂದ ರೊಚ್ಚಿಗೆದ್ದ ಜನ ಕಾರನ್ನು ತಡೆದು, ಇವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪಾಕಿಸ್ತಾನ ಹೇಳಿದೆ.

ಜನರ ಗುಂಪಿನಿಂದ ಇವರನ್ನು ರಕ್ಷಿಸಿ, ಸೂಕ್ತ ಭದ್ರತೆಯಲ್ಲಿ ಇರಿಸಲಾಗಿತ್ತು. ಈ ಸಂದರ್ಭದಲ್ಲಿ ಅವರ ಮೇಲೆ ಯಾವುದೇ ಹಲ್ಲೆ ಮಾಡಿಲ್ಲ ಎಂದು ತನ್ನನ್ನು ಸಮರ್ಥಿಸಿಕೊಂಡಿದೆ. ಸಿಬ್ಬಂದಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಭಾರತೀಯ ರಾಯಭಾರ ಕಚೇರಿ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net