ನ್ಯೂಸ್

ಬಗೆಹರಿದ ಬಿಕ್ಕಟ್ಟು; ಮಹಾರಾಷ್ಟ್ರಕ್ಕೆ ದೇವೇಂದ್ರ ಕಿಂಗ್

ಮುಂಬೈ: ಸುಮಾರು 11 ದಿನಗಳ ರಾಜಕೀಯ ಬೆಳವಣಿಗೆ ಗಳ ನಂತರ, ಮಹಾರಾಷ್ಟ್ರದಲ್ಲಿ ನೂತನ ಸರ್ಕಾರ ರಚನೆಗೆ ಹಾದಿ ಪ್ರಶಸ್ತವಾಗಿದೆ. ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದು, ಶಿವಸೇನೆಯ ಏಕನಾಥ ಶಿಂಧೆ ಹಾಗೂ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಅಜಿತ್ ಪವಾರ್ ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸುವ ನಿರೀಕ್ಷೆ ಇದೆ. ಮುಂಬೈನ ಆಜಾದ್ ಮೈದಾನದಲ್ಲಿ ಗುರುವಾರ ಸಾಯಂಕಾಲ 5.30ರಿಂದ ಸಮಾರಂಭ ನಡೆಯಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತಿತರ ನಾಯಕರು ಭಾಗವಹಿಸಲಿದ್ದಾರೆ.

ಫಡ್ನವಿಸ್ ಅವರು ಶಿಂಧೆ ಹಾಗೂ ಅಜಿತ್ ಪವಾರ್ ಜೊತೆಗೂಡಿ ಬುಧವಾರ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರನ್ನು ಭೇಟಿಯಾಗಿ ಸರ್ಕಾರ ರಚನೆ ಹಕ್ಕು ಮಂಡಿಸಿದರು. ನವೆಂಬರ್ 26ರಂದೇ ಸರ್ಕಾರ ಅಸ್ತಿತ್ವಕ್ಕೆ ಬರಬೇಕಿತ್ತಾದರೂ, ಸಿಎಂ ಹುದ್ದೆ ಕಾರಣಕ್ಕಾಗಿ ತಡವಾಗಿದೆ. ದೇವೇಂದ್ರ ಫಡ್ನವಿಸ್ ಅವರು ಮಂಗಳವಾರ ರಾತ್ರಿ ಏಕನಾಥ ಶಿಂಧೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಸನ್ನಿವೇಶ ತಿಳಿಯಾಯಿತು. ಅದರ ಬೆನ್ನಲ್ಲೇ, ಬುಧವಾರ ಬೆಳಗ್ಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆದು ಫಡ್ನವಿಸ್ ಅವರನ್ನು ನಾಯಕನನ್ನಾಗಿ ಆರಿಸಲಾಯಿತು. ಬಳಿಕ ಅವರು ರಾಜ್ಯಪಾಲರನ್ನು ಭೇಟಿಯಾದರು.

ಮಹಾಯುತಿ ಅಧಿಕಾರಕ್ಕೆ ಬರುವಲ್ಲಿ ಏಕನಾಥ ಶಿಂಧೆ ಆಡಳಿತ ಮುಖ್ಯ ಕಾರಣ. ಹೀಗಾಗಿ ಅವರಿಗೆ ಮತ್ತೆ ಸಿಎಂ ಹುದ್ದೆ ನೀಡಬೇಕು ಎಂಬುದು ಶಿವಸೇನೆ ವಾದವಾಗಿತ್ತು. ಕಳೆದ ಬಾರಿ ಶಿಂಧೆಗೆ ಸಿಎಂ ಹುದ್ದೆ ಬಿಟ್ಟುಕೊಟ್ಟು ಎಲ್ಲ ರೀತಿಯಲ್ಲೂ ಸಹಕರಿಸಲಾಗಿದೆ. ಈಗ ಬಿಜೆಪಿ ಹೆಚ್ಚು ಸ್ಥಾನ ಗಳಿಸಿದ್ದು, ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಬೇಕಾದ್ದು ನ್ಯಾಯಯುತ ಎಂದು ಬಿಜೆಪಿ ಪಟ್ಟುಹಿಡಿದಿತ್ತು. ಹೀಗಾಗಿ ಸರ್ಕಾರ ರಚನೆ ವಿಳಂಬವಾಯಿತು.

3ನೇ ಬಾರಿ ಮುಖ್ಯಮಂತ್ರಿ: ನಾಗ್ಪುರದ ಮರಾಠಿ ಬ್ರಾಹ್ಮಣ ಕುಟುಂಬದಲ್ಲಿ 1970ರ ಜುಲೈ 22ರಂದು ದೇವೇಂದ್ರ ಫಡ್ನವಿಸ್ ಜನನ. ತಂದೆ ಗಂಗಾಧರ ಫಡ್ನವಿಸ್ ಜನಸಂಘದಲ್ಲಿದ್ದು, ನಾಗ್ಪುರದಿಂದ ಎಂಎಲ್​ಸಿ ಆಗಿದ್ದರು. ತಾಯಿ ಸರಿತಾ ಅವರು ವಿದರ್ಭ ಹೌಸಿಂಗ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕಿಯಾಗಿದ್ದರು. ದೇವೇಂದ್ರ ಫಡ್ನವಿಸ್​ರ ಆರಂಭಿಕ ಶಿಕ್ಷಣ ಇಂದಿರಾ ಕಾನ್ವೆಂಟ್​ನಲ್ಲಿ (ಇಂದಿರಾ ಗಾಂಧಿ ಹೆಸರಿನ ಶಾಲೆ) ಆಯಿತು. ತುರ್ತು ಪರಿಸ್ಥಿತಿ ವಿರೋಧಿಸಿದ್ದಕ್ಕಾಗಿ ಗಂಗಾಧರ ಫಡ್ನವಿಸ್ ಅವರನ್ನು ಜೈಲಿಗೆ ಕಳಿಸಲಾಗಿತ್ತು. ತಂದೆಯನ್ನು ಕಾರಾಗೃಹಕ್ಕೆ ಕಳಿಸಿದ ಇಂದಿರಾ ಗಾಂಧಿ ಹೆಸರಿನ ಶಾಲೆಗೆ ಹೋಗುವುದಿಲ್ಲ ಎಂದು ಬಾಲಕ ದೇವೇಂದ್ರ ತಕರಾರು ತೆಗೆದಿದ್ದರಿಂದ ಸರಸ್ವತಿ ವಿದ್ಯಾಲಯಕ್ಕೆ ಸೇರಿಸಲಾಯಿತು. ಕಾನೂನು ಪದವಿ ಪಡೆದಿರುವ ಅವರು, ಬಿಜಿನೆಸ್ ಮ್ಯಾನೇಜ್​ವೆುಂಟ್​ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ನಲ್ಲಿ ಸಕ್ರಿಯರಾಗಿದ್ದ ಫಡ್ನವಿಸ್, 22ನೇ ವಯಸ್ಸಿನಲ್ಲಿ ಕಾಪೋರೇಟರ್ ಆದರು. 27ನೇ ವಯಸ್ಸಿನಲ್ಲಿ ನಾಗ್ಪುರ ಮೇಯರ್ ಆದರು. ಅತಿ ಕಿರಿಯ ವಯಸ್ಸಿನಲ್ಲಿ ಈ ಹುದ್ದೆಗೇರಿದ ಹೆಗ್ಗಳಿಕೆ ಅವರದು (ದೇಶಮಟ್ಟದಲ್ಲಿ ಎರಡನೇ ಅತಿ ಕಿರಿಯ ವಯಸ್ಸಿನ ಮೇಯರ್ ಎಂಬ ಖ್ಯಾತಿ.) 1999ರಿಂದ ನಾಗ್ಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಇದೀಗ ಮೂರನೇ ಬಾರಿ ಮಹಾರಾಷ್ಟ್ರ ಮುಖ್ಯಮಂತ್ರಿ ಯಾಗುತ್ತಿದ್ದಾರೆ. 2014ರ ಅಕ್ಟೋಬರ್ 31ರಿಂದ 2019ರ ನವೆಂಬರ್ 12ರವರೆಗೆ ಮೊದಲ ಸಲ ಸಿಎಂ ಆಗಿದ್ದರು. 2019ರಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಇಲ್ಲದಿದ್ದಾಗ, ಸಿಎಂ ವಿಚಾರದಲ್ಲಿ ಶಿವಸೇನೆ ಹಾಗೂ ಬಿಜೆಪಿ ನಡುವೆ ಹಗ್ಗಜಗ್ಗಾಟ ನಡೆದು, ಕೊನೆಗೆ ಅಚ್ಚರಿಯ ಬೆಳವಣಿಗೆಯಲ್ಲಿ ಎನ್​ಸಿಪಿಯ ಅಜಿತ್ ಪವಾರ್ ಬೆಂಬಲದೊಂದಿಗೆ 2019ರ ನವೆಂಬರ್ 23ರಂದು ಫಡ್ನವಿಸ್ ಸರ್ಕಾರ ರಚಿಸಿದರು. ಆದರೆ ಕೇವಲ ಐದು ದಿನಗಳಲ್ಲಿ ಆ ಸರ್ಕಾರ ಉರುಳಿತು. ನಂತರ ಮಹಾ ವಿಕಾಸ ಅಘಾಡಿ ಮೈತ್ರಿಕೂಟ ಅಸ್ತಿತ್ವಕ್ಕೆ ಬಂದು ಸರ್ಕಾರ ರಚಿಸಿತು. ಅದಾದ ಎರಡು ವರ್ಷಗಳಲ್ಲಿ ಏಕನಾಥ ಶಿಂಧೆ ಬಣ ಶಿವಸೇನೆಯಿಂದ ಹೊರಬಂದು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿತು.

ಆಮಂತ್ರಣ ಪತ್ರಿಕೆಯಲ್ಲಿ ತಾಯಿಯ ಹೆಸರು: ಪ್ರಮಾಣವಚನ ಸ್ವೀಕಾರ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಪ್ರಮುಖರಿಗೆ ನೀಡಲಾಗುತ್ತಿದೆ. ಇದರಲ್ಲಿ ‘ದೇವೇಂದ್ರ ಸರಿತಾ ಗಂಗಾಧರರಾವ್ ಫಡ್ನವಿಸ್’ ಎಂದು ನಮೂದಿಸಲಾಗಿದೆ. ಸರಿತಾ ದೇವೇಂದ್ರ ಫಡ್ನವಿಸರ ತಾಯಿಯ ಹೆಸರು. ಮಹಾರಾಷ್ಟ್ರದಲ್ಲಿ ಹೆಸರಿನ ಮುಂದೆ ತಂದೆಯ ಹೆಸರು ಹಾಕುವುದು ಸಾಮಾನ್ಯ ರೂಢಿ. ಆದರೆ ಇಲ್ಲಿ ತಾಯಿಯ ಹೆಸರು ನಮೂದಿಸಿರುವುದು ವಿಶೇಷ. ಚುನಾವಣೆಗೆ ಸಲ್ಲಿಸಿದ ಅಫಿಡವಿಟ್​ನಲ್ಲಿ ದೇವೇಂದ್ರ ಗಂಗಾಧರ ಫಡ್ನವಿಸ್ ಎಂದು ಉಲ್ಲೇಖಿಸಿದ್ದಾರೆ.

ವಿಶೇಷ ಅಧಿವೇಶನ: ಡಿಸೆಂಬರ್ 7ರಿಂದ ಮೂರು ದಿನಗಳ ಕಾಲ ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನ ನಡೆಯಲಿದ್ದು, ನೂತನ ಶಾಸಕರ ಪ್ರಮಾಣವಚನ ಹಾಗೂ ಸ್ಪೀಕರ್ ಆಯ್ಕೆ ನಡೆಯಲಿದೆ. ಚಳಿಗಾಲದ ಅಧಿವೇಶನವು ಡಿ.16ರಿಂದ 21ರವರೆಗೆ ನಾಗ್ಪುರದಲ್ಲಿ ನಡೆಯಲಿದೆ.

ಸಂಪುಟದಲ್ಲಿ ಇರುವಂತೆ ಶಿಂಧೆ ಅವರಲ್ಲಿ ಕೇಳಿಕೊಂಡಿದ್ದೇನೆ. ಅವರು ಒಪು್ಪವ ವಿಶ್ವಾಸ ಇದೆ. ಮುಖ್ಯಮಂತ್ರಿ ಹುದ್ದೆ ಎಂಬುದು ನಮ್ಮ ನಡುವೆ ಆದ ತಾಂತ್ರಿಕ ಒಪ್ಪಂದವಷ್ಟೇ. ಹಿಂದೆಯೂ ಒಟ್ಟಿಗೆ ನಿರ್ಧಾರ ತೆಗೆದುಕೊಂಡಿದ್ದೇವೆ. ಮುಂದೆಯೂ ಹಾಗೇ ಮಾಡುತ್ತೇವೆ.

| ದೇವೇಂದ್ರ ಫಡ್ನವಿಸ್ ನಿಯೋಜಿತ ಸಿಎಂ