ನ್ಯೂಸ್

ಒಂದೇ ಕಲ್ಲಿಗೆ ಮೂರು ಹಕ್ಕಿ ಹೊಡೆದುರುಳಿಸಲು ಗೌಡರ ಪ್ಲ್ಯಾನ್​; ಜಾತ್ಯತೀತ ಜನತಾದಳ ಮುಗಿಸುವ ಕೈ ತಂತ್ರಕ್ಕೆ ಪ್ರತಿತಂತ್ರ..

Webdesk - Ravikanth

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ರಾಜಕೀಯ ನಡೆಯೇ ಒಂದೇ ಕಲ್ಲಿಗೆ ಒಂದಕ್ಕಿಂತ ಹೆಚ್ಚಿನ ಹಕ್ಕಿಗಳನ್ನು ಹೊಡೆದುರುಳಿಸುವುದು. ಈಗಲೂ ಅವರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಪಾಠ ಕಲಿಸಲು ಅಂತಹದ್ದೆ ಹೆಜ್ಜೆ ಇಡಲಾರಂಭಿಸಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಏಟು-ಎದಿರೇಟು ತಾರಕಕ್ಕೇರಿ ರಾಜ್ಯ ರಾಜಕೀಯ ಅಖಾಡ ರಂಗೇರುವ ವಾತಾವರಣ ಈಗಲೇ ಆರಂಭವಾಗಿದೆ. ರಾಜ್ಯದಲ್ಲಿ ಜೆಡಿಎಸ್ ಅಸ್ತಿತ್ವದಲ್ಲಿದ್ದಷ್ಟು ತಮ್ಮ ಪಕ್ಷಕ್ಕೆ ಪೆಟ್ಟು ಎಂದೇ ಭಾವಿಸಿರುವ ಕಾಂಗ್ರೆಸ್ ಮುಖಂಡರು ಆ ಪಕ್ಷದಿಂದ ಸಾಕಷ್ಟು ಮಂದಿಯನ್ನು ಸೆಳೆಯುವ ಪ್ರಯತ್ನ ಆರಂಭಿಸಿರುವುದು ತೆನೆ ಪಕ್ಷದ ವರಿಷ್ಠರನ್ನು ಕೆರಳಿಸಿದೆ. ಈ ಅಂಶವೇ ಮುಂದಿನ ಬೆಳವಣಿಗೆಗಳಿಗೆ ಮುನ್ನುಡಿ ಬರೆದಿದೆ. ರಾಜ್ಯದಲ್ಲಿ ಈಗ ಜೆಡಿಎಸ್ ಹಾಗೂ ಬಿಜೆಪಿ ಎರಡು ಪಕ್ಷಗಳಿಗೂ ಕಾಂಗ್ರೆಸ್ ಸಮಾನ ವಿರೋಧಿ. ಶತ್ರುವಿನ ಶತ್ರು ಮಿತ್ರ ಎಂಬಂತೆ ಜೆಡಿಎಸ್ ಹಾಗೂ ಬಿಜೆಪಿ ಒಂದಾಗುವುದಕ್ಕೆ ಮೇಲ್ಮನೆ ಚುನಾವಣೆ ದಾರಿ ತೋರಿಸಿದೆ ಎಂದು ರಾಜಕೀಯ ವಿಶ್ಲೇಷಕರು ಗುರುತಿಸುತ್ತಾರೆ.

ಜಾತ್ಯತೀತತೆ ಹೆಸರಿನಲ್ಲಿ ಜೆಡಿಎಸ್ ಇದುವರೆಗೂ ಕಾಂಗ್ರೆಸ್ ಜತೆ ಸೇರುವುದಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಒಲವು ತೋರಿಸುತ್ತಿದ್ದರು. ಯಾವಾಗ ಜೆಡಿಎಸ್​ಗೆ ಅಸ್ತಿತ್ವದ ಪ್ರಶ್ನೆ ಎದುರಾಗಿದೆಯೋ ಆಗ ಬಿಜೆಪಿ ಕಡೆ ಪಥ ಬದಲಿಸಿದ್ದಾರೆ. ಆ ಮೂಲಕ ತಮ್ಮ ಸಾಂಪ್ರದಾಯಿಕ ನೆಲದಲ್ಲಿ ಪಕ್ಷ ಉಳಿಸಿಕೊಳ್ಳುವುದು ಅವರ ಉದ್ದೇಶವಾಗಿದೆ. ಅದೇ ಹಿನ್ನೆಲೆಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೊಂದಿಗೆ ಮಾತುಕತೆ ನಡೆದಿದೆ ಎನ್ನಲಾಗಿದೆ.

ಕಾಂಗ್ರೆಸ್ ಮಾಡಿದ್ದೇನು?: ಜೆಡಿಎಸ್ ಅಸ್ತಿತ್ವ ಇರುವುದು ಹಳೇ ಮೈಸೂರು ಭಾಗದಲ್ಲಿ, ಇಲ್ಲಿ ಬಿಜೆಪಿಗೆ ಅಂತಹ ನೆಲೆ ಇಲ್ಲ. ಜೆಡಿಎಸ್ ಇದ್ದರೆ ಮತ ವಿಭಜನೆಯಾಗಿ ಬಿಜೆಪಿಗೆ ಅನುಕೂಲವಾಗುತ್ತದೆ. ಆದ್ದರಿಂದ ಜೆಡಿಎಸ್ ಶಕ್ತಿ¤ಯನ್ನೇ ಕುಂದಿಸಿದರೆ ತನ್ನ ಗೆಲುವು ಸುಲಭ ಎಂಬುದು ಕಾಂಗ್ರೆಸ್ ರಣತಂತ್ರ. ಒಂದೆಡೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಜೆಡಿಎಸ್ ಮುಖಂಡರನ್ನು ಸೆಳೆದರೆ, ಇನ್ನೊಂದೆಡೆಯೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅದೇ ಕಾರ್ಯ ಮಾಡುತ್ತಿದ್ದಾರೆ. ಮೈಸೂರು, ಮಂಡ್ಯ, ಹಾಸನ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಲ್ಲಿ ಅನೇಕರನ್ನು ಸೆಳೆಯುವ ಪ್ರಯತ್ನ ನಡೆದಿತ್ತು. ಮುಂದಿನ ಚುನಾವಣೆ ವೇಳೆಗೆ ಪ್ರಮುಖ ನಾಯಕರನ್ನು ಕಳೆದುಕೊಳ್ಳಬಹುದು ಎಂಬ ಆತಂಕ ದಳಪತಿಗಳನ್ನು ಕಾಡಿದೆ. ಯಾವಾಗ ಕಾಂಗ್ರೆಸ್ ಮುಖಂಡರು ತಮ್ಮ ಬುಡಕ್ಕೆ ಕೈ ಹಾಕಿದರೋ ಅದರಿಂದ ಕೆರಳಿದ ದೇವೇಗೌಡ ಹಾಗೂ ಕುಮಾರಸ್ವಾಮಿ ಒಂದೇ ಕಲ್ಲಿಗೆ ಮೂರು ಹಕ್ಕಿ ಹೊಡೆದುರಳಿಸಲು ಮುಂದಾಗಿದ್ದಾರೆ.

ಬಿಜೆಪಿಗೂ ಅದೇ ಬೇಕಾಗಿತ್ತು...

ಇಡೀ ದೇಶದಲ್ಲಿ ಬಿಜೆಪಿಗೆ ಕಾಂಗ್ರೆಸ್ ಪ್ರಬಲ ಎದುರಾಳಿಯಾಗಿರುವುದು ಕರ್ನಾಟಕದಲ್ಲಿ ಮಾತ್ರ. ಇಲ್ಲಿ ಕಾಂಗ್ರೆಸ್ ಮುಗಿಸಬೇಕು ಎಂಬುದು ಬಿಜೆಪಿ ಉದ್ದೇಶ. ಆ ಉದ್ದೇಶಕ್ಕೆ ಯಾವುದೇ ಪ್ರಯತ್ನವನ್ನು ಬೇಕಾದರೂ ಮಾಡಲು ಕಮಲ ಪಡೆ ಸಿದ್ಧವಿದೆ. ಇದೀಗ ರೊಟ್ಟಿಯೇ ಜಾರಿ ತುಪ್ಪಕ್ಕೆ ಬಿತ್ತು ಎಂಬಂತೆ ಜೆಡಿಎಸ್ ತನ್ನಡೆ ವಾಲುತ್ತಿರುವುದು ಬಿಜೆಪಿಗೂ ಖುಷಿಯ ವಿಚಾರವಾಗಿದೆ. ಮುಂದಿನ ವಿಧಾನಸಭಾ ಚುನಾವಣೆ ಹೊತ್ತಿಗೆ ಇದು ಮಹತ್ವ ಪಡೆಯಲಿದೆ. 2 ಪಕ್ಷಗಳ ನಡುವೆ ಸ್ಥಾನ ಹೊಂದಾಣಿಕೆ ಇರು ವುದಿಲ್ಲ. ಜೆಡಿಎಸ್ ಕಣದಲ್ಲಿದ್ದಷ್ಟು ಮತ ವಿಭಜನೆಯಾಗಿ ತನಗೆ ಲಾಭವಾಗುತ್ತದೆ ಎಂಬ ಲೆಕ್ಕಚಾರ ಬಿಜೆಪಿಯದ್ದು.

ವಿರೋಧಿಗಳ ಮಣಿಸುವ ತಂತ್ರಗಳೇನು?

  • ಪರ್ಯಾಯ ಹುಡುಕಾಟದಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಗುಬ್ಬಿಯಲ್ಲಿ ವಾಸುಗೆ ಪರ್ಯಾಯವಾಗಿ ನಾಗರಾಜ್ ಹುಡುಕಿದ್ದಾರೆ. ಚಾಮುಂಡೇಶ್ವರಿಗೂ ಹಣವಂತರೊಬ್ಬರನ್ನು ಗುರುತಿಸಿದ್ದಾರೆ. ಯಾವ ಯಾವ ಹಾಲಿ ಹಾಗೂ ಮಾಜಿ ಶಾಸಕರು ಪಕ್ಷ ತೊರೆಯುತ್ತಾರೋ ಅಂತಹವರಿಗೆ ಅವರದೇ ಕ್ಷೇತ್ರದಲ್ಲಿ ಸೋಲಿನ ರುಚಿ ತೋರಿಸುವ ಕಾರ್ಯತಂತ್ರ ರೂಪಿಸಿಕೊಂಡಿದ್ದಾರೆ.
  • ಒಂದೆಡೆ ತಮ್ಮಿಂದ ದೂರವಾಗುವವರಿಗೆ ಬುದ್ದಿ ಕಲಿಸುವುದಾದರೆ, ಇನ್ನೊಂದೆಡೆ ಇದಕ್ಕೆ ಕಾರಣವಾಗುವ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಿದ್ದಾರೆ. ಸಿದ್ದರಾಮಯ್ಯ ಎಲ್ಲಿಯೇ ಸ್ಪರ್ಧಿಸಿದರೂ ಅವರಿಗೆ ಸೋಲಿನ ರುಚಿ ತೋರಿಸುವುದು, ಡಿ.ಕೆ.ಶಿವಕುಮಾರ್​ರನ್ನು ಕನಕಪುರದಲ್ಲಿಯೇ ಮಣಿಸುವುದು, ಶ್ರೀನಿವಾಸಪುರದಲ್ಲಿ ರಮೇಶ್​ಕುಮಾರ್ ಗೆಲ್ಲದಂತೆ ನೋಡಿಕೊಳ್ಳುವುದು, ಇದೇ ರೀತಿ ಜೆಡಿಎಸ್​ನ ಹಿಟ್ ಲಿಸ್ಟ್​ನಲ್ಲಿ ಇನ್ನೂ ಕೆಲ ಕಾಂಗ್ರೆಸ್ ಮುಖಂಡರಿದ್ದಾರೆ.
  • ಕಾಂಗ್ರೆಸ್​ನಿಂತ ಬಿಜೆಪಿ ಜತೆಗಿನ ಸಖ್ಯ ಉತ್ತಮ ಎಂಬ ಭಾವನೆ ಮೊದಲಿನಿಂದಲೂ ಎಚ್​ಡಿಕೆ ಮನಸ್ಸಿನಲ್ಲಿದೆ. ಕಾಂಗ್ರೆಸ್​ಗೆ ಬುದ್ದಿ ಕಲಿಸಲು ಬಿಜೆಪಿಯ ನೆರವು ಜೆಡಿಎಸ್​ಗೆ ಈಗ ಅನಿವಾರ್ಯ. ಅದಕ್ಕಾಗಿ ಬಿಜೆಪಿಗೆ ಹತ್ತಿರವಾಗುವ ಪ್ರಯತ್ನ ಸದ್ದಿಲ್ಲದೇ ನಡೆದಿವೆ. ಬಿಜೆಪಿ ಗೆದ್ದರೂ ಪರವಾಗಿಲ್ಲ ಕಾಂಗ್ರೆಸ್ ಸೋಲಬೇಕು ಎಂಬುದು ದಳಪತಿಗಳ ಜೆಡಿಎಸ್ ಗುರಿಯಾಗಿದೆ.