ಆಂಧ್ರಪ್ರದೇಶ: 'ಆರ್ಆರ್ಆರ್' ಖ್ಯಾತಿಯ ನಟ ಜೂ. ಎನ್‌ಟಿಆರ್ ಅಭಿನಯದ ಬಹುನಿರೀಕ್ಷಿತ 'ದೇವರ' ಸಿನಿಮಾ ಸದ್ಯ ಭಾರತೀಯ ಚಿತ್ರರಂಗದಲ್ಲಿ ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡುತ್ತಿದೆ. ಸಿನಿಮಾ ಕುರಿತು ಹೆಚ್ಚಿನ ಮಾಹಿತಿ ಅಪ್ಡೇಟ್ ಮಾಡಿ ಎಂದು ಒತ್ತಾಯಿಸಿದ್ದ ಎನ್‌ಟಿಆರ್ ಫ್ಯಾನ್ಸ್ಗೆ ಇದೀಗ ಚಿತ್ರತಂಡ ಹೊಸ ಮಾಹಿತಿ ಪ್ರಕಟಿಸಿದೆ.
'ಜನತಾ ಗ್ಯಾರೇಜ್' ಚಿತ್ರ ಸೂಪರ್ಹಿಟ್ ಆದ ನಂತರದಲ್ಲಿ ಜೂನಿಯರ್ ಎನ್‌ಟಿಆರ್ ಅವರೊಂದಿಗೆ ನಿರ್ದೇಶಕ ಕೊರಟಾಲ ಶಿವ ಕೈಜೋಡಿಸಿದ್ದು, 'ದೇವರ' ಮೂಲಕ ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ಅಬ್ಬರಿಸಲು ಮುಂದಾಗಿದ್ದಾರೆ. ಸದ್ಯ ಈ ಚಿತ್ರ ತೆಲುಗಿನ ಬಹುನಿರೀಕ್ಷಿತ ಯೋಜನೆಗಳಲ್ಲಿ ಒಂದಾಗಿದ್ದು, ಸಿನಿಮಾವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.
ಶೀಘ್ರವೇ ಚಿತ್ರವನ್ನು ಸಿನಿಪ್ರೇಕ್ಷಕರ ಮುಂದೆ ಪ್ರಸ್ತುತಪಡಿಸಲು ಹೆಚ್ಚು ಸಮಯವನ್ನು ವ್ಯರ್ಥ ಮಾಡದೆ ಚಿತ್ರೀಕರಣದಲ್ಲಿ ಬ್ಯುಸಿಯಿರುವ ಚಿತ್ರತಂಡ, ಸದ್ಯ ಹೈದರಾಬಾದ್‌ನಲ್ಲಿ ವಿಶೇಷವಾಗಿ ನಿರ್ಮಿಸಲಾದ ಸೆಟ್‌ನಲ್ಲಿ ವಿಲನ್ ಪಾತ್ರಧಾರಿಯಾದ ಸೈಫ್ ಅಲಿ ಖಾನ್ ಮತ್ತು ಜೂನಿಯರ್ ಎನ್‌ಟಿಆರ್ ಮುಖಾಮುಖಿಯ ದೃಶ್ಯಗಳನ್ನು ಚಿತ್ರೀಕರಿಸುತ್ತಿದೆ.
ಇದನ್ನೂ ಓದಿ: VIDEO| ಸಾರ್ವಜನಿಕವಾಗಿ ಪಿಸ್ತೂಲ್ ಹಿಡಿದು ತಿರುಗಾಟ; ಪ್ರಶ್ನಿಸಿದ ಪತ್ರಕರ್ತರಿಗೆ ಅವಾಜ್ ಹಾಕಿ ದರ್ಪ ಮೆರೆದ ಶಾಸಕ
'ದೇವರ' ಚಿತ್ರಕ್ಕೆ ನಾಯಕಿಯಾಗಿ ಬಾಲಿವುಡ್ ನಟಿ ಜಾನ್ವಿ ಕಪೂರ್ ಕಾಣಿಸಿಕೊಂಡಿದ್ದು, ಅವರ ಪಾತ್ರದ ಚಿತ್ರೀಕರಣ ಇನ್ನೂ ಪ್ರಾರಂಭವಾಗಿಲ್ಲ ಎಂದು ಹೇಳಲಾಗಿದೆ. ಸಿನಿಮಾಗೆ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ಮ್ಯೂಸಿಕ್ ಕಂಪೋಸ್ ಮಾಡಲಿದ್ದು, ಈ ಹಿಂದೆಯೇ ನಿಗದಿಪಡಿಸಿರುವಂತೆ ಚಿತ್ರ ಏಪ್ರಿಲ್ 5, 2024 ರಂದು ಬಿಡುಗಡೆಯಾಗಲಿದೆ,(ಏಜೆನ್ಸೀಸ್).