ಕೇಂದ್ರ ವಲಯ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ ವಿರುದ್ದ ಷಡ್ಯಂತ್ರ: ಮಂಡ್ಯದಲ್ಲಿ ಬೃಹತ್ ಪ್ರತಿಭಟನೆ

Protest for Central Zone IGP Dr.BR Ravikantegowda
Published on

ಮಂಡ್ಯ: ಕೇಂದ್ರ ವಲಯ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ ಅವರ ಬಗ್ಗೆ ತೇಜೋವಧೆ ಮಾಡುವುದರ ಜತೆಗೆ ಷಡ್ಯಂತ್ರ ನಡೆಸುತ್ತಿರುವ ಸಮಾಜಘಾತುಕ ವ್ಯಕ್ತಿಗಳ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಶುಕ್ರವಾರ ಜಿಲ್ಲಾ ಸ್ವಾಭಿಮಾನಿ ಪಡೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ರೈತರ ಸೊಸೈಟಿ ಆವರಣದಲ್ಲಿ ಜಮಾವಣೆಗೊಂಡ ವಿವಿಧ ಸಂಘಟನೆಗಳ ನೂರಾರು ಜನರು, ರಾಷ್ಟ್ರಕವಿ ಕುವೆಂಪು ಹಾಗೂ ನಿತ್ಯ ಸಚಿವ ಕೆ.ವಿ.ಶಂಕರಗೌಡ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಬಳಿಕ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ನಂತರ ರವಿಕಾಂತೇಗೌಡ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿರುವ ಕೆ.ಜೆ.ಕೃಷ್ಣ ಹಾಗೂ ರಾಕೇಶ್‌ಶೆಟ್ಟಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ರವಿಕಾಂತೇಗೌಡ ಅವರು ತಮ್ಮ ಸೇವಾವಧಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ರಾಷ್ಟ್ರಪತಿ, ಮುಖ್ಯಮಂತ್ರಿ ಪದಕ ಪಡೆದಿದ್ದಾರೆ. ಆದರೆ ಕೆಲ ವ್ಯಕ್ತಿಗಳು ಅವರನ್ನು ತೇಜೋವಧೆ ಮಾಡುತ್ತಿದ್ದಾರೆ. ಕೆ.ಜೆ.ಕೃಷ್ಣ ಭೂವ್ಯವಹಾರದಲ್ಲಿ ಅಮಾಯಕರಿಗೆ ವಂಚನೆ ಮಾಡಿರುವ ಬಗ್ಗೆ ವಿವಿಧ ನ್ಯಾಯಾಲಯಗಳಲ್ಲಿ ಸುಮಾರು 10 ಪ್ರಕರಣ ದಾಖಲಾಗಿದ್ದು, ವಿವಿಧ ಜಿಲ್ಲೆಗಳಲ್ಲಿ ಈತನಿಂದ ಬಹಳಷ್ಟು ಜನರಿಗೆ ವಂಚನೆ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಜತೆಗೆ ರಾಕೇಶ್‌ಶೆಟ್ಟಿ ವಿರುದ್ಧ ವಂಚನೆ ಮಾಡಿರುವ ಬಗ್ಗೆ ಸುಮಾರು 18 ಪ್ರಕರಣ ವಿವಿಧ ನ್ಯಾಯಾಲಯಗಳಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದರೂ, ಅಮಾಯಕ ಜನರನ್ನು ವಂಚಿಸಿ ತೇಜೋವಧೆ ಮಾಡುವ ಮೂಲಕ ಇಂತಹ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ದೂರಿದರು.

ಆದ್ದರಿಂದ ರಾಜ್ಯಸರ್ಕಾರ ಕೂಡಲೇ ಸಮಾಜಘಾತಕ ವ್ಯಕ್ತಿಗಳ ಬಗ್ಗೆ ತನಿಖೆ ನಡೆಸಿ ಇಂತಹ ವ್ಯಕ್ತಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು. ದಕ್ಷ ಪ್ರಾಮಾಣಿಕ ಅಧಿಕಾರಿಗಳಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡುವ ಜತೆಗೆ ಅವರ ಬೆನ್ನೆಲುಬಾಗಿ ನಿಲ್ಲಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಡಾ.ಎಚ್.ಎಸ್.ಮುದ್ದೇಗೌಡ, ಪ್ರೊ.ಜಿ.ಟಿ.ವೀರಪ್ಪ, ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ಅಧ್ಯಕ್ಷ ರಮೇಶ್, ಒಕ್ಕಲಿಗರ ಸಂಘದ ರಾಜ್ಯ ಉಪಾಧ್ಯಕ್ಷ ಕೃಷ್ಣ, ಜಿಲ್ಲಾಧ್ಯಕ್ಷ ಕೆ.ಸಿ.ರವೀಂದ್ರ, ಬೋರ್‌ವೆಲ್ ನಾರಾಯಣ, ಸುಜಾತಾ ಕೃಷ್ಣ, ಮನ್‌ಮುಲ್ ಮಾಜಿ ನಿರ್ದೇಶಕಿ ಸುಜಾತಾ, ಯುವ ಪ್ರಶಸ್ತಿ ಪುರಸ್ಕೃತರಾದ ಕಾರಸವಾಡಿ ಮಹದೇವು, ಮಂಗಲ ಲಂಕೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net