ವಾಯು ಮತ್ತು ನೆಲದ ಮೂಲಕ ಈಗ ಪ್ಯಾಲೆಸ್ತೀನಿಯರ ಸಂಘಟನೆ ಹಮಾಸ್ ನಡೆಸಿರುವ ಆಕ್ರಮಣವು ದಶಕಗಳಷ್ಟು ಹಳೆಯದಾದ ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದಲ್ಲಿ ಹೊಸ ಅಧ್ಯಾಯವನ್ನು ತೆರೆದಿದೆ. ಹಮಾಸ್ ಸಂಘಟನೆಯು ಶನಿವಾರ ಗಾಜಾದಿಂದ ಇಸ್ರೇಲ್ ಮೇಲೆ ಹಠಾತ್ ದಾಳಿ ನಡೆಸಿರುವುದು ಉಭಯ ರಾಷ್ಟ್ರಗಳ ನಡುವಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣಕ್ಕೆ ಕಾರಣವಾಗಿದೆ. ಈ ಸಂಘರ್ಷದಲ್ಲಿ ನೂರಾರು ಸಂಖ್ಯೆಯಲ್ಲಿ ಇಸ್ರೇಲಿಗಳು ಹಾಗೂ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ.
ಹರಾಕತ್ ಅಲ್-ಮುಕಾವಾಮಾ ಅಲ್-ಇಸ್ಲಾಮಿಯಾ ಎಂಬ ಪದದ ಸಂಕ್ಷಿಪ್ತ ರೂಪವೇ ಹಮಾಸ್. 1987ರಲ್ಲಿ ಮೊದಲ ಇಂತಿಫಾದಾ ಅಥವಾ ಪ್ಯಾಲೇಸ್ತಿನಿಯರ ದಂಗೆಯ ಸಮಯದಲ್ಲಿ ಸ್ಥಾಪಿಸಲಾದ ಇಸ್ಲಾಮಿಕ್ ಪ್ರತಿರೋಧ ಚಳವಳಿಯಾಗಿದೆ.
ಪಶ್ಚಿಮ ದಂಡೆಯಲ್ಲಿ ನೆಲೆಸಿರುವ ಮತ್ತು ಪ್ಯಾಲೆಸ್ತೀನ್ ಲಿಬರೇಶನ್ ಆರ್ಗನೈಸೇಶನ್ (ಪಿಎಲ್ಒ) ಮುಖ್ಯಸ್ಥ ಮಹಮೂದ್ ಅಬ್ಬಾಸ್ ನೇತೃತ್ವದ ಫತಾಹ್ ಚಳವಳಿಗೆ ನಿಷ್ಠರಾದ ಪಡೆಗಳೊಂದಿಗೆ ಸಂಕ್ಷಿಪ್ತ ನಾಗರಿಕ ಯುದ್ಧದ ನಂತರ 2007ರಿಂದ ಗಾಜಾ ಪಟ್ಟಿಯಲ್ಲಿ ಹಮಾಸ್ ಆಡಳಿತ ನಡೆಸುತ್ತಿದೆ. 2006ರಲ್ಲಿ ಪ್ಯಾಲೇಸ್ತಿನ್ ಸಂಸತ್ತಿನ ಚುನಾವಣೆಯಲ್ಲಿ ಗೆದ್ದ ನಂತರ ಗಾಜಾವನ್ನು ಹಮಾಸ್ ಸ್ವಾಧೀನಪಡಿಸಿಕೊಂಡಿದೆ. ಅಂದಿನಿಂದ, ಇಸ್ರೇಲ್ ನಾಶಕ್ಕೆ ಹಮಾಸ್ ಪ್ರತಿಜ್ಞೆ ಮಾಡಿದ್ದು, ಇಸ್ರೇಲ್ನೊಂದಿಗೆ ಹಲವಾರು ಯುದ್ಧಗಳನ್ನು ಮಾಡಿದೆ.
ಇರಾನ್ ಬೆಂಬಲ: ಶಿಯಾ ಮುಸ್ಲಿಂ ಪ್ರಾಬಲ್ಯದ ಇರಾನ್ನಿಂದ ಹಮಾಸ್ ಬೆಂಬಲ ಪಡೆದುಕೊಂಡಿದೆ. 1920ರ ದಶಕದಲ್ಲಿ ಈಜಿಪ್ಟ್ನಲ್ಲಿ ಸ್ಥಾಪಿಸಲಾದ ಬಹುರಾಷ್ಟ್ರೀಯ ಇಸ್ಲಾಂ ಸಂಘಟನೆಯಾದ ಮುಸ್ಲಿಂ ಬ್ರದರ್ಹುಡ್ನ ಇಸ್ಲಾಂ ಸಿದ್ಧಾಂತವನ್ನು ಇದು ಅನುಸರಿಸುತ್ತದೆ. ಇರಾನ್, ಸಿರಿಯಾ ಮತ್ತು ಲೆಬನಾನ್ನಲ್ಲಿರುವ ಶಿಯಾ ಇಸ್ಲಾಂ ಗುಂಪು ಹೆಜ್ಬೊಲ್ಲಾವನ್ನು ಒಳಗೊಂಡಿರುವ ಪ್ರಾದೇಶಿಕ ಮೈತ್ರಿಯ ಭಾಗವಾಗಿದೆ ಹಮಾಸ್. ಈ ಸಂಘಟನೆಗಳೆಲ್ಲ ಮಧ್ಯಪ್ರಾಚ್ಯ ಮತ್ತು ಇಸ್ರೇಲ್ನಲ್ಲಿ ಅಮೆರಿಕ ನೀತಿಯನ್ನು ವ್ಯಾಪಕವಾಗಿ ವಿರೋಧಿಸುತ್ತವೆ. ಹಮಾಸ್ಗೆ ಇರಾನ್ ಆರ್ಥಿಕ ನೆರವನ್ನು ಒದಗಿಸುತ್ತದೆ. ಶಸ್ತ್ರಾಸ್ತ್ರ ಮತ್ತು ತರಬೇತಿಗೆ ಬೆಂಬಲವನ್ನು ಕೂಡ ನೀಡುತ್ತದೆ.
ಪ್ಯಾಲೇಸ್ತಿನ್ ಉಗ್ರಗಾಮಿ ಸಂಘಟನೆ ಹಮಾಸ್ ಅನ್ನು ಇಸ್ರೇಲ್, ಅಮೆರಿಕ, ಬ್ರಿಟನ್, ಐರೋಪ್ಯ ಒಕ್ಕೂಟ, ಕೆನಡಾ, ಈಜಿಪ್ತ ಮತ್ತು ಜಪಾನ್ ಮೊದಲಾದವು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿವೆ. ಇಸ್ಮಾಯಿಲ್ ಹನಿಯೆಹ್ ಎಂಬಾತ ಪ್ರಸ್ತುತ ಹಮಾಸ್ ನೇತೃತ್ವ ವಹಿಸಿದ್ದಾನೆ. 2017ರಲ್ಲಿ ಹಮಾಸ್ನ ಪಾಲಿಟ್ಬ್ಯೂರೋ ಮುಖ್ಯಸ್ಥನಾಗಿ ಈತ ಆಯ್ಕೆಯಾಗಿದ್ದಾನೆ. ಹಮಾಸ್ ಪ್ರತಿಸ್ಪರ್ಧಿ ಫತಾಹ್ ಪಕ್ಷದ ನೇತೃತ್ವವನ್ನು ಮಹ್ಮದ್ ಅಬ್ಬಾಸ್ ಎಂಬಾತ ವಹಿಸಿದ್ದಾನೆ.
1987ರಲ್ಲಿ, ಮೊದಲ ಇಂತಿಫಾದಾ ಅಥವಾ ಇಸ್ರೇಲಿ ಆಡಳಿತದ ವಿರುದ್ಧ ಪ್ಯಾಲೆಸ್ತೀನಿಯರ ದಂಗೆಯು ನಡೆಯಿತು. ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿಯಲ್ಲಿ ವಾಸಿಸುತ್ತಿದ್ದ ಲಕ್ಷಾಂತರ ಪ್ಯಾಲೆಸ್ತೀನಿಯರು ಇಸ್ರೇಲಿ ಸರ್ಕಾರದ ವಿರುದ್ಧ ಬಂಡೆದ್ದರು. 1993ರವರೆಗೆ ನಡೆದ ಮೊದಲ ಇಂತಿಫಾದಾ ಸಂದರ್ಭದಲ್ಲಿ ಹಮಾಸ್ ಅನ್ನು ಪ್ಯಾಲೆಸ್ತೀನ್ ಧರ್ಮಗುರು ಶೇಖ್ ಅಹ್ಮದ್ ಯಾಸಿನ್ ಅವರು ಮುಸ್ಲಿಂ ಬ್ರದರ್ಹುಡ್ನ ಭಾಗವಾಗಿ ಪ್ರಾರಂಭಿಸಿದರು. 1993ರಲ್ಲಿ, ಪ್ಯಾಲೆಸ್ತೀನ್ ನಾಯಕ ಯಾಸಿರ್ ಅರಾಫತ್ ಅವರು ಇಸ್ರೇಲ್ ಜತೆ ಓಸ್ಲೋ ಒಪ್ಪಂದಕ್ಕೆ ಸಹಿ ಹಾಕಿದರು. ಎರಡು ದೇಶಗಳ ಅಸ್ತಿತ್ವದ ಪರಿಹಾರದ ಆಧಾರದ ಮೇಲೆ ಸಂಘರ್ಷ ಕೊನೆಗೊಳಿಸಲು ಈ ಮಾತುಕತೆ ನಡೆಯಿತು. ಈ ಒಪ್ಪಂದ ಹಿನ್ನೆಲೆಯಲ್ಲಿ ಪ್ಯಾಲೆಸ್ತೀನ್ ಪ್ರಾಧಿಕಾರವನ್ನು ಸ್ಥಾಪಿಸಲು ಅರಾಫತ್ ಅವರು 27 ವರ್ಷಗಳ ದೇಶಭ್ರಷ್ಟತೆಯ ನಂತರ 1994ರ ಜುಲೈನಲ್ಲಿ ಪ್ಯಾಲೆಸ್ತೀನ್ ಪ್ರದೇಶಗಳಿಗೆ ಮರಳಿದರು. ಗಾಜಾ ಪಟ್ಟಿಯಲ್ಲಿ ಮೊದಲ ಬಾರಿಗೆ ಸ್ವಯಂ ಆಡಳಿತವನ್ನು ಸ್ಥಾಪಿಸಲಾಯಿತು. ಆದರೆ, ಹಮಾಸ್ ಈ ಒಪ್ಪಂದವನ್ನು ವಿರೋಧಿಸಿತು. ಅಲ್ಲದೆ, ಇಸ್ರೇಲ್ನಲ್ಲಿ ಸರಣಿ ಆತ್ಮಾಹುತಿ ಬಾಂಬ್ ದಾಳಿಗಳನ್ನು ಪ್ರಾರಂಭಿಸಿತು.
ಹಮಾಸ್ ಕಳೆದ ಎರಡು ದಶಕಗಳಲ್ಲಿ ಇಸ್ರೇಲ್ ವಿರುದ್ಧ ಹಲವಾರು ಸುತ್ತಿನ ಸಂಘರ್ಷದಲ್ಲಿ ತೊಡಗಿಸಿಕೊಂಡಿದೆ. ಗಾಜಾದಿಂದ ಇಸ್ರೇಲ್ಗೆ ರಾಕೆಟ್ ದಾಳಿಗಳನ್ನು ನಡೆಸುತ್ತಿದೆ. ಇಸ್ರೇಲ್ ದೇಶಕ್ಕೆ ಮಾನ್ಯತೆ ನೀಡಲು ಹಮಾಸ್ ನಿರಾಕರಿಸುತ್ತದೆ. 1990ರ ದಶಕದ ಮಧ್ಯಭಾಗದಲ್ಲಿ ಇಸ್ರೇಲ್ ಮತ್ತು ಪಿಎಲ್ಒ ನಡುವಿನ ಓಸ್ಲೋ ಶಾಂತಿ ಒಪ್ಪಂದಗಳನ್ನು ತೀವ್ರವಾಗಿ ವಿರೋಧಿಸುತ್ತದೆ. ಎರಡು ದೇಶಗಳ ಅಸ್ತಿತ್ವದ ಪರಿಹಾರದ ಆಧಾರದ ಮೇಲೆ ಸಂಘರ್ಷಕ್ಕೆ ಅಂತ್ಯ ಹಾಡಲು ಪ್ಯಾಲೆಸ್ತೀನಿಯರ ನಾಯಕ ಯಾಸಿರ್ ಅರಾಫತ್ ಅವರು 1993ರಲ್ಲಿ ಇಸ್ರೇಲ್ನೊಂದಿಗೆ ಓಸ್ಲೋ ಒಪ್ಪಂದಗಳಿಗೆ ಸಹಿ ಹಾಕಿದ್ದನ್ನು ವಿರೋಧಿಸಿತ್ತು. ಹಮಾಸ್ ಸಂಘಟನೆಯು ಸ್ವತಂತ್ರ ಪ್ಯಾಲೆಸ್ತೀನ್ ದೇಶದ ರಚನೆಗೆ ಸಮರ್ಪಿತವಾಗಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಎರಡು ದೇಶಗಳ ಅಸ್ತಿತ್ವದ (ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ಪ್ರತ್ಯೇಕ ರಾಷ್ಟ್ರಗಳು) ಪರಿಹಾರವನ್ನು ಸ್ವೀಕರಿಸಲು ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದೆ.
ಮೊದಲನೆಯ ಮಹಾಯುದ್ಧದಲ್ಲಿ ಒಟ್ಟೋಮನ್ಗಳಿಂದ ಪ್ಯಾಲೆಸ್ತೀನ್ ಅನ್ನು ವಶಪಡಿಸಿಕೊಂಡ ಬ್ರಿಟನ್, ಯಹೂದಿ ಜನರು ಪ್ಯಾಲೆಸ್ತೀನ್ನಲ್ಲಿ ಸ್ವಂತ ರಾಷ್ಟ್ರ ಸ್ಥಾಪಿಸಿಕೊಳ್ಳಲು ಬೆಂಬಲವನ್ನು ಘೊಷಿಸಿತು. ವಿಶ್ವ ಸಂಸ್ಥೆಯು 1947ರಲ್ಲಿ 181 ನಿರ್ಣಯವನ್ನು ಅಂಗೀಕರಿಸಿದ ಹಿನ್ನೆಲೆಯಲ್ಲಿ ಇಸ್ರೇಲ್-ಪ್ಯಾಲೆಸ್ಟೀನಿಯರ ನಡುವೆ ಸಂಘರ್ಷವು ಪ್ರಾರಂಭವಾಯಿತು. ಈ ನಿರ್ಣಯದ ಪ್ರಕಾರ ಈ ಹಿಂದಿನ ಪ್ಯಾಲೆಸ್ತೀನ್ ಪ್ರದೇಶವನ್ನು ಅರಬ್ ಮತ್ತು ಯಹೂದಿ ದೇಶಗಳ ನಡುವೆ ವಿಂಗಡಿಸಲಾಯಿತು. ಇಸ್ರೇಲ್ ದೇಶ, ಪಶ್ಚಿಮ ದಂಡೆ (ಜೋರ್ಡಾನ್ ನದಿಯ) ಮತ್ತು ಗಾಜಾ ಪಟ್ಟಿ ಎಂದು ಈ ಪ್ರದೇಶವನ್ನು 3 ಭಾಗಗಳಾಗಿ ವಿಂಗಡಿಸಲಾಗಿದೆ. 1948ರ ಮೇ 14ರಂದು ಇಸ್ರೇಲ್ ದೇಶವನ್ನು ರಚಿಸಲಾಯಿತು. ಇದು ಮೊದಲ ಅರಬ್-ಇಸ್ರೇಲ್ ನಡುವಿನ ಯುದ್ಧಕ್ಕೆ ನಾಂದಿ ಹಾಡಿತು. ಈ ಯುದ್ಧವು 1949ರಲ್ಲಿ ಇಸ್ರೇಲ್ ವಿಜಯದೊಂದಿಗೆ ಕೊನೆಗೊಂಡಿತು. ಆದರೆ, ಈ ಸಂದರ್ಭದಲ್ಲಿ 7,50,000 ಪ್ಯಾಲೆಸ್ತೀನಿಯರು ಸ್ಥಳಾಂತರಗೊಂಡರು. 1964ರಲ್ಲಿ ಪ್ಯಾಲೆಸ್ತೀನ್ ಲಿಬರೇಶನ್ ಆರ್ಗನೈಸೇಶನ್ (ಪಿಎಲ್ಒ- ಪ್ಯಾಲೆಸ್ತೀನ್ ವಿಮೋಚನೆ ಸಂಘಟನೆ) ಅಸ್ತಿತ್ವಕ್ಕೆ ಬಂದಿತು. ಈ ಹಿಂದೆ ವಿಶ್ವ ಸಂಸ್ಥೆ ನಿರ್ಣಯದ ಅಡಿಯಲ್ಲಿ ಪ್ಯಾಲೆಸ್ತೀನ್ ಅರಬ್ಬರಿಗೆ ಹಂಚಲಾಗಿದ್ದ ಕೆಲವು ಪ್ರದೇಶಗಳನ್ನು ಯುದ್ಧದ ನಂತರ ಇಸ್ರೇಲ್ ತನ್ನ ವಶಕ್ಕೆ ತೆಗೆದುಕೊಂಡಿತು.
2000ರಲ್ಲಿ, ಪ್ಯಾಲೆಸ್ತೀನಿಯರು ಪಶ್ಚಿಮ ದಂಡೆಯ ಮೇಲೆ ಇಸ್ರೇಲ್ ನಿಯಂತ್ರಣವನ್ನು ಹಾಗೂ ಇಸ್ಲಾಂನ ಮೂರನೇ ಪವಿತ್ರ ಸ್ಥಳ ಮತ್ತು ಯಹೂದಿಗಳಿಗೂ ಪವಿತ್ರವಾಗಿರುವ ಪೂರ್ವ ಜೆರುಸಲೆಂನ ಅಲ್-ಅಕ್ಸಾ ಮಸೀದಿಯ ಆವರಣಕ್ಕೆ ಇಸ್ರೇಲ್ನ ಮಾಜಿ ಪ್ರಧಾನಿ ಏರಿಯಲ್ ಶರೋನ್ ಅವರು ಭೇಟಿ ನೀಡಿದ್ದನ್ನು ವಿರೋಧಿಸಿದ ಸೆಪ್ಟೆಂಬರ್ 2000ರಲ್ಲಿ ಎರಡನೇ ಇಂತಿಫಾದಾ ಆರಂಭಿಸಿದರು. ಈ ದಂಗೆಯು 2005ರವರೆಗೆ ನಡೆಯಿತು. ಪ್ಯಾಲೆಸ್ತೀನಿಯರ ಆತ್ಮಹತ್ಯಾ ಬಾಂಬ್ ದಾಳಿಗಳ ಅಲೆಗೆ ಪ್ರತೀಕಾರವಾಗಿ 2002ರಲ್ಲಿ ಇಸ್ರೇಲ್ ವೆಸ್ಟ್ ಬ್ಯಾಂಕ್ ಆಕ್ರಮಿಸಿತು. ಅಮೆರಿಕವು 2013ರಲ್ಲಿ ಪಶ್ಚಿಮ ದಂಡೆಯಲ್ಲಿ ಇಸ್ರೇಲಿ ಸರ್ಕಾರ ಮತ್ತು ಪ್ಯಾಲೆಸ್ತೀನ್ ಪ್ರಾಧಿಕಾರದ ನಡುವಿನ ಶಾಂತಿ ಪ್ರಕ್ರಿಯೆಯನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸಿತು. ಆದಾರೆ, ಫತಾಹ್ ಎಂಬ ಪ್ಯಾಲೆಸ್ತೀನ್ ಆಡಳಿತ ಪಕ್ಷವು 2014ರಲ್ಲಿ ಪ್ರತಿಸ್ಪರ್ಧಿ ಬಣ ಹಮಾಸ್ ಜತೆಗೂಡಿ ಏಕೀಕೃತ ಸರ್ಕಾರವನ್ನು ರಚಿಸಿದ್ದರಿಂದ ಈ ಶಾಂತಿ ಮಾತುಕತೆಗೆ ಅಡಚಣೆ ಉಂಟಾಯಿತು. ತದನಂತರದಲ್ಲಿ ಇಸ್ರೇಲ್ ಹಾಗೂ ಹಮಾಸ್ ನಡುವೆ ಕದನಗಳು ನಿರಂತರವಾಗಿ ಮುಂದುವರಿದಿದೆ.