ನ್ಯೂಸ್

ಕುಸಿದ ವಿದೇಶಿ ವಿನಿಮಯ; 5.72 ಲಕ್ಷ ಕೋಟಿ ರೂ. ಮಾಯ

2019, 2020 ಮತ್ತು 2021ರಲ್ಲಿ ಅಗಾಧ ಪ್ರಮಾಣದಲ್ಲಿ ಏರಿಕೆಯಾಗಿದ್ದ ಭಾರತದ ವಿದೇಶಿ ವಿನಿಮಯ ಸಂಗ್ರಹವು 2022ರಲ್ಲಿ 5,72,383 ಕೋಟಿ ರೂಪಾಯಿಯಷ್ಟು ಕುಸಿಯಿತು. ರೂಪಾಯಿ ಎದುರು ಡಾಲರ್​ ಮೌಲ್ಯವರ್ಧನೆಯೇ ಇದಕ್ಕೆ ಪ್ರಮುಖ ಕಾರಣವಾಯಿತು.

ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ವಿದೇಶಿ ವಿನಿಮಯ ಮೀಸಲು (ಫಾರೆಕ್ಸ್) ಸಂಗ್ರಹ ಮಹತ್ವದ ಪಾತ್ರ ವಹಿಸುತ್ತದೆ. ಬೇರೆ ಬೇರೆ ರಾಷ್ಟ್ರಗಳ ಜತೆಗೆ ಅಗತ್ಯ ವ್ಯಾಪಾರ ವಹಿವಾಟು ನಡೆಸಲು ವಿದೇಶಿ ವಿನಿಮಯ ಬೇಕೇಬೇಕು. ಭಾರತದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ಸತತ ಮೂರು ವರ್ಷಗಳ ಏರಿಕೆಯ ನಂತರ 2022ರಲ್ಲಿ ಬೃಹತ್ ಕುಸಿತ ಕಂಡಿದೆ. ಹೆಚ್ಚುತ್ತಿರುವ ಹಣದುಬ್ಬರ ಮತ್ತು ಬಡ್ಡಿದರಗಳ ನಡುವೆ 2022 ರಲ್ಲಿ ಈ ಮೀಸಲು ಅಂದಾಜು 70 ಶತಕೋಟಿ ಡಾಲರ್​ಗಳಷ್ಟು ಕಡಿಮೆಯಾಯಿತು. 2022ರ ಜನವರಿ 7ರಲ್ಲಿ ಇದ್ದ 632.74 ಶತಕೋಟಿ ಡಾಲರ್​ನಿಂದ (51,73,852 ಕೋಟಿ ರೂಪಾಯಿ) 2022ರ ಡಿಸೆಂಬರ್ 30ಕ್ಕೆ 562.851 ಶತಕೋಟಿ ಡಾಲರ್​ಗೆ (46,02,376 ಕೋಟಿ ರೂಪಾಯಿ) ಕುಸಿದಿದೆ.

ಡಾಲರ್ ದೌಲತ್ತು: ವಿದೇಶಿ ವಿನಿಮಯ ಮೀಸಲು ಇಳಿಕೆಗೆ ಎರಡು ಪ್ರಮುಖ ಕಾರಣಗಳನ್ನು ಮಾರುಕಟ್ಟೆ ತಜ್ಞರು ಮುಂದಿಡುತ್ತಾರೆ. 2022ರಲ್ಲಿ ಪ್ರಮುಖ ಕರೆನ್ಸಿಗಳ ಎದುರು ಅಮೆರಿಕ ಡಾಲರ್ ಮೌಲ್ಯವರ್ಧನೆ ಪ್ರಮುಖ ಕಾರಣ. ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್​ನ ಆಕ್ರಮಣಕಾರಿ ವಿತ್ತೀಯ ನೀತಿ ಮತ್ತು ರಷ್ಯಾ-ಯೂಕ್ರೇನ್ ಯುದ್ಧದ ಪರಿಣಾಮವಾಗಿ ಅನಿಶ್ಚಿತತೆಯ ನಡುವೆ ಹೂಡಿಕೆದಾರರ ಹಿಂಜರಿತದಿಂದಾಗಿ ಅಮೆರಿಕ ಕರೆನ್ಸಿಯ ಮೌಲ್ಯ ಏರಿಕೆಗೆ ಕಾರಣವಾಯಿತು. ಡಾಲರ್ ಎದುರು ರೂಪಾಯಿ ಕುಸಿತ ಕಂಡ ಕಾರಣದಿಂದಾಗಿ ಮೀಸಲು ಪ್ರಮಾಣ ಶೇಕಡಾ 55-60 ರಷ್ಟು ಕುಸಿತವಾಗಿದೆ ಎಂದು ತಜ್ಞರು ಹೇಳುತ್ತಾರೆ.

ವಿದೇಶಿ ವಿನಿಮಯ ಮೀಸಲು ಅಮೆರಿಕ ಡಾಲರ್, ಯೂರೋ, ಪೌಂಡ್ ರ್ಸrಂಗ್ ಮತ್ತು ಜಪಾನ್​ನ ಯೆನ್​ನಂತಹ ಪ್ರಮುಖ ಕರೆನ್ಸಿಗಳನ್ನು ಒಳಗೊಂಡಿರುತ್ತದೆ. ಆದರೆ, ಅಮೆರಿಕ ಡಾಲರ್ ಬೆಲೆ ಅನುಸಾರವೇ ಇವುಗಳ ಮೌಲ್ಯವನ್ನು ಪರಿಗಣಿಸಲಾಗುತ್ತದೆ. ಡಾಲರ್ ಬಲಗೊಂಡಾಗ, ಇತರ ಕರೆನ್ಸಿಗಳ ಮೌಲ್ಯ ಕುಸಿಯುತ್ತದೆ. ಇದರಿಂದಾಗಿ ಒಟ್ಟಾರೆ ಮೀಸಲು ಸಂಗ್ರಹದಲ್ಲಿ ಕುಸಿತಕ್ಕೆ ಕಾರಣವಾಗುತ್ತದೆ ಎಂದು ವಿಶ್ಲೇಷಕರು ವಿವರಿಸುತ್ತಾರೆ.

ಫಾರೆಕ್ಸ್ ಏಕೆ ಬೇಕು?: ಎಲ್ಲಾ ದೇಶಗಳಿಗೆ ಫಾರೆಕ್ಸ್ ಮೀಸಲು ಸಂಗ್ರಹ ಮಹತ್ವದ್ದು. ಉತ್ತಮ ಆರ್ಥಿಕ ನೀತಿಗಳು ಮತ್ತು ಮೂಲಭೂತ ಅಂಶಗಳ ಜೊತೆಗೆ ಯೋಗ್ಯ ಫಾರೆಕ್ಸ್ ಸಂಗ್ರಹವು ಗಮನಾರ್ಹ ಪ್ರಯೋಜನಗಳನ್ನು ಒದಗಿಸುತ್ತದೆ. ವಿದೇಶಗಳೊಂದಿಗೆ ವ್ಯಾಪಾರ ವಹಿವಾಟು ನಡೆಸಲು, ವಿಶೇಷವಾಗಿ ನಮ್ಮ ದೇಶಕ್ಕೆ ಅಗತ್ಯವಿರುವ ಸರಕುಗಳನ್ನು ಆಮದು ಮಾಡಿಕೊಳ್ಳಲು ಇದು ಅತ್ಯಗತ್ಯ. ವಿನಿಮಯ ದರಗಳಲ್ಲಿ ನಿಯಂತ್ರಣ ಸಾಧಿಸಲು ಹಾಗೂ ಮಾರುಕಟ್ಟೆ ಪರಿಸ್ಥಿತಿಗಳು ಬಿಗಡಾಯಿಸಿದ ಸಂದರ್ಭದಲ್ಲಿ ಒತ್ತಡಗಳನ್ನು ತಡೆದುಕೊಳ್ಳಲು ಅನುಕೂಲ ಮಾಡಿಕೊಡುತ್ತದೆ. ಒಟ್ಟಾರೆಯಾಗಿ ಆರ್ಥಿಕ ಸ್ಥಿರತೆ ಕಾಪಾಡಲು ನೆರವಾಗುತ್ತದೆ.

ಆಮದಿನ ಮೇಲೆ ಪರಿಣಾಮ: 2022ರಲ್ಲಿನ ದೇಶದ ಮೀಸಲು ಕುಸಿತ ಆಮದಿನ ಮೇಲೆ ಪರಿಣಾಮ ಬೀರುತ್ತದೆ. ಕಳೆದ ತಿಂಗಳ ಆರ್​ಬಿಐ ವರದಿ ಪ್ರಕಾರ 2022ರ ಡಿಸೆಂಬರ್ 9ರಲ್ಲಿ ಫಾರೆಕ್ಸ್ 564.1 ಶತಕೋಟಿ ಡಾಲರ್ (46,07,456 ಕೋಟಿ ರೂಪಾಯಿ) ಇದ್ದು, 9.2 ತಿಂಗಳುಗಳ ಆಮದುಗಳಿಗೆ ಸಾಕಾಗುವಷ್ಟಿತ್ತು. ಆದರೆ, 2022ರ ಜನವರಿ 7ರಲ್ಲಿ ಇದ್ದ ವಿದೇಶಿ ವಿನಿಮಯ ಮೀಸಲು 13 ತಿಂಗಳುಗಳ ಆಮದಿಗೆ ಸಾಕಾಗುವಷ್ಟಿತ್ತು.

ಬಂಡವಾಳ ವಾಪಸಾತಿ: ವಿದೇಶಿ ಹೂಡಿಕೆದಾರರ ಬಂಡವಾಳ ವಾಪಸಾತಿಯ ಹೊರಹರಿವಿನಿಂದ ಉಂಟಾದ ರೂಪಾಯಿಯ ಚಲನೆಯಲ್ಲಿನ ಹಠಾತ್ ಏರಿಳಿತಗಳನ್ನು ಸುಗಮಗೊಳಿಸಲು ಆರ್​ಬಿಐ ಸ್ಪಾಟ್ ಮಾರುಕಟ್ಟೆಯಲ್ಲಿ ಡಾಲರ್​ಗಳನ್ನು ಮಾರಾಟ ಮಾಡಿದ್ದರಿಂದ ಕೂಡ ಫಾರೆಕ್ಸ್ ಮೀಸಲು ಕುಸಿಯಿತು. 2022ರಲ್ಲಿ ದೇಶೀಯ ಷೇರು ಮಾರುಕಟ್ಟೆಯಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್​ಐಐ) 1.2 ಲಕ್ಷ ಕೋಟಿ ರೂ.ಗಳಷ್ಟು ಇಕ್ವಿಟಿ ಹೂಡಿಕೆಯನ್ನು ರೂಪಾಯಿಯಲ್ಲಿ ಮಾರಿ, ಅದನ್ನು ಡಾಲರ್​ಗೆ ಪರಿವರ್ತಿಸಿ ಹಣವನ್ನು ಹೊರತೆಗೆದುಕೊಂಡು ಹೋದರು. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಡಾಲರ್ ಪೂರೈಕೆಯಲ್ಲಿ ಕೊರತೆ ತಲೆದೋರಿದ ಕಾರಣ, ಆರ್​ಬಿಐ ತನ್ನ ಫಾರೆಕ್ಸ್ ಮೀಸಲುಗಳನ್ನು ಎಫ್​ಐಐಗಳ ಡಾಲರ್ ಬೇಡಿಕೆ ಪೂರೈಸಲು ಬಳಸಿದ್ದರಿಂದ ಮೀಸಲು ಕುಸಿಯಿತು. 2022ರಲ್ಲಿ ಹಣದುಬ್ಬರ ಹೆಚ್ಚಿದ ನಂತರ ಮತ್ತು ಕೇಂದ್ರವು ಬಡ್ಡಿದರಗಳನ್ನು ಹೆಚ್ಚಿಸಲು ಪ್ರಾರಂಭಿಸಿದ ನಂತರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬಂಡವಾಳ ಹಿಂದೆಗೆಯಲಾರಂಭಿಸಿದರು. ಇದಲ್ಲದೆ, ಯೂಕ್ರೇನ್ ಮೇಲೆ ರಷ್ಯಾದ ಆಕ್ರಮಣದಿಂದಾದ ಜಾಗತಿಕ ಆರ್ಥಿಕ ಮಂದಗತಿ ಕೂಡ ವಿದೇಶಿ ಬಂಡವಾಳ ಹಿಂಪಡೆಯುವಿಕೆಗೆ ಕಾರಣವಾಯಿತು.

ಎಫ್​ಐಐ ಹೊರಹರಿವಿನಿಂದಾಗಿ ರೂಪಾಯಿ ಮೌಲ್ಯದಲ್ಲಿ ಶೇ. 10ರಷ್ಟು ಕುಸಿತಕ್ಕೆ ಕಾರಣವಾಯಿತು. ಇತ್ತೀಚಿನ ಮಾಹಿತಿಯ ಪ್ರಕಾರ, 2022ರ ಜನವರಿ ಮತ್ತು ಅಕ್ಟೋಬರ್ ನಡುವಿನ ಅವಧಿಯಲ್ಲಿ ಆರ್​ಬಿಐ ಡಾಲರ್​ನ ನಿವ್ವಳ ಮಾರಾಟಗಾರನಾಗಿ ಉಳಿದಿದೆ. ಸ್ಪಾಟ್ ಮಾರುಕಟ್ಟೆಯಲ್ಲಿ ಅದು 144.58 ಶತಕೋಟಿ ಡಾಲರ್ ಖರೀದಿಸಿದ್ದರೆ, 199.02 ಶತಕೋಟಿ ಡಾಲರ್ ಮಾರಾಟ ಮಾಡಿದೆ. ಆರ್​ಬಿಐ ಸ್ಪಾಟ್ ಮಾರುಕಟ್ಟೆಯಲ್ಲಿ 54.44 ಶತಕೋಟಿ ಡಾಲರ್ (4,45,036 ಕೋಟಿ ರೂಪಾಯಿಯಷ್ಟು) ಮಾರಾಟ ಮಾಡಿದೆ.

2021ರಲ್ಲಿ ಸಾರ್ವಕಾಲಿಕ ದಾಖಲೆ: 2021ರ ಸೆಪ್ಟೆಂಬರ್​ನಲ್ಲಿ ಇದ್ದ ಫಾರೆಕ್ಸ್ ಪ್ರಮಾಣ ಸಾರ್ವಕಾಲಿಕ ಗರಿಷ್ಠವಾಗಿದೆ. ಆಗ ಮೀಸಲು ಪ್ರಮಾಣ 642.5 ಶತಕೋಟಿ ಡಾಲರ್​ಗೆ (52,47,812 ಕೋಟಿ ರೂಪಾಯಿ) ತಲುಪಿ, 15 ತಿಂಗಳುಗಳ ಅವಧಿಗೆ ಆಮದಿಗೆ ಸಾಕಾಗುವಷ್ಟಿತ್ತು.

ಮೂರು ವರ್ಷ ಹೆಚ್ಚಳ: ಫಾರೆಕ್ಸ್ ಮೀಸಲು 2019, 2020 ಮತ್ತು 2021ರಲ್ಲಿ ಕ್ರಮವಾಗಿ 61.38 ಶತಕೋಟಿ ಡಾಲರ್ (5,01,060 ಕೋಟಿ ರೂಪಾಯಿ), 119.68 ಶತಕೋಟಿ ಡಾಲರ್ (9,76,978 ಕೋಟಿ ರೂಪಾಯಿ) ಮತ್ತು 48.29 ಶತಕೋಟಿ ಡಾಲರ್ (3,94,203 ಕೋಟಿ ರೂಪಾಯಿ) ಏರಿಕೆ ಕಂಡಿತು. ದೃಢವಾದ ವಿದೇಶಿ ಹೂಡಿಕೆಗಳು, ಅಮೆರಿಕ ಡಾಲರ್ ಮೌಲ್ಯದ ದುರ್ಬಲತೆ ಮತ್ತು ಕಚ್ಚಾ ತೈಲ ಬೆಲೆಗಳ ಮೃದುತ್ವ ಇದಕ್ಕೆ ಕಾರಣವಾಗಿದ್ದವು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು 2019ರಲ್ಲಿ 1.01 ಲಕ್ಷ ಕೋಟಿ ರೂಪಾಯಿ, 2020ರಲ್ಲಿ 1.7 ಲಕ್ಷ ಕೋಟಿ ರೂಪಾಯಿ ಮತ್ತು 2021ರಲ್ಲಿ 25,752 ಕೋಟಿ ರೂಪಾಯಿಗಳನ್ನು ದೇಶೀಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರು.