ಪತ್ನಿ ಗರ್ಭಿಣಿ, ಪತಿಗೆ ಅನುಮಾನ; ಹೊರಬಿತ್ತು ಕೊಲೆ ಹಿಂದಿನ ಕಾರಣ

Naaz 2
Published on

ಬೆಂಗಳೂರು: ಮಹಿಳೆಯೊಬ್ಬರು ಗರ್ಭವತಿಯಾಗಿದ್ದೇ ಆಕೆಯ ಪ್ರಾಣಕ್ಕೆ ಮುಳುವಾಗಿ ಪರಿಣಮಿಸಿದೆ. ಪತಿಯೇ ಪತ್ನಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಾರಣ ಬಹಿರಂಗವಾಗಿದೆ. ಪತ್ನಿಯ ಹೊಟ್ಟೆಯಲ್ಲಿರುವ ಮಗು ತನ್ನದಲ್ಲ ಎಂದು ಅನುಮಾನಗೊಂಡ ಗಂಡ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ತಾವರೆಕೆರೆಯ ಸುಭಾಷ್​ನಗರದ ಫ್ಲ್ಯಾಟ್​ನಲ್ಲಿ ಈ ಕೊಲೆ ನಡೆದಿದೆ. ನಾಜ್​ (22) ಕೊಲೆಗೀಡಾದ ಯುವತಿ. ಪತಿ ನಾಸಿರ್ ಹುಸೇನ್ ಕೊಲೆ ಆರೋಪಿ. ಕಳೆದ 6 ತಿಂಗಳ ಹಿಂದೆ ಫ್ಲ್ಯಾಟ್​ನಲ್ಲಿ ಈ ದಂಪತಿ ವಾಸವಿದ್ದರು. ಈ ಕೊಲೆಗೆ ಕಾರಣ ಏನು ಎಂಬುದು ಇದೀಗ ಬಹಿರಂಗಗೊಂಡಿದೆ.

ಪ್ರೀತಿಸಿದ್ದ ಇವರಿಬ್ಬರು ಆರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ನಾಸಿರ್ ಹುಸೇನ್​ಗೆ ತಂದೆ-ತಾಯಿ ಇರಲಿಲ್ಲ, ನಾಜ್​ ಈ ಮದುವೆಗೆ ತಂದೆ-ತಾಯಿಯನ್ನು ಒಪ್ಪಿಸಿ ಅನುಮತಿ ಪಡೆದುಕೊಂಡಿದ್ದಳು. ತಬ್ಬಲಿಯಂತಿದ್ದ ನಾಸಿರ್ ಗುಣವಂತ ಎಂದುಕೊಂಡು ನಾಜ್​ಳನ್ನು ಆಕೆಯ ಪಾಲಕರು ಮದುವೆ ಮಾಡಿಸಿಕೊಟ್ಟಿದ್ದರು.

ಆದರೆ ಇತ್ತೀಚೆಗಷ್ಟೇ ಗರ್ಭಿಣಿಯಾಗಿದ್ದ ನಾಜ್ ಮೇಲೆ ನಾಸಿರ್ ಅನುಮಾನ ವ್ಯಕ್ತಪಡಿಸಿದ್ದ. ನಿನ್ನ ಹೊಟ್ಟೆಯಲ್ಲಿರುವ ಮಗು ನನ್ನದಲ್ಲ ಎನ್ನುತ್ತಿದ್ದ ನಾಸಿರ್, ಗರ್ಭಪಾತ ಮಾಡಿಸಿಕೊಳ್ಳುವಂತೆಯೂ ಒತ್ತಾಯಿಸಿದ್ದ. ಇದು ನಾಜ್​ಗೆ ಇಷ್ಟವಿರದ್ದರಿಂದ ಇಬ್ಬರ ನಡುವೆ ಆಗಾಗ ಗಲಾಟೆ ಆಗುತ್ತಿತ್ತು.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಜಗಳ ವಿಕೋಪಕ್ಕೆ ಹೋಗಿದ್ದು, ನಾಸಿರ್​ ನಾಜ್​ಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಸದ್ದುಗುಂಟೆ ಪೊಲೀಸರು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸೇಂಟ್ ಜಾನ್​ ಆಸ್ಪತ್ರೆಗೆ ರವಾನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net