ನ್ಯೂಸ್

ಬೆಂಗಳೂರಿನಲ್ಲಿ 6.29 ಕೋಟಿ ರೂ. ಮೌಲ್ಯದ 9 ಕೆಜಿ ಚಿನ್ನ ವಶ: ಆರೋಪಿಗಳು ಸಿಕ್ಕಿಬಿದ್ದಿದ್ದು ಮಾತ್ರ ರಣರೋಚಕ

ಬೆಂಗಳೂರು:  ಆದಾಯ ಗುಪ್ತಚರ ಇಲಾಖೆ (ಡಿಆರ್‌ಐ) ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 6.29 ಕೋಟಿ ರೂಪಾಯಿ ಮೌಲ್ಯದ 9 ಕಿಲೋಗ್ರಾಂಗಳಷ್ಟು ಚಿನ್ನವನ್ನು ವಶಪಡಿಸಿಕೊಂಡಿದೆ.

ಮೊದಲ ಪ್ರಕರಣದಲ್ಲಿ, ವಿಮಾನದೊಳಗೆ ಬಚ್ಚಿಟ್ಟು ಚಿನ್ನವನ್ನು ಸಾಗಿಸುತ್ತಿದ್ದಾರೆ ಎಂದು ಸಿಕ್ಕ ಮಾಹಿತಿ ಮೇರೆಗೆ ಡಿಆರ್​​​ಐ ಬೆಂಗೂರು ಅಧಿಕಾರಿಗಳು ಬ್ಯಾಂಕಾಕ್‌ನಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಥಾಯ್ ಏರ್‌ವೇಸ್ ವಿಮಾನವನ್ನು ಶೋಧಿನೆ ನಡೆಸಲಾಯಿತು. ತಪಾಸಣೆ ವೇಳೆ ವಿಮಾನದಲ್ಲಿ ಬಿಟ್ಟಿದ್ದ ಹ್ಯಾಂಡ್​ಬ್ಯಾಂಗ್​​ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 6.834 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿರುವುದಾಗಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಹ್ಯಾಂಡ್ ಬ್ಯಾಗ್‌ಗಳ ಒಳಗೆ ಪತ್ತೆಯಾದ ದಾಖಲೆಗಳು ಮತ್ತು ಸಿಬ್ಬಂದಿಯಿಂದ ಪಡೆದ ಮಾಹಿತಿಯ ಆಧಾರದ ಮೇಲೆ ವಿಮಾನದಲ್ಲಿ ಬ್ಯಾಗ್‌ಗಳನ್ನು ಬಿಟ್ಟು ಹೋಗಿದ್ದ ಪ್ರಯಾಣಿಕರನ್ನು ಗುರುತಿಸಿ ಇಬ್ಬರು ಪ್ರಯಾಣಿಕರನ್ನು ವಶಕ್ಕೆ ಪಡೆಯಲಾಯಿತು. ವಿಚಾರಣೆಯ ನಂತರ ಪ್ರಯಾಣಿಕರು ವಿಮಾನದೊಳಗೆ ಚಿನ್ನವನ್ನು ಬಚ್ಚಿಟ್ಟಿರುವುದಾಗಿ ಒಪ್ಪಿಕೊಂಡರು ಎಂದು ಅಧಿಕಾರಿ ಹೇಳಿದರು. ಸರ್ಕಾರದ ಪರೀಕ್ಷಕರು ಚಿನ್ನದ ಮೌಲ್ಯ 4.77 ಕೋಟಿ ರೂ. ಎಂದು ಅಂದಾಜಿಸಿದ್ದಾರೆ. ಪ್ರಯಾಣಿಕರನ್ನು ಬಂಧಿಸಲಾಗಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಮತ್ತೊಂದು ಪ್ರಕರಣದಲ್ಲಿ ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಎಮಿರೇಟ್ಸ್ ವಿಮಾನದ ಶೋಧದ ವೇಳೆ ಡಿಆರ್‌ಐ ಅಧಿಕಾರಿಗಳು ಬಾರ್‌ಗಳ ರೂಪದಲ್ಲಿ 2.18 ಕೆ.ಜಿ. ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಚಿನ್ನವನ್ನು ವಿಮಾನದ ಮುಂಭಾಗದ ಶೌಚಾಲಯದಲ್ಲಿ ಬಚ್ಚಿಟ್ಟಿದ್ದರು. ಇದರ ಮೌಲ್ಯ 1.52 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.