ನ್ಯೂಸ್

ಸುಶಾಂತ್ ಸಾವಿನ ಕುರಿತು ಸಿಬಿಐ ತನಿಖೆ ನಡೆಯಲಿ: ವಿವಿಧ ಪಕ್ಷಗಳ ಒತ್ತಾಯ

ಪಟನಾ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತು ತನಿಖೆ ನಡೆಸಬೇಕೆಂದು ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಒತ್ತಾಯಿಸಿವೆ.
ಸುಶಾಂತ್ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಹಾಗೂ ಬಿಹಾರ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮತ್ತು ಚಲನಚಿತ್ರ ಸೆನ್ಸಾರ್ ಮಂಡಳಿಯ ಸಲಹಾ ಸಮಿತಿಯ ಸದಸ್ಯ ಲಾಲನ್ ಕುಮಾರ್ ಕೇಂದ್ರ ಗೃಹ ಸಚಿವ ಅಮಿತ್ ಶಹಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದಾರೆ.


ಒಂದು ಸಣ್ಣ ಪಟ್ಟಣದಿಂದ ಬಂದ ಸುಶಾಂತ್, ಬಾಲಿವುಡ್‌ನಲ್ಲಿ ತಮ್ಮ ಛಾಪು ಮೂಡಿಸಿದ್ದು ಬಹಳ ಕಡಿಮೆ ಅವಧಿಯಲ್ಲಿ. ಆದರೆ ಅವರ ಸಾವಿನಿಂದಾಗಿ ಇಡೀ ಚಲನಚಿತ್ರೋದ್ಯಮವೇ ಕಣ್ಣೀರಿಡುವಂತಾಗಿದೆ. ಸುಶಾಂತ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸಿಬಿಐ ತನಿಖೆಯಿಂದ ಮಾತ್ರವೇ ಸತ್ಯಾಂಶವನ್ನು ತಿಳಿಯಬಹುದು ಎಂದಿದ್ದಾರೆ.
ಸಿಬಿಐ ತನಿಖೆಯ ಬೇಡಿಕೆಯನ್ನು 15 ದಿನಗಳಲ್ಲಿ ಪೂರೈಸದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಅವರು ತಿಳಿಸಿದರು.

ಸುಶಾಂತ್‌ಗೆ ನ್ಯಾಯ ದೊರಕುವವರೆಗೂ ನಟ ಸಲ್ಮಾನ್ ಖಾನ್ ಮತ್ತು ಕರಣ್ ಜೋಹರ್ ಅವರ ಚಿತ್ರಗಳನ್ನು ಬಿಹಾರದಲ್ಲಿ ಪ್ರದರ್ಶಿಸಲು ಅನುಮತಿಸುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಮುಖಂಡ ನಿಖಿಲ್ ಕುಮಾರ್ ಕೂಡ ಸಿಬಿಐ ತನಿಖೆಗೆ ಒತ್ತಾಯಿಸಿದ್ದರು. ಬಿಜೆಪಿ ಮುಖಂಡ ಮತ್ತು ನಟ ಮನೋಜ್ ತಿವಾರಿ ಕೂಡ ಸುಶಾಂತ್ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು.