ನ್ಯೂಸ್

ಜೈಲಲ್ಲಿ ಸಿಗಲಿದೆ ಬಿಸಿ ಬಿಸಿ ಚಿಕನ್ ಖಾದ್ಯ; ಹೇಗಾಗಲಿವೆ ಗೊತ್ತಾ ಮಹಾರಾಷ್ಟ್ರದ ಜೈಲುಗಳು?

ಮುಂಬೈ: ಅಪರಾಧ ಮಾಡಿ ಜೈಲು ಸೇರಿದವರನ್ನು ಆರೋಗ್ಯವಾಗಿರುವಂತೆ ನೋಡಿಕೊಳ್ಳುವುದು ಜೈಲಿನ ಅಧಿಕಾರಿಗಳ ಜವಾಬ್ದಾರಿಯಾಗುತ್ತದೆ. ಅವರಿಗೆ ಆರೋಗ್ಯಯುತ ಮತ್ತು ರುಚಿಯಾದ ಆಹಾರ ನೀಡುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ಹಾಕಿಕೊಂಡಿರುವುದಾಗಿ ಮಹಾರಾಷ್ಟ್ರ ಪೊಲೀಸ್ ಇಲಾಖೆ ತಿಳಿಸಿದೆ.

ಈ ಬಗ್ಗೆ ಪುಣೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಹಾರಾಷ್ಟ್ರ ಜೈಲಿನ ಹೆಚ್ಚುವರಿ ಮಹಾನಿರ್ದೇಶಕ ಸುನಿಲ್ ರಾಮಾನಂದ್ ಹಲವು ಯೋಜನೆಗಳ ಕುರಿತಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಜೈಲಿನಲ್ಲಿ ಉತ್ತಮ ದರ್ಜೆಯ ಹೋಟೆಲ್ ರೀತಿಯ ಊಟದ ವ್ಯವಸ್ಥೆ ಆರಂಭಿಸಲಾಗುವುದು. ಚಿಕನ್ ಖಾದ್ಯ ಸೇರಿ ಅನೇಕ ರೀತಿಯ ಭಕ್ಷ್ಯಗಳು ಅಲ್ಲಿ ಸುಗುವಂತೆ ನೋಡಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಹಾಗೆಯೇ ಮಹಾರಾಷ್ಟ್ರದ ಚೆಂಬೂರಿನಲ್ಲಿ ಬಹುಮಹಡಿಯ ಜೈಲನ್ನು ನಿರ್ಮಿಸಲು ಸಿದ್ಧತೆ ನಡೆದಿರುವುದಾಗಿ ಅವರು ಹೇಳಿದ್ದಾರೆ. ಜೈಲುಗಳಲ್ಲಿರುವ 53 ಖೈದಿಗಳಿಗೆ ಪೆರೋಲ್ ಸಿಕ್ಕಿದ್ದು ಅವರಿಗೆ ಹೊರಗೆ ಹೋಗುವ ಅವಕಾಶವಿದೆಯಾದರೂ ಅದಕ್ಕೆ ಅವರು ಒಪ್ಪುತ್ತಿಲ್ಲ. ಮನೆಗಿಂತ ಇಲ್ಲೇ ಹೆಚ್ಚು ಸುರಕ್ಷಿತವಾಗಿದ್ದೇವವೆ ಎಂದು ಅವರು ಹೇಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇದುವರೆಗೆ ರಾಜ್ಯದಲ್ಲಿ 4243 ಖೈದಿಗಳಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿ 4157 ಖೈದಿಗಳು ಗುಣಮುಖವಾಗಿದ್ದು, ಕೇವಲ 73 ಸಕ್ರಿಯ ಪ್ರಕರಣಗಳು ಬಾಕಿಯಿವೆ. 13 ಖೈದಿಗಳು ಮತ್ತು 10 ಸಿಬ್ಬಂದಿ ಕರೊನಾಕ್ಕೆ ಬಲಿಯಾಗಿದ್ದಾರೆ. ಕರೊನಾ ಸಮಯದಲ್ಲಿ 13,115 ಖೈದಿಗಳಿಗೆ ಪೆರೋಲ್ ಮೇಲೆ ಮನೆಗೆ ತೆರಳಲು ಅವಕಾಶ ಮಾಡಿಕೊಡಲಾಗಿತ್ತು ಎಂದು ತಿಳಿಸಲಾಗಿದೆ. (ಏಜೆನ್ಸೀಸ್)