ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಶನಿವಾರ(ನವೆಂಬರ್ 23) ಮತ್ತೆ ನಿರ್ಣಾಯಕ ಮಟ್ಟವನ್ನು ತಲುಪಿದ್ದು, ವಾಯುಗುಣಮಟ್ಟ ಸೂಚ್ಯಂಕ 420 ಎಂದು ದಾಖಲಾಗಿದೆ. ರಾಷ್ಟ್ರ ರಾಜಧಾನಿಯ(Delhi) 38 ಮೇಲ್ವಿಚಾರಣಾ ಕೇಂದ್ರಗಳ ಪೈಕಿ ಒಂಬತ್ತು ನಿಲ್ದಾಣಗಳಲ್ಲಿನ ಗಾಳಿಯ ಗುಣಮಟ್ಟವನ್ನು 'ತೀವ್ರ ಪ್ಲಸ್' ವಿಭಾಗದಲ್ಲಿ ದಾಖಲಿಸಲಾಗಿದೆ. ದೆಹಲಿಯ ಈ ಒಂಬತ್ತು ಸ್ಥಳಗಳಲ್ಲಿ AQI 450ಕ್ಕಿಂತ ಹೆಚ್ಚು ದಾಖಲಾಗಿದೆ.
ಇದನ್ನು ಓದಿ: ಅರವಿಂದ್ ಕೇಜ್ರಿವಾಲ್ಗೆ ಪರೋಕ್ಷವಾಗಿ ಟಾಂಗ್; Delhi ಸಿಎಂ ಅತಿಶಿಯನ್ನು ಹೊಗಳಿದ ರಾಜ್ಯಪಾಲ ವಿಕೆ ಸಕ್ಸೇನಾ
ಹತ್ತೊಂಬತ್ತು ಇತರ ನಿಲ್ದಾಣಗಳಲ್ಲಿ ಗಾಳಿಯ ಗುಣಮಟ್ಟದ ಮಟ್ಟವು 400 ಮತ್ತು 450ರ ನಡುವೆ ದಾಖಲಾಗಿದೆ. ಆನಂದ್ ವಿಹಾರ್ AQI 457 ಅನ್ನು ದಾಖಲಿಸಿದೆ; ಅಶೋಕ್ ವಿಹಾರದಲ್ಲಿ AQI 455 ಆಗಿತ್ತು; ಚಾಂದಿನಿ ಚೌಕ್‌ನ ಎಕ್ಯೂಐ 439 ಮತ್ತು ಆರ್‌ಕೆ ಪುರಂನ ಎಕ್ಯೂಐ 421ನಲ್ಲಿ ದಾಖಲಾಗಿದೆ. 0-50 ನಡುವಿನ AQI ಒಳ್ಳೆಯದು, 51-100 ತೃಪ್ತಿದಾಯಕ, 101-200 ಮಧ್ಯಮ, 201-300 ಕಳಪೆ, 301-400 ಅತ್ಯಂತ ಕಳಪೆ ಮತ್ತು 401-500 ತೀವ್ರ ಎಂದು ಪರಿಗಣಿಸಲಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ 20 ದಿನಗಳಿಗೂ ಹೆಚ್ಚು ಕಾಲ ಅಪಾಯಕಾರಿಯಾಗಿಯೇ ಉಳಿದಿದೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ, ದೆಹಲಿಯ AQI 371 ಆಗಿತ್ತು. ಇದು ಅತ್ಯಂತ ಕಳಪೆ ವಿಭಾಗದಲ್ಲಿದೆ. ಶುಕ್ರವಾರ, ಗ್ರಾಪ್ -4 ನಿರ್ಬಂಧಗಳ ಕಳಪೆ ಅನುಷ್ಠಾನದ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು. ವಿಶೇಷವಾಗಿ ಟ್ರಕ್‌ಗಳ ಪ್ರವೇಶಕ್ಕೆ ಸಂಬಂಧಿಸಿದವು.
ನವೆಂಬರ್ 25ರವರೆಗೆ GRAP-4 ನಿರ್ಬಂಧಗಳನ್ನು ಮುಂದುವರಿಸಲು ಅಧಿಕಾರಿಗಳಿಗೆ ಆದೇಶಿಸಿದ್ದು, ನಂತರ ನಿರ್ಬಂಧಗಳನ್ನು ತೆಗೆದುಹಾಕಬಹುದೇ ಎಂದು ನಿರ್ಧರಿಸುತ್ತದೆ. ಏತನ್ಮಧ್ಯೆ ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಅವರು ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯವನ್ನು ಕಡಿಮೆ ಮಾಡಲು ಮೋಡ ಬಿತ್ತನೆಯನ್ನು ಪರಿಗಣಿಸುವಂತೆ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರಿಗೆ ನಾಲ್ಕು ಬಾರಿ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ದೆಹಲಿಯಲ್ಲಿ ಇಂದು ಕನಿಷ್ಠ ತಾಪಮಾನ 11.4 ಡಿಗ್ರಿ ಸೆಲ್ಸಿಯಸ್ ಇತ್ತು. ಬೆಳಗ್ಗೆ 8.30ರ ವೇಳೆಗೆ ತೇವಾಂಶದ ಪ್ರಮಾಣ ಶೇ.97ರಷ್ಟಿತ್ತು. ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಆಗುವ ನಿರೀಕ್ಷೆಯಿದೆ.(ಏಜೆನ್ಸೀಸ್)