ದೆಹಲಿ: ನಾವು ಗೊತ್ತಿಲ್ಲದ ಸ್ಥಳಕ್ಕೆ ಹೋದಾಗ ಆ ಪ್ರದೇಶದ ಜನರಿಗೆ ನಮಗೆ ಬೇಕಾದ ವಿಳಾಸವನ್ನು ಕೇಳುತ್ತೇವೆ. ಆದರೆ ವಿಳಾಸ ಕೇಳಿದ ಡೆಲಿವರಿ ಬಾಯ್ ಮೇಲೆ ಮಹಿಳೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ದ್ವಾರಕಾದ ಸೆಕ್ಟರ್ 23 ರಲ್ಲಿ ಶುಕ್ರವಾರ ನಡೆದ ಈ ಘಟನೆಯು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಮಹಿಳೆಗೆ ಡೆಲಿವರಿ ಏಜೆಂಟ್ ಅಡ್ರೆಸ್ ಕೇಳಿದ್ದು, ಆಕೆ ವೇಗವಾಗಿ ತಿರುಗಿ ವ್ಯಕ್ತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸುವುದರೆ ಜತೆಗೆ ಆತನ ಸ್ಕೂಟರ್‌ನಿಂದ ಕೀಗಳನ್ನು ಹೊರತೆಗೆದು ಹತ್ತಿರದ ಪೊದೆಗಳಿಗೆ ಎಸೆದಿದ್ದಾಳೆ.
ಡೆಲಿವರಿ ಏಜೆಂಟ್ ಸ್ಕೂಟರ್‌ನಿಂದ ಕೆಳಗಿಳಿಯುತ್ತಿದ್ದಂತೆಯೇ ಆಕೆ ವಾಹನವನ್ನು ನೆಲಕ್ಕೆ ತಳ್ಳಿದ್ದು, ಇದನ್ನು ಗಮನಿಸಿದ ಹಲವಾರು ನಿವಾಸಿಗಳು ಶಬ್ದ ಕೇಳಿ ಜಮಾಯಿಸಿದ್ದಾರೆ. ಮಹಿಳೆಯನ್ನು ತಡೆಯಲು ಯತ್ನಿಸಿದರೂ ಆಕೆ ಯಾರ ಮಾತನ್ನೂ ಕೇಳಲಿಲ್ಲ. ಹೀಗಾಗಿ ಬಳಿಕ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮಹಿಳೆಯನ್ನು ಸಮಾಧಾನ ಪಡಿಸಲು ಯತ್ನಿಸಿದ್ದು, ಮಹಿಳೆ ಪೊಲೀಸರನ್ನು ನಿಂದಿಸಿದ್ದಾಳೆ. ಮಹಿಳಾ ಪೇದೆ ಆಕೆಯನ್ನು ಹಿಡಿಯಲು ಯತ್ನಿಸಿದಾಗ ಆರೋಪಿ ಮಹಿಳೆ ಆಕೆಯ ಕೂದಲು ಎಳೆದು ಹಲ್ಲೆ ನಡೆಸಿದ್ದಾಳೆ. ಕೊನೆಗೆ ಇತರೆ ಸಿಬ್ಬಂದಿ ಮಹಿಳಾ ಪೇದೆಯ ಸಹಾಯದಿಂದ ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.
ಈ ಹೈವೋಲ್ವೇಜ್ ಡ್ರಾಮಾ ಗಂಟೆಗಟ್ಟಲೆ ನಡೆದಿದ್ದು, 42 ವರ್ಷದ ಮಹಿಳೆ ಸೊಸೈಟಿಯಲ್ಲಿ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದಾಳೆ. ಈ ಹಿಂದೆಯೂ ಆರೋಪಿ ಮಹಿಳೆ ಇಂತಹ ಹಲವು ಘಟನೆಗಳನ್ನು ನಡೆಸಿದ್ದರೂ, ಯಾರೂ ದೂರು ನೀಡದ ಕಾರಣ ಪೊಲೀಸರು ಆಕೆಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇನ್ನು, ಯುವಕನನ್ನು ಪೊಲೀಸರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಈ ಕುರಿತಾಗಿ ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್)