ನ್ಯೂಸ್

ಪಾರ್ಕ್​ನಲ್ಲಿ ಯುವತಿಯ ಹತ್ಯೆ ಪ್ರಕರಣ: ವಿಚಾರಣೆಯಲ್ಲಿ ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ಆರೋಪಿ

ನವದೆಹಲಿ: ಸೋದರಸಂಬಂಧಿಯೊಬ್ಬ ಪಾರ್ಕಿನಲ್ಲೇ ಯುವತಿಯ ತಲೆಗೆ ರಾಡ್​ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ಮಾಳವೀಯ ನಗರದಲ್ಲಿ ಶುಕ್ರವಾರ ನಡೆದಿದೆ. ಈ ಘಟನೆ ಜನತೆಗೆ ಆಘಾತಕ್ಕೆ ದೂಡಿದ್ದು, ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸಹ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮೃತ ವಿದ್ಯಾರ್ಥಿಯನ್ನು ನಗ್ರೀಸ್​ ಎಂದು ಗುರುತಿಸಲಾಗಿದೆ. ಈಕೆ ಕಮಲ ನೆಗರು ಕಾಲೇಜಿನ ವಿದ್ಯಾರ್ಥಿನಿ. ಪೊಲೀಸರ ಪ್ರಕಾರ ಮದುವೆಗೆ ಒಪ್ಪದಿದ್ದಕ್ಕೆ ಆಕೆಯ ಸೋದರಸಂಬಂಧಿಯಿಂದಲೇ ಹತ್ಯೆಯಾಗಿದ್ದಾಳೆ. ಈ ಘಟನೆ ದೆಹಲಿಯ ಅರಬಿಂದೋ ಕಾಲೇಜಿನ ಸಮೀಪ ಇರುವ ಮಾಳವೀಯ ನಗರದಲ್ಲಿ ನಡೆದಿದೆ. 28 ವರ್ಷದ ಆರೋಪಿ ಇರ್ಫಾನ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಕಡಿಮೆ ಸಂಪಾದನೆ

ಆರೋಪಿ ಇರ್ಫಾನ್​ ಸ್ವಿಗ್ಗಿ ಆ್ಯಪ್​ನಲ್ಲಿ ಫುಡ್​ ಡೆಲಿವರಿ ಬಾಯ್​ ಆಗಿ ಕೆಲಸ ಮಾಡುತ್ತಿದ್ದ. ಪ್ರಾಥಮಿಕ ತನಿಖೆಯ ಪ್ರಕಾರ ಇರ್ಫಾನ್​ ಸಂಪಾದನೆ ಕಡಿಮೆ ಇರುವುದರಿಂದ ಆತನಿಗೆ ಮದುವೆ ಮಾಡಿಕೊಡಲು ನಗ್ರೀಸ್​ ಕುಟುಂಬ ನಿರಾಕರಿಸಿತು. ಇದರ ಬೆನ್ನಲ್ಲೇ ನಗ್ರೀಸ್​ ಕೂಡ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದಳು. ಇದರಿಂದ ಇರ್ಫಾನ್​ ಅಸಮಾಧಾನಗೊಂಡಿದ್ದ. ಆಕೆ ನಿತ್ಯವೂ ಮಾಳವೀಯ ನಗರದಲ್ಲಿ ಕೋಚಿಂಗ್​ ಕ್ಲಾಸ್​ಗೆ ಹಾಜರಾಗುತ್ತಿದ್ದ ವಿಚಾರ ಇರ್ಫಾನ್​ಗೆ ತಿಳಿದಿತ್ತು. ಅದೇ ದಾರಿಯಲ್ಲಿ ಪಾರ್ಕಿನಲ್ಲಿ ಇಂದು ಆಕೆಯನ್ನು ಇರ್ಫಾನ್​ ಹತ್ಯೆ ಮಾಡಿದ್ದಾನೆ.

ಮೂರು ದಿನದ ಮುಂಚೆಯೇ ಸಂಚು

ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಇರ್ಫಾನ್​ ಪಾರ್ಕ್​ ತಲುಪಿದ. ಈ ವೇಳೆ ಆತನ ಎದುರಾಗ ನಗ್ರೀಸ್​ಗೆ ಮಾತನಾಡುವ ಬಯಕೆ ವ್ಯಕ್ತಪಡಿಸಿದ. ಆದರೆ, ಆಕೆ ಆತನ ಮಾತು ಕೇಳಲು ನಿರಾಕರಿಸಿದಳು. ಇದರಿಂದ ಕುಪಿತಗೊಂಡ ಇರ್ಫಾನ್​, ನಗ್ರೀಸ್​ ಮೇಲೆ ಕಬ್ಬಿಣದ ಸಲಾಕೆಯಿಂದ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮೂರು ದಿನದ ಮುಂಚೆಯೇ ಆಕೆಯನ್ನು ಹತ್ಯೆ ಮಾಡಬೇಕೆಂದು ಪ್ಲಾನ್​ ಮಾಡಿದ್ದೇ ಎಂದು ಇರ್ಫಾನ್​ ಪೊಲೀಸ್​ ತನಿಖೆಯಲ್ಲಿ ಬಾಯ್ಬಿಟ್ಟಿದ್ದಾನೆ.

ತಲೆಗೆ ಬಲವಾಗಿ ಹೊಡೆತ

ಕೊಲೆಯ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ದೆಹಲಿ ದಕ್ಷಿಣ ವಿಭಾಗದ ಡೆಪ್ಯೂಟಿ ಪೊಲೀಸ್​ ಕಮಿಷನರ್​ ಮತ್ತು ಹಿರಿಯ ಪೊಲೀಸ್​ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ನಗ್ರೀಸ್​ ಮೃತದೇಹದ ಪಕ್ಕದಲ್ಲೇ ಒಂದು ಕಬ್ಬಿಣ ಸಲಾಕೆ ಪತ್ತೆಯಾಯಿತು. ನಗ್ರೀಸ್​ ತಲೆಗೆ ಬಲವಾಗಿ ಹೊಡೆದಿರುವುದರಿಂದ ಸ್ಥಳದಲ್ಲೇ ನಗ್ರೀಸ್​ ಮೃತಪಟ್ಟಿದ್ದಾಳೆ. ಸದ್ಯ ಇರ್ಫಾನ್​ ಬಂಧನವಾಗಿದ್ದು, ವಿಚಾರಣೆ ಮುಂದುವರಿದಿದೆ.

ದೆಹಲಿ ಅತ್ಯಂತ ಅಸುರಕ್ಷಿತ

ಈ ಘಟನೆಯ ಬಗ್ಗೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಾಲಿವಾಲ್ ಟ್ವೀಟ್​ ಮೂಲಕ​ ಪ್ರತಿಕ್ರಿಯೆ ನೀಡಿದ್ದಾರೆ. ಮಾಳವೀಯ ನಗರದಂತಹ ಐಷಾರಾಮಿ ಏರಿಯಾದಲ್ಲಿ ಯುವತಿಯೊಬ್ಬಳ ಮೇಲೆ ರಾಡ್​ನಿಂದ ಹೊಡೆದು ಹಲ್ಲೆ ಮಾಡಿರುವುದನ್ನು ನೋಡಿದರೆ, ದೆಹಲಿ ಅತ್ಯಂತ ಅಸುರಕ್ಷಿತವಾಗಿದೆ. ಇದು ಯಾರಿಗೂ ಮುಖ್ಯವಲ್ಲ ಎನ್ನುವಂತಾಗಿದೆ. ಕೇವಲ ಪತ್ರಿಕಾ ವರದಿಗಳಲ್ಲಿ ಹುಡುಗಿಯರ ಹೆಸರುಗಳನ್ನು ಬದಲಾಯಿಸಲಾಗುತ್ತದೆ ಹೊರತು ಅಪರಾಧಗಳು ಮಾತ್ರ ದೆಹಲಿಯಲ್ಲಿ ನಿಲ್ಲುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. (ಏಜೆನ್ಸೀಸ್​)